ಸಂತೆ ಕಾಮಗಾರಿಯಲ್ಲಿ ಲೋಪವಾಗಿಲ್ಲ: ಸ್ಪಷ್ಟನೆ
ತುರುವೇಕೆರೆ: ತಾಲೂಕಿನ ವಿವಿಧೆಡೆ ಮಾಡಲಾಗಿದೆ ಎನ್ನಲಾಗಿರುವ ಗ್ರಾಮೀಣ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಶಾಸಕರು ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀಕಾಂತ್, ತಾಲೂಕಿನ ರೈತಾಪಿ ವರ್ಗ ತಾವು ಬೆಳೆದ ಬೆಳೆಗಳನ್ನು ತಮ್ಮ ತಮ್ಮ ಸಮೀಪ ಇರುವ ಸ್ಥಳಗಳಲ್ಲಿ ಮಾರಾಟ ಮಾಡಲಿ ಎಂಬ ಕಾರಣಕ್ಕೆ ಕೆಲವು ಪ್ರಮುಖ ಸ್ಥಳಗಳನ್ನು ಗುರುತಿಸಿ ಗ್ರಾಮೀಣ ಮಾರುಕಟ್ಟೆ ಅಭಿವೃದ್ಧಿ ಪಡಿಸಲು ಮುಂದಾಗಿದ್ದೇವೆ. ಈ ನಿಟ್ಟಿನಲ್ಲಿ ಸಂತೆ ಮಾಡಲು ಉದ್ದೇಶಿಸಿರುವ ಗ್ರಾಮಗಳ ಸ್ಥಳಗಳಲ್ಲಿ ಇದ್ದ ಹಲವಾರು ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಲಾಗಿದೆ. ಸಂತೆ ಮಾಡಲು ಅಗತ್ಯವಿರುವ ಕೆಲವೆಡೆ ಚರಂಡಿಗಳನ್ನೂ ಸಹ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ರೈತಾಪಿ ವರ್ಗಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮ ಮಾಡಲಾಗಿದೆಯೇ ಹೊರತು, ಇದರಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂತೆ ಅನಿವಾರ್ಯ: ಕೆಲವು ಗ್ರಾಮಗಳಲ್ಲಿ ಸಂತೆ ಮಾಡುವುದು ಅನಿವಾರ್ಯವಾಗಿರುವುದರಿಂದ ಕೃಷಿ ಮಾರುಕಟ್ಟೆ ಸಮಿತಿ ಅನುಮತಿ ಕೇಳಲಾಗಿದೆ. ಮಾರುಕಟ್ಟೆ ಅಭಿವೃದ್ಧಿ ಪಡಿಸುವ ಸಲುವಾಗಿ ಬಹಳ ಆಳವಾಗಿದ್ದ ಗ್ರಾಮದ ಹಳ್ಳ, ಕೊಳಚೆ ಗುಂಡಿ, ತಿಪ್ಪೆ ಗುಂಡಿಗಳನ್ನು ಲೋಡುಗಟ್ಟಲೆ ಮಣ್ಣು ಸುರಿದು ಮುಚ್ಚಲಾಗಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಮಾಡಲು ಹೆಚ್ಚಿನ ಅನುದಾನ ಪಡೆದು ರೈತಾಪಿಗಳಿಗೆ ಅನುಕೂಲವಾಗುವ ಮಾರುಕಟ್ಟೆ ನಿರ್ಮಿಸಲಾಗುವುದು ಎಂದು ತಾಪಂ ಅಧ್ಯಕ್ಷ ಲಕ್ಷ್ಮೀಕಾಂತ್ ಸ್ಪಷ್ಟಪಡಿಸಿದರು. ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಮಾರುಕಟ್ಟೆ ನಿರ್ಮಾಣ ಮಾಡುವ ಸಲುವಾಗಿ ಪ್ರಾರಂಭಿಕವಾದ ಕಾಮಗಾರಿ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಅಭಿವೃದ್ಧಿ ಪಡಿಸುವ ಮೂಲಕ ಅಲ್ಲಿನ ರೈತಾಪಿ ವರ್ಗಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಮಾರುಕಟ್ಟೆ ನಿರ್ಮಾಣ ಸಂಬಂಧ ಯಾವುದೇ ಲೋಪವಾಗಿಲ್ಲ. ಬಿಡುಗಡೆಯಾಗಿರುವ ಹಣಕ್ಕೆ ತಕ್ಕದಾದ ಕಾಮಗಾರಿಯಾಗಿದೆ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಸಮರ್ಥಿಸಿಕೊಂಡರು. ಕೋಳಾಲ ಗಂಗಾಧರ್, ಮುನಿಯೂರು ರಾಮಚಂದ್ರು ಮತ್ತಿತರರು ಹಾಜರಿದ್ದರು.
25 ರಂದು ಆರೋಗ್ಯ ಶಿಬಿರ
ಶಿರಾ: ತಾಲೂಕು ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಆ.25 ರಂದು ನಗರದಲ್ಲಿ ಹೃದಯ ಸಂಬಂಧಿ ರೋಗಗಳ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಶ್ರೀರಂಗನಾಥ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಳಿಗ್ಗೆ 9 ಗಂಟೆಗೆ ಆಯೋಜಿಸಿಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ರಾಘವೇಂದ್ರ ಸ್ವಾಮಿ
ಆರಾಧನೆ ಇಂದಿನಿಂದ
ಕುಣಿಗಲ್: ಪಟ್ಟಣದ ಮದ್ದೂರು ರಸ್ತೆಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುಸಾರ್ವಭೌಮರ 342ನೇ ಆರಾಧನಾ ಮಹೋತ್ಸವ ಇದೇ 20 ರಿಂದ 23ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಠದ ವ್ಯವಸ್ಥಾಪಕ ಗುರುರಾಜರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಗಿನ ಜಾವ ಧಾರ್ಮಿಕ ಪೂಜಾವಿಧಿವಿಧಾನಗಳು ನೆರವೇರಲಿದ್ದು ಪ್ರತಿದಿನ ಸಂಜೆ ಆರು ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 20ರಂದು ತ್ರಿವಿಕ್ರಮಾಚಾರ್ಯ ಜಮದಗ್ನಿಯವರಿಂದ ರಾಘವೇಂದ್ರ ವಿಜಯ ಪ್ರವಚನೆ, 21ರಂದು ಭವಾನಿಕುಲಕರ್ಣಿಯವರಿಂದ ಭಕ್ತಿಗೀತೆ ಗಾಯನ, 22ರಂದು ಬೆಂಗಳೂರು ಭರತಾಂಜಲಿ ನಾಟ್ಯಶಾಲೆ ಇವರಿಂದ ಭರತನಾಟ್ಯ ಪ್ರದರ್ಶನ,23ರಂದು ಕು.ಚಂದನಾರವರಿಂದ ಭಕ್ತಿಗೀತೆ ಗಾಯನವನ್ನು ಏರ್ಪಡಿಸಲಾಗಿದ್ದು, 23ರಂದು ಪ್ರಾತಃಮಹಾರಥೋತ್ಸವ ಹಮ್ಮಿಕೊಳ್ಳಲಾಗಿದೆ.
ಇಂದು, ನಾಳೆ ತಾಲೂಕು
ಮಟ್ಟದ ಕ್ರೀಡಾಕೂಟ
ಚಿಕ್ಕನಾಯನಕಹಳ್ಳಿ: ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಆ.20 ಮತ್ತು 21 ಹಮ್ಮಿಕೊಳ್ಳಲಾಗಿದೆ.ಕ್ರೀಡಾ ಕೂಟವನ್ನು ಬಾಲಕ ಮತ್ತು ಬಾಲಕಿಯರಿಗೆ ಹಮ್ಮಿಕೊಳ್ಳಲಾಗಿದ್ದು, ಕ್ರೀಡೆಗಳನ್ನು ಸ್ಥಳಾವಕಾಶದ ಅಗತ್ಯಕ್ಕಾಗಿ ತಾಲೂಕು ಕ್ರೀಡಾಂಗಣ ಮ್ತತು ಸರ್ಕರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೈದಾನ ಎರಡು ಕಡೆ ನಡೆಸಲಾಗುವುದು. ತಾಲೂಕಿನ ಹೆಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ಶಾಲಾ ಮಕ್ಕಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಮಾಡುವುದು ಎಂದು ಅವರು ತಿಳಿಸಿದ್ದಾರೆ.
23 ರಂದು ಶಾಲಾ ಮಕ್ಕಳಿಗೆ ಸ್ಪರ್ಧೆ
ಮಧುಗಿರಿ: 2013-14ನೇ ಸಾಲಿನ ಎನ್ಪಿಇಪಿಯಡಿ ಜಿಲ್ಲಾ ಮಟ್ಟದ ಏಕ ಪಾತ್ರಾಭಿನಯ ಸ್ಪರ್ಧಾ ಕಾರ್ಯಕ್ರಮವನ್ನು ಆ.23 ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಉಪ ನಿರ್ದೇಶಕರ ಕಚೇರಿ ಮುಂಭಾಗವಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ ಪ್ರತಿ ತಾಲೂಕಿನಿಂದ ಒಂದು ಸರ್ಕಾರಿ ಪ್ರೌಢಶಾಲಾ ತಂಡ ಅಂದರೆ 9ನೇ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಜಿಲ್ಲಾ ಹಂತದ ಸ್ಪರ್ಧೆಗೆ ಭಾಗವಹಿಸಲು ಕಳಿಸಬೇಕಿದೆ ಎಂದು ಉಪ ನಿರ್ದೇಶಕ ಟಿ.ಎಸ್. ಆಂಜನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಫಲಿತಾಂಶ
ತುಮಕೂರು: ತುಮಕೂರು ವಿವಿ 2013 ಮೇ-ಜೂನ್ ತಿಂಗಳಲ್ಲಿ ನಡೆಸಿದ ಬಿಬಿಎಂ, ಬಿಕಾಂ, ಬಿಸಿಎ, ಬಿಎಸ್ಸಿ, ಬಿಎ, ಬಿಕಾಂ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಆ. 20 ರಂದು ಬೆಳಗ್ಗೆ 11 ಗಂಟೆಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ಪ್ರಕಟಿಸಲಾಗುವುದು. ಹಾಗೆಯೇ ಕಳೆದ ಜೂನ್-ಜುಲೈ ತಿಂಗಳಲ್ಲಿ ನಡೆಸಿದ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಇದೇ ದಿನ ಮಧ್ಯಾಹ್ನ 3 ಗಂಟೆಗೆ ಸಂಬಂಧಪಟ್ಟ ಕಾಲೇಜಿನ ಸಿಬ್ಬಂದಿ ಪಡೆಯಬಹುದಾಗಿದೆ ಎಂದು ಪರೀಕ್ಷಾಂಗ ಕುಲಸಚಿವರು ತಿಳಿಸಿದ್ದಾರೆ.
ಕಾರ್ಯಾಗಾರ ಮುಂದಕ್ಕೆ
ಇದೇ ತಿಂಗಳ 21 ರಂದು ತುಮಕೂರಿನಲ್ಲಿ ಏರ್ಪಾಟಾಗಿದ್ದ ಹಿಂದಿ ಭಾಷಾ ಪ್ರೌಢಶಾಲಾ ಶಿಕ್ಷಕರ ಕಾರ್ಯಾಗಾರವನ್ನು ಇದೇ ತಿಂಗಳ 23 ಕ್ಕೆ ಮುಂದೂಡಲಾಗಿದೆ. ಹಿಂದಿ ಭಾಷಾ ಶಿಕ್ಷಕರು ಚುನಾವಣಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಈ ಕಾರ್ಯಾಗಾರವನ್ನು ಮುಂದೂಡಲಾಗಿದ್ದು, 23 ರಂದು ತುಮಕೂರಿನ ಕ್ಯಾತ್ಸಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು 9 ನೇ ತರಗತಿಯ ಹೊಸ ಪಠ್ಯಪುಸ್ತಕದ ವಿಶ್ಲೇಷಣೆ ಹಾಗೂ ಪಾಠ ಬೋಧನೆ ಪಾಠೋಪಕರಣಗಳ ಹಾಗೂ ತರಗತಿ ಬೋಧನೆಯ ವಿಚಾರಗಳನ್ನು ಸಂಪನ್ಮೂಲ ವ್ಯಕ್ತಿ ಟಿ.ಆರ್. ಜಗದೀಶ್ ನೀಡಲಿದ್ದಾರೆ. ಕಾರ್ಯಕ್ರಮ ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ:ಕೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಏರ್ಪಾಟಾಗಿದೆ.
ಕವಿತಾಕೃಷ್ಣಗೆ ಸನ್ಮಾನ
ಪ್ರದೇಶ ಯುವ ಕುರುಬರ ಸಂಘದ ವತಿಯಿಂದ ಸಾಹಿತಿ ವಿದ್ಯಾವಾಚಸ್ಪತಿ ಕವಿತಾಕೃಷ್ಣ ಅವರನ್ನು ತುಮಕೂರಿನಲ್ಲಿ ಸನ್ಮಾನಿಸಲಾಯಿತು. ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯ, ರೇವಣ್ಣಸಿದ್ದೇಶ್ವರ ಗುರುಮಠದ ಪೀಠಾಧ್ಯಕ್ಷ ಬಿಂದುಶೇಖರ್ ಒಡೆಯರ್, ಪತ್ರಿಕೋದ್ಯಮಿ ಎಸ್. ನಾಗಣ್ಣ, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಆರ್. ರಂಗಸ್ವಾಮಿ, ತಿಪಟೂರು ತಾಲೂಕು ಪಂಚಾಯತ್ ಅಧ್ಯಕ್ಷ ಹಾಲ್ಕುರಿಕೆ ಭಾನುಪ್ರಕಾಶ್, ಯುವಭಾರತ್ ರಾಜ್ಯಾಧ್ಯಕ್ಷ ನಿಖೇತ್ರಾಜ್, ಸಂಘದ ಹೆಚ್. ನಾರಾಯಣ್, ಬಿ.ಟಿ. ಚಿಕ್ಕಣ್ಣ, ಎಸ್. ರಮೇಶ್, ಹೆಚ್.ಆರ್. ಸುರೇಶ್, ಡಿ. ರಂಗನಾಥ್, ವೈ. ಬಸವರಾಜ್, ರವಿಕುಮಾರ್ ಉಪಸ್ಥಿತರಿದ್ದರು.
ಕೆ.ಬಿ. ಜಯಣ್ಣ ಆಯ್ಕೆ
ತುಮಕೂರಿನ ಕ್ಯಾತ್ಸಂದ್ರದ ಕವಿತಾಕೃಷ್ಣ ಸಾಹಿತ್ಯಮಂದಿರದ ಅಧ್ಯಕ್ಷರಾಗಿ ವಿದ್ಯಾವಾಹಿನಿ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಜಯಣ್ಣ ಆಯ್ಕೆಯಾಗಿದ್ದಾರೆ. ಕೆ.ಬಿ. ಜಯಣ್ಣ ಅವರನ್ನು ಕವಿತಾಕೃಷ್ಣ ಸಾಹಿತ್ಯ ಮಂದಿರದ ಅಂಗಸಂಸ್ಥೆಗಳಾದ ಮಹಿಳಾ ಮಕ್ಕಳ ಸಾಹಿತ್ಯ ಕೂಟ, ವಿವೇಕಾನಂದ ವಿಚಾರ ವೇದಿಕೆ ಹಾಗೂ ಕೆಬಿಜೆ ಅಭಿಮಾನಿ ಬಳಗದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
ನಾಗಮಣಿ ನೇಮಕ
ತುಮಕೂರು ಜಿಲ್ಲಾ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಚಿಕ್ಕಪೇಟೆಗೌಡರ ಬೀದಿಯ ವೆಂಕಟಾಚಲಯ್ಯನವರ ಪತ್ನಿ ನಾಗಮಣಿ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್. ರಾಜೇಂದ್ರ ತಿಳಿಸಿದ್ದಾರೆ.