ಸುರೇಶ್ ಬೆಂಬಲಿಸಿ: ರಫೀಕ್
ಕುಣಿಗಲ್: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದೆ. ಅಲ್ಪಸಂಖ್ಯಾತರ, ದಲಿತರ, ಹಿಂದುಳಿದ ವರ್ಗದವರು ಸಮಗ್ರ ಅಭಿವೃದ್ಧಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದೆ. ಈ ಬಾರಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರನ್ನು ಬೆಂಬಲಿಸುವಂತೆ ತುಮಕೂರು ಶಾಸಕ ಡಾ.ರಫೀಕ್ ಅಹಮದ್ ಮನವಿ ಮಾಡಿದರು.
ಭಾನುವಾರ ಸಂಜೆ ಪಟ್ಟಣದ ಕೋಟೆ ಪ್ರದೇಶ ಸೇರಿದಂತೆ ವಿವಿಧೆಡೆಯ ಮುಸ್ಲಿಂ ಬಡಾವಣೆಗಳಲ್ಲಿ, ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆ ಪ್ರಯುಕ್ತ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಮತಯಾಚಿಸಿದ ಅವರು, ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಯ ಪ್ರಣಾಳಿಕೆಗಳಲ್ಲಿ ನುಡಿದಂತೆ, ಅಧಿಕಾರಕ್ಕೆ ಬಂದ ತಕ್ಷಣವೆ ನಡೆದುಕೊಂಡಿದೆ. ಬಿಪಿಎಲ್ ಕಾರ್ಡ್‌ದಾರರಿಗೆ 1ಕ್ಕೆ ಕೆಜೆ ಅಕ್ಕಿ, ದಲಿತರು, ಹಿಂದುಳಿದ ವರ್ಗಗಳವರ ಬಾಕಿ ಇದ್ದ ಸಾಲವನ್ನು ಮನ್ನಾ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಆಡಳಿತ ನೀಡಲಿದೆ. ಯಾವುದೇ ತತ್ವ -ಸಿದ್ಧಾಂತವಿಲ್ಲದ ಕೇವಲ ಜಾತ್ಯತೀತಕತೆ ಎಂದು ಅಲ್ಪಸಂಖ್ಯಾತ ಬಾಂಧವರ ಮತ ಸೆಳೆಯಲು ಮುಂದಾಗಿರುವ ಜೆಡಿಎಸ್, ಒಳಗೊಳಗೆ ಕೋಮುವಾದಿ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಟುಸತ್ಯ ಜನತೆ ಅರಿಯಬೇಕಿದೆ. ಕೇಂದ್ರದ ಕಾಂಗ್ರೆಸ್ ಸರ್ಕಾರ ಈಗಾಗಲೇ
ಸಾಕಷ್ಟು ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಿಸಿ ಅನುಷ್ಠಾನಗೊಳಿಸಿದ್ದು, ಮತ್ತಷ್ಟು ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ರೆಹಮಾನ್ ಶರೀಫ್, ಸದಸ್ಯ ದಸ್ತಗೀರ್, ಗೌಸ್, ಕೆಜಿಎನ್ ರಫೀಕ್, ಮುಸ್ತಾಫ ಖಾನ್, ನಾಸೀರ್ ಪಾಶ, ಮುನ್ನ, ಇಂದ್ರಕುಮಾರ್, ರಮೇಶ್ ಸೇರಿದಂತೆ ಇತರರು ಶಾಸಕರ ಜೊತೆಗಿದ್ದರು.