ವೀರಸೌಧ ಸಮಗ್ರ ನಿರ್ವಹಣೆಯಾಗಲಿ
ಕ.ಪ್ರ.ವಾರ್ತೆ , ತುಮಕೂರು , ಆ. 20
ತುಮಕೂರಿನ ವೀರಸೌಧ ಕಟ್ಟಡದ ಸಮಗ್ರ ನಿರ್ವಹಣೆ ಮಾಡುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ತುಮಕೂರು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ವೀರಸೌಧ ಕಟ್ಟಡದ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಈ ನಿರ್ದೇಶನ ನಡೆಸಲಾಯಿತು.
ವೀರಸೌಧ ಕಟ್ಟಡದ ಮಳಿಗೆಗಳ ಮುಂಭಾಗಕ್ಕೆ ಗ್ರಿಲ್ ಅಳವಡಿಸುವಿಕೆ ಮತ್ತು ಕಟ್ಟಡಕ್ಕೆ ಬಣ್ಣ, ಲೇಪನ, ಕಾಮಗಾರಿಗಳನ್ನು ಕೈಗೊಳ್ಳಲು, ಲೋಕೋಪಯೋಗಿ ಇಲಾಖೆಯಿಂದ ಅಂದಾಜು ಪಟ್ಟಿ ಪಡೆದು, ವೀರಸೌಧ ಕಟ್ಟಡ ಸಮಿತಿಯ ಅನುಮೋದನೆ ಪಡೆದು, ಲೋಕೋಪಯೋಗಿ ಇಲಾಖೆಯಲ್ಲಿ ಹಣ ಬಾಕಿ ಇದ್ದಲ್ಲಿ ಸದರಿ ಹಣದಿಂದ ಇಲ್ಲವೆ ಮಳಿಗೆಗಳ ಹರಾಜಿನಲ್ಲಿ ಬಂದಿರುವ ಮರು ಪಾವತಿಸಲಾಗದ ಮೊತ್ತದಿಂದ ನಿರ್ವಹಿಸಲು ಸಭೆ ತೀರ್ಮಾನಿಸಿತು.
ಹರಾಜು ಪ್ರಕ್ರಿಯೆ ಷರತ್ತು: ಹರಾಜು ಪ್ರಕ್ರಿಯೆ ಷರತ್ತುಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಅದರಲ್ಲಿ ಅಗತ್ಯವಿರುವ ಷರತ್ತು ಅಂದರೆ ವಾಣಿಜ್ಯ ಮಳಿಗೆಗಳನ್ನು ಸೂಕ್ತವಾಗಿ ರಕ್ಷಿಸುವಂತಹ ಷರತ್ತು ಹಾಕಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ವಹಣೆ: ಪ್ರಸ್ತುತ ವೀರಸೌಧ ಕಟ್ಟಡದ ಮಳಿಗೆಗಳ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಕಟ್ಟಡದ ನಿರ್ವಹಣೆ ಮತ್ತು ಹರಾಜು ಪ್ರಕ್ರಿಯೆಯನ್ನು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರವೇ ನಿರ್ವಹಿಸಲು ತೀರ್ಮಾನಿಸಲಾಯಿತು.
ಸ್ವಚ್ಛತೆಗೆ ಆದ್ಯತೆ ಇರಲಿ: ವೀರಸೌಧ ಕಟ್ಟಡದಲ್ಲಿ ಬಾಕಿ ಉಳಿದಿರುವ 11 ವಾಣಿಜ್ಯ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ ದಿನಾಂಕ ನಿಗಧಿಪಡಿಸುವ ಮತ್ತು ಷರತ್ತುಗಳನ್ನು ಪರಿಷ್ಕರಿಸುವ ಕುರಿತು ಚರ್ಚೆ ನಡೆದು, ಪ್ರಸ್ತುತ ಕಟ್ಟಡದ ಬಳಿ ಅನಧೀಕೃತವಾಗಿ ನೆಲೆಸಿರುವ ಜನರನ್ನು ತೆರವುಗೊಳಿಸಿ, ಪರಿಸರವನ್ನು ಸ್ವಚ್ಛಗೊಳಿಸದಿದ್ದಲ್ಲಿ ಯಾರೂ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲವೆಂಬ ಅಂಶವನ್ನು ಸಮಿತಿಯ ಸದಸ್ಯರು ಸಭೆಯ ಗಮನಕ್ಕೆ ತಂದರು.
ಜಿಲ್ಲಾಧಿಕಾರಿಗಳು ಸದರಿ ಪ್ರದೇಶದ ಸ್ವಚ್ಚತೆ ಕಾಪಾಡಲು ಸಭೆಯಲ್ಲಿ ಹಾಜರಿದ್ದ ಪೌರಾಯುಕ್ತರಿಗೆ ಸೂಚಿಸಿದರು ಮತ್ತು ಬದಲಿ ವ್ಯವಸ್ಥೆಯಾಗುವವರೆಗೂ ಕಟ್ಟಡದ ಸುತ್ತ ಪ್ರತಿನಿತ್ಯ ಸ್ವಚ್ಚತಾ ಕಾರ್ಯಕ್ಕೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ವಾಣಿಜ್ಯ ಮಳಿಗೆ ಹರಾಜು ವಿಚಾರ ಚರ್ಚೆ: ವಾಣಿಜ್ಯ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ ಚರ್ಚೆ ನಡೆದು, ಹರಾಜು ಪ್ರಕ್ರಿಯೆಗೆ ಕನಿಷ್ಟ 15 ದಿನಗಳ ಕಾಲಾವಕಾಶ ನೀಡುವುದು, ಕನಿಷ್ಟ ಮಾಸಿಕ ಪ್ರೀಮಿಯಂನ್ನು ರು. 5 ಸಾವಿರ ಗಳಿಗೆ ನಿಗಧಿಪಡಿಸಿ ಟೆಂಡರ್ ಕಂ ಹರಾಜು ಮೂಲಕ ಮಾಸಿಕ ಪ್ರೀಮಿಯಂ ನಿಗಧಿಪಡಿಸುವುದು, ಲೀಸ್ ಅವಧಿಯನ್ನು ಮೂರುವರ್ಷಗಳಿಗೆ ನಿಗಧಿಗೊಳಿಸುವುದು, ಈ ಹಿಂದೆ ಇದ್ದ ರು. 5 ಲಕ್ಷ ಗಳ ಪ್ರೀಮಿಯಂ ಮುಂಗಡ ಮೊತ್ತವನ್ನು 3 ಲಕ್ಷಗಳಿಗೆ ಮಿತಿಗೊಳಿಸುವುದು, ತುಮಕೂರು ನಗರಸಭೆಗೆ ವೀರಸೌಧ ಕಟ್ಟಡದಲ್ಲಿ ಒಂದು ಮಳಿಗೆಯಲ್ಲಿ ವಾರ್ಡ್ ಕಚೇರಿ ತೆರೆಯಲು ಕ್ರಮ ವಹಿಸುವುದು, ಖಾದಿ ಮತ್ತು ಗ್ರಾಮೋದ್ಯೋಗ, ಹಾಪ್‌ಕಾಮ್ಸ್, ತುಮಕೂರು ಡೈರಿ ಮತ್ತು ಇತರೆ ಸರ್ಕಾರಿ ಕಚೇರಿಗಳು ಇಚ್ಛಿಸಿದಲ್ಲಿ ವಾಣಿಜ್ಯ ಮಳಿಗೆಗಳನ್ನು ನೀಡಲು ತೀರ್ಮಾನಿಸಲಾಯಿತು.
ಟುಡಾ ಆಯುಕ್ತ ಆದರ್ಶಕುಮಾರ್, ನಗರಸಭೆ ಆಯುಕ್ತ ನಾರಾಯಣಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಕೈಗಾರಿಕೋದ್ಯಮಿಗಳು ಮತ್ತಿರರರು ಸಭೆಯಲ್ಲಿ ಉಪಸ್ಥಿತರಿದ್ದರು.