ಶಿಸ್ತು, ಶ್ರದ್ಧೆ ಪ್ರಾಮಾಣಿಕತೆಯಿಂದ ನೆಮ್ಮದಿ ವೃದ್ಧಿ
ಕನ್ನಡಪ್ರಭ ವಾರ್ತೆ ತುಮಕೂರು ಆ.20
ಪ್ರತಿಯೊಬ್ಬರು ಶಿಸ್ತು, ಕರ್ತವ್ಯ ಶ್ರದ್ಧೆ ಹಾಗೂ ನೀತಿ-ಧರ್ಮ ಸಂಸ್ಕಾರ ರೂಢಿಸಿಕೊಳ್ಳಬೇಕು. ಇವು ಎಲ್ಲರ ಮೂಲ ಕರ್ತವ್ಯಗಳಾಗಿವೆ. ಇಂತಹ ನೈತಿಕತೆ ಭಾರತದ ಖ್ಯಾತಿಗೆ ಕಾರಣವಾಗಿವೆ ಎಂದು ನಿವೃತ್ತ ಸೈನ್ಯಾಧಿಕಾರಿ ಬಿ.ಕೆ.ಸುವರ್ಣ ಅಭಿಪ್ರಾಯಪಟ್ಟರು. ನಗರದ ಶ್ರುತ ಜೈನ್ ಮಹಿಳಾ ಮಿಲನ್ ವತಿಯಿಂದ ಚಿಕ್ಕಪೇಟೆಯ ಜಿನಮಂದಿರದ ತ್ರಿಲೋಕ ಭವನದಲ್ಲಿ ಏರ್ಪಟ್ಟಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಸ್ತು ಬದ್ಧ ಜೀವನ ಕ್ರಮ ಅತ್ಯಗತ್ಯ: ಶಿಸ್ತು ಬದ್ಧ ಜೀವನ ಕ್ರಮಗಳಿಂದ ಜೀವನದಲ್ಲಿ ಶಾಂತಿ ಲಭಿಸುತ್ತದೆ. ಇಂತಹ ಭವ್ಯ ನಾಗರಿಕತೆಯಿಂದ ಆಧ್ಯಾತ್ಮಿಕತೆಗಳಿಂದ ರಾಷ್ಟ್ರದ ಗೌರವವು ಹೆಚ್ಚುತ್ತದೆ. ವಿಶ್ವಮಾನ್ಯ ದೇಶದ ಘನತೆಗೆ ಗೌರವ ತರುವ ನಿಟ್ಟಿನಲ್ಲಿ ಸರ್ವರು ಮುನ್ನಡೆದು ದೇಶಭಕ್ತಿ ದೇಶಪ್ರೇಮ ತೋರುವುದರ ಮೂಲಕ ಸಾರ್ಥಕ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ, ಜೈನಧರ್ಮದ ಹಿರಿಮೆ, ಸಂಸ್ಕೃತಿ ಹಾಗೂ ಪರಂಪರೆಗಳ ಶ್ರೇಷ್ಠತೆಯನ್ನು, ಜೈನ ಸಾಧುವರ್ಯರ ಧರ್ಮಪ್ರಭಾವ ಕಾರ್ಯಗಳನ್ನು ಭಕ್ತಿ ಭಾವದಿಂದ ಸ್ಮರಿಸಿದರು.
ನಿವೃತ್ತ ಎಸ್ಬಿಎಂ ಅಧಿಕಾರಿ ಹಾಗೂ ತುಮಕೂರು ಜೈನ್ ಮಿಲನ್ ನ ಅಧ್ಯಕ್ಷ ಬಿ.ಎನ್. ಹೊನ್ನಪ್ಪ ಧರ್ಮ ಹಾಗೂ ಸಮಾಜ ಸೇವಾಗುಣಗಳು ಸ್ವ-ಪರ ಆತ್ಮ ಶ್ರೇಯಸ್ಸಿಗೆ ಕಾರಣವಾಗುತ್ತವೆ ಎಂದು ತಿಳಿಸಿದರು.
ಪಿ.ಪಿ.ಮಲ್ ಮಾತನಾಡಿ, ಮಹಿಳಾ ಹಾಗೂ ಸಾಮಾಜಿಕ ಸಂಘಟನೆಗಳ ಪ್ರಸ್ತುತತೆಯ ಅವಶ್ಯಕತೆ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜೈನ್ ಮಿಲನ್ ನ ವಲಯ 8ರ ಕಾರ್ಯದರ್ಶಿ ಬೆಂಗಳೂರಿನ ಕೆ. ಅಶೋಕ್ ಕುಮಾರ್ ರವರು ಉಪಸ್ಥಿತಿ ನೀಡಿ ಶ್ರುತ-ಜೈನ್ ಮಹಿಳಾ ಮಿಲನ್ ನ ವಿಶಿಷ್ಟ ಕಾರ್ಯ ಸೂಚಿಗಳನ್ನು ಪ್ರಶಂಶಿಸಿದರು.
ವಧೂ-ವರರ ಸಮಾಗಮ: ಈ ಶುಭವಸರದಲ್ಲಿ ಜೈನ ವಧೂ-ವರರ ಸಮಾವೇಶವು ಸಂಪನ್ನಗೊಂಡಿದ್ದಿತು. ಬಹುಸಂಖ್ಯೆಯ ಧರ್ಮಾಭಿಮಾನಿಗಳು, ವಧೂ-ವರರು ಅತ್ಯುತ್ಸಾಹ ದಿಂದ ಭಾಗಿಗಳಾಗಿದ್ದರು. ವಧೂ-ವರರ ಮಾಹಿತಿ ಹಾಗೂ ವಿನಿಮಯಕ್ಕೆ ವ್ಯವಸ್ಥೆ ಮಾಡಿಕೊಡಲಾಯಿತು.
ನಂತರ ಶ್ರುತ ಜೈನ್ ಮಹಿಳಾ ಮಿಲನ್ ನ 11 ನೇ ವಾರ್ಷಿಕೋತ್ಸವ ಸಮಾರಂಭವು, ಪದ್ಮಾಂಬಾ ಮಹಿಳಾ ಸಮಾಜದ ಅಧ್ಯಕ್ಷೆ ಶಾಂತಾ ಸನ್ಮತಿ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಜಲಜಾ ಜೈನ್ ಜೈನ ಸಂಸ್ಕೃತಿ ಹಾಗೂ ಆಚರಣೆಯ ಬಗ್ಗೆ ವಿವರಣಾತ್ಮಕ ಉಪನ್ಯಾಸ ಮಾಡಿದರು.
ಯುವ ಗಾಯಕಿ ಪದ್ಮಶ್ರೀ ಅವರಿಗೆ ಶ್ರುತಶ್ರೀ ಪ್ರಶಸ್ತಿ ನೀಡಿ ಸಂಗೀತ ಕ್ಷೇತ್ರದಲ್ಲಿನ ಸಾಧನೆಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಸಾಹಿತಿ ರಾಮಚಂದ್ರ ಸ್ಯಾದ್ವಾದಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತ್ತಿಮಬ್ಬೆ ವಿದ್ಯಾಮಂದಿರದ ಮನರಂಜನಾ ಕಾರ್ಯಕ್ರಮ ನಡೆದವು. ಈ ಮಹಿಳಾ ಮಿಲನ್ ನ ಸಂಚಾಲಕಿ ಶ್ಯಾಮಲಾ ಧರಣೇಂದ್ರ ರವರ ಶ್ರಮ, ಸೇವೆ ಹಾಗೂ ಸದಸ್ಯರೆಲ್ಲರ ಸಮರ್ಪಣಾಭಾವ ಸೇವಾಕಾರ್ಯ ಪ್ರಶಂಶಿಸಲಾಯಿತು.
ಉದ್ಯಮಿ ಜಿ.ಪಿ. ಉಮೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಮಂಜುಳ ಮತ್ತು ಸಂಗಡಿಗರಿಂದ ಪ್ರಾರ್ಥನೆ ಹಾಗೂ ಶೀಲಾದೇವಿ ಸುರೇಶ್ ಸ್ವಾಗತಿಸಿದರು. ನಿಟ್ಟೂರಿನ ತೀರ್ಥಯಾತ್ರಾಭೂಷಣ ಎನ್.ಜೆ. ಸತ್ಯೇಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ವೀರೇಂದ್ರ ಹೆಗ್ಗಡೆ ಭೇಟಿ
ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇತ್ತೀಚೆಗೆ ಗುಬ್ಬಿಯ ಭಗವಾನ್ ಆದಿನಾಥಸ್ವಾಮಿ ಜಿನಮಂದಿರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಮಾಜದ ಸರ್ವ ಸದಸ್ಯರು ಹೃತ್ಪೂರ್ವಕವಾಗಿ ಸ್ವಾಗತಿಸಿ ಸನ್ಮಾನಿಸಿದರು. ಮಹಾ ಮಂಗಳಾರತಿ ನಂತರ ಈ ಜಿನಮಂದಿರದ ಪುರೋಭಿವೃದ್ಧಿ ಕಾರ್ಯಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ಇದೇ ಸಂದರ್ಭದಲ್ಲಿ ಹೆಗ್ಗಡೆಯವರು ತಾವು ತಮ್ಮ ತಂದೆ ರತ್ನವರ್ಮ ಹೆಗ್ಗಡೆಯವರೊಂದಿಗೆ ಬಸದಿಗೆ ಆಗಮಿಸಿದ್ದುದನ್ನು ಸ್ಮರಿಸಿದರು.