ಅಕ್ರಮ ಮರಳು ಗಣಿಗಾರಿಕೆ ತಡೆಗೆ ಒತ್ತು: ಸಭೆ ನಿರ್ಣಯ
ತುಮಕೂರು: ಕರ್ನಾಟಕ ಉಪ ಖನಿಜ ರಿಯಾಯತಿ ನಿಯಮಾವಳಿ 1994 ನಿಯಮ 31(ಆರ್) 10 ರಂತೆ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರ ಸಾಗಿಸುವುದನ್ನು ನಿಯಂತ್ರಿಸುವ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಮರಳು ಸಾಗಾಣಿಕೆ ಮಾಡುವ ಎಲ್ಲಾ ವಾಹನಗಳಿಗೆ ಕಡ್‌ಡಾಯವಾಗಿ ಈ ಕೂಡಲೇ ಜಿಪಿಎಸ್(ಗ್ಲೋಬಲ್ ಪೋಸಿಷನಿಂಗ್ ಸಿಸ್ಟಮ್) ಆರ್‌ಎಫ್‌ಡಿಐ ಅಂಗೀಕೃತ ಕಂಪನಿಗಳಿಂದ ಪಡೆದು ಅಳವಡಿಸಬೇಕು ಎಂಬುದರ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ವಾಹನದ ಮುಂಭಾಗದಲ್ಲಿ ಹಳದಿ ಬಣ್ಣ ಹಚ್ಚಬೇಕು, ಮುಂಭಾಗ, ಹಿಂಭಾಗ ಮತ್ತು ಪಾರ್ಶ್ವ ಭಾಗಗಳಲ್ಲಿ ವಿವರಗಳನ್ನು ನಮೂದಿಸಬೇಕು, ಮರಳಿಗಾಗಿ ಹಾಗೂ ಸಾರ್ವಜನಿಕ ಸಹಾಯವಾಣಿ ನಂಬರ್ ಅನ್ನು ನಮೂದಿಸಬೇಕು ಎಂಬುದರ ಕುರಿತು ನಿರ್ಧರಿಸಲಾಯಿತು.
ನಿರ್ಣಯ ಅಂಗೀಕಾರ: ಖನಿಜ ರವಾನೆ ಪರವಾನಗಿಯಲ್ಲಿ ನಮೂದಿಸಿದ ಪ್ರಮಾಣದ ಮರಳನ್ನು ಮಾತ್ರವೇ ಸಾಗಿಸಬೇಕು. ಈ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅದರಂತೆ ಮರಳು ಸಾಗಾಣಿಕೆ ಮಾಡಬೇಕು. ತಪ್ಪಿದಲ್ಲಿ ನಿಯಮಾನುಸಾರ ಮರಳು ಸಾಗಾಣಿಕೆ ಮಾಡುವ ಎಲ್ಲಾ ವಾಹನ ಮಾಲೀಕರ ವಿರುದ್ಧ ಕ್ರಮತೆಗೆದುಕೊಳ್ಳುವ ನಿರ್ಣಯ ಅಂಗೀಕರಿಸಲಾಯಿತು. ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ತುಮಕೂರು, ಉಪನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮುಂತಾದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.