ಸ್ವಾತಂತ್ರ್ಯದ ದುರುಪಯೋಗ ಸಲ್ಲ: ದಂಡಾಧಿಕಾರಿ ಮಂಜೇಗೌಡ
ತುರುವೇಕೆರೆ: ದೇಶಕ್ಕೆ ಬಂದಿರುವ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೇ ಹೊರೆತು ದುರುಪಯೋಗ ಪಡಿಸಿಕೊಳ್ಳಬಾರದು. ದೇಶದ ಸಾರ್ವಭೌಮತೆಗೆ ಬಲಿದಾನ ಮಾಡಿದ ದೇಶ ಭಕ್ತರು ಕಂಡ ನನಸಾಗಬೇಕಾದರೆ ಪ್ರಾಮಾಣಿಕವಾದ ಆಡಳಿತ ನಡೆಸುವುದು ಮುಖ್ಯವಾಗಿದೆ ಎಂದು ತಾಲೂಕು ದಂಡಾಧಿಕಾರಿ ಜಿ.ಪಿ.ಮಂಜೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ 67 ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರೆವೇರಿಸಿ ಮಾತನಾಡುತ್ತಿದ್ದರು.
ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜುಂಜಯ್ಯನವರು ಸ್ವಾತಂತ್ರ್ಯೋತ್ಸವ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಬಿ.ಜಗದೀಶ್ ವಹಿಸಿದ್ದರು.
ತಾಪಂ ಅಧ್ಯಕ್ಷ ಲಕ್ಷ್ಮೀಕಾಂತ್, ಜಿಪಂ ಸದಸ್ಯರಾದ ಉಗ್ರಯ್ಯ, ಮಂಗಳ ಗೌರಮ್ಮ, ತಾಲೂಕು ಪಂಚಾಯ್ತಿ ಸದಸ್ಯ ವೆಂಕಟರಾಮಯ್ಯ, ನಾಗಮಣಿ, ಬಿಇಓ ರಂಗಧಾಮಯ್ಯ, ಪ್ರಭಾರ ಇಓ ನಾರಾಯಣಸ್ವಾಮಿ, ಹೇಮಾವತಿ ನಾಲಾ ಎಂಜಿನಿಯರ್ ಚಿದಾನಂದ್, ಪಿಡಬ್ಲ್ಯುಡಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಯಾನಂದ್, ಸಿಪಿಐ ತಿರುಮಲಯ್ಯ, ಅಬಕಾರಿ ಇನ್ಸ್‌ಪೆಕ್ಟರ್ ವಿಜಯಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜಣ್ಣ ಪಾಲ್ಗೊಂಡಿದ್ದರು.
ವನ್ಯಜೀವಿ ಛಾಯಾಗ್ರಾಹಕ ದಂಡಿನಶಿವರ ತಿಮ್ಮೇಗೌಡ, ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್‌ನ ಟಿ.ಎನ್. ರಾಮಕೃಷ್ಣ, ಜಾನಪದ ಕಲಾವಿದ ಮೀಸೆ ರಾಮಣ್ಣ, ಸೋಬಾನೆ ಪದ ಹಾಡುಗಾರ್ತಿ ದ್ಯಾವಮ್ಮ ರವರನ್ನು ಸನ್ಮಾನಿಸಲಾಯಿತು.
ಬಹುಮಾನ: ಪಥ ಸಂಚಲನದಲ್ಲಿ ಮಾಧ್ಯಮ ಶಾಲಾ ವಿಭಾಗದಲ್ಲಿ ಜೆ ಪಿ ಆಂಗ್ಲ ಪಾಠಶಾಲೆ, ಮಯೂರ ಕಾನ್ವೆಂಟ್ ಹಾಗೂ ದೀಪು ಬಾಲಕರ ಶಾಲೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದುಕೊಂಡವು. ಹಿರಿಯರ ವಿಭಾಗದಲ್ಲಿ ಜಿಜೆಸಿ ಪ್ರಥಮ ಸ್ಥಾನ ಪಡೆದುಕೊಂಡರೆ ಮಯೂರು ಕಾನ್ವೆಂಟ್ ದ್ವಿತೀಯ, ಸರಸ್ವತಿ ಬಾಲಕಿಯರು ತೃತೀಯ ಬಹುಮಾನ ಗಳಿಸಿದರು. ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಮಯೂರ ಕಾನ್ವೆಂಟ್ ಪ್ರಥಮ, ಜೆಪಿ ದ್ವಿತೀಯ, ಹಾಗೂ ವಿಜಯ ವಿಶ್ವ ವಿದ್ಯಾಶಾಲೆ ತೃತೀಯ ಬಹುಮಾನವನ್ನು ಗಳಿಸಿತು. ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ ವತಿಯಿಂದ ದೇಶಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ ನೂರಾರು ದೇಶಭಕ್ತರ ಭಾವಚಿತ್ರವನ್ನು ಪ್ರದರ್ಶನ ಮಾಡಲಾಯಿತು. ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖಾ ವತಿಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ದಿಲೀಪ್ ಕುಮಾರ್, ರವಿ ಕುಮಾರ್, ನಾಜೀಂ ರವರಿಗೆ ನಗದು ಬಹುಮಾನ ನೀಡಲಾಯಿತು. 4 ಮಂದಿ ಅಂಗವೈಕಲ್ಯವುಳ್ಳವರಿಗೆ ವೀಲ್‌ಚೇರ್ ನೀಡಲಾಯಿತು.