ಆಂಧ್ರಪ್ರದೇಶ ವಿಭಜನೆ ಪ್ರತಿಭಟನೆ; ಪಾವಗಡಕ್ಕೆ ವೇದನೆ
ಪಾವಗಡ: ಆಂಧ್ರ ವಿಭಜನೆ ವಿಷಯದಲ್ಲಿ ಆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನಲೆಯಲ್ಲಿ ಗಡಿ ಆಂಚಿನಲ್ಲಿರುವ ಪಾವಗಡ ತಾಲೂಕಿನ ಜನತೆ ನಶಿಸುವಂತಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ವಿ.ನಾಗಭೂಷಣ್ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರ ವಿಭಜನೆ ವಿರೋಧಿಸಿ ಆಂಧ್ರ ಪ್ರದೇಶದಲ್ಲಿ ಹಮ್ಮಿಕೊಂಡ ಸಮೈಕ್ಯ ಆಂಧ್ರದ ಹೋರಾಟಕ್ಕೆ ತಾಲೂಕಿನ ವಿವಿಧ ಪ್ರಗತಿ ಪರ ಸಂಘಟನೆಗಳಿಂದ ಬುಧವಾರ ಪಟ್ಟಣದಲ್ಲಿ ಸಾಂಕೇತಿಕಾ ಬಂದ್ ಆಚರಿಸಿ ತಹಸೀಲ್ದಾರ್ ಅವರಿಗೆ ಮನವಿ ನೀಡಿರುವುದಾಗಿ ತಿಳಿಸಿದರು.
ಪಾವಗಡ ತಾಲೂಕು ಭೌಗೋಳಿಕವಾಗಿ ಮೂರು ದಿಕ್ಕುಗಳಿಂದ ಆಂಧ್ರ ಪ್ರದೇಶ ಅವೃತ್ತವಾಗಿದ್ದು ಆಂಧ್ರ ವಿಭಜನೆ ವಿಷಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ವಿವಿಧ ರೀತಿಯ ವ್ಯಾಪಾರಗಳು, ಕೆಲಸ ಕಾರ್ಯ ನಿಮಿತ್ತ ನಗರ ಪ್ರದೇಶಗಳಿಗೆ ಓಡಾಡಲು ಬಸ್ ಪ್ರಯಾಣ ಸೇರಿದಂತೆ ಆನೇಕ ವ್ಯವಹಾರಗಳು ಸ್ಥಗಿತವಾಗಿದ್ದ ಕಾರಣ ತಾಲೂಕಿನ ಜನತೆ ತತ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಅವರು ಮನವಿ ಮಾಡಿದರು.
ಮುಖಂಡರಾದ ನರಸಿಂಹರೆಡ್ಡಿ ಕೇಶವಚಂದ್ರದಾಸ್, ಕಸಾಪ ಹೋಬಳಿ ಅಧ್ಯಕ್ಷ ನಾರಾಯಣಮೂರ್ತಿ, ವಿ.ಈರಣ್ಣ, ಧನುಂಜಯ, ಪುರಸಭೆ ಸದಸ್ಯ ಸುಧಾಕರರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.