ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕರಡಿ ದಾಳಿ; ವ್ಯಕ್ತಿಗೆ ಗಾಯ

Vishwanath S
Updated On : 22 Aug 2013, 12:38 pm

ಹುಳಿಯಾರು: ಎಮ್ಮೆ ಮೇಯಿಸಲು ಹೋಗಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿ ತೀವ್ರ ಗಾಯಗಳಾಗಿರುವ ಘಟನೆ ಹೋಬಳಿ ಮೋಟಿಹಳ್ಳಿಯಲ್ಲಿ ಇತ್ತೀಚೆಗೆ ಘಟಿಸಿದೆ. ಕರಡಿ ದಾಳಿಗೆ ತುತ್ತಾದ ವ್ಯಕ್ತಿ ಮೋಟಿಹಳ್ಳಿಯ ಮಲ್ಲಯ್ಯ ಎಂಬಾತ. ಊರಿನ ಪಕ್ಕದ ಕೆರೆ ಆವರಣಕ್ಕೆ ಪ್ರತಿನಿತ್ಯ ಎಮ್ಮೆ ಮೇಯಿಸಲು ಹೋಗುವಂತೆ ಅಂದೂ ಸಹ ಹೋಗಿದ್ದು, ಸಂಜೆವೇಳೆ ಎಮ್ಮೆಗಳ ಮರೆಯಲ್ಲಿ ಬಂದ ಎರಡು ಕರಡಿ ಹಾಗೂ ಒಂದು ಮರಿಕರಡಿ ಈತನ ಮೇಲೆ ದಿಢೀರನೆ ಎರಗಿ ಬಿದ್ದು, ತಲೆ, ಕೈಕಾಲು ಸೇರಿದಂತೆ ದೇಹದ ಭಾಗಗಳನ್ನು ಗಾಯಮಾಡಿವೆ. ಆದರೆ ಈತ ಧೈರ್ಯಗೆಡದೆ ತನ್ನಲ್ಲಿದ್ದ ಕೋಲಿನ ಸಹಾಯದಿಂದ ಕರಡಿಗಳನ್ನು ಎದುರಿಸಿ,ಪ್ರಾಣಾಪಾಯದಿಂದ ಪಾರಾಗಿದ್ದು, ಹುಳಿಯಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಬಸ್-ಲಾರಿ ಡಿಕ್ಕಿ:
ಇಬ್ಬರು ಸಾವು, 30 ಮಂದಿಗೆ ಗಾಯ
ಕುಣಿಗಲ್: ಗ್ರಾಮಾಂತರ ಸಾರಿಗೆ ಸಂಸ್ಥೆ ಬಸ್ ಹಾಗೂ ಕಂಟೈನರ್ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಕಾರಣ ಇಬ್ಬರು ಸ್ಥಳದಲ್ಲೆ ಮೃತಪಟ್ಟು ಇತರೆ 30 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಳೆ ರಾಷ್ಟ್ರೀಯ ಹೆದ್ದಾರಿ ನಡೇಮಾವಿನಪುರ ಗ್ರಾಮದ ಸಮೀಪ ಸಂಭವಿಸಿದೆ, ಮೃತರನ್ನು ಅಮೃತೂರು ಸಮೀಪದ ಬೇವಿನಮರದಪಾಳ್ಯದ(ನಂಜೀಪಾಳ್ಯ) ಹನುಮಂತಯ್ಯ(65) ಹಾಗೂ ಪಟ್ಟಣದ ಸಾರಿಗೆ ಸಂಸ್ಥೆ ಡಿಪೋವಿನಲ್ಲಿ ಚಾಲಕ ಕಂ ನಿರ್ವಾಹಕ ಬಸವರಾಜು (24) ಎಂದು ಗುರುತಿಸಲಾಗಿದೆ.ಗ್ರಾಮಾಂತರ ಸಾರಿಗೆ ಸಂಸ್ಥೆ ಬಸ್ ಪಟ್ಟಣದಿಂದ ಯಡವಾಣಿಗೆ ತೆರಳುತ್ತಿದ್ದು ,ಕಂಟೈನರ್ ತುಂಬಿದ ಲಾರಿ ಬೆಂಗಳೂರು ಕಡೆಗೆ ತೆರಳುತ್ತಿದ್ದು, ಸಂಜೆ ಐದು ವರೆ ಸಮಯದಲ್ಲಿ ಕಂಟೈನರ್ ಲಾರಿ ಚಾಲಕ ನಿರ್ಲಕ್ಷ್ಯದಿಂದ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬಸ್  ಬಹುತೇಕ ಭಾಗ ಜಖಂಗೊಂಡ ಪರಿಣಾಮ, ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ, ಮಕ್ಕಳು ಮಹಿಳೆಯರು ಗಂಭೀರವಾಗಿ ಗಾಯಗೊಂಡರು.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ 108 ವಾಹನ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು, ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಗಣೇಶ್‌ಬಾಬು, ಮೋಹನ್‌ಕುಮಾರ್ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನಂತರ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಮತ್ತೆ ಕೆಲವರನ್ನು ತುಮಕೂರು ಬೆಂಗಳೂರಿನ ವಿವಿಧ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಪಘಾತಕ್ಕೆ ಸಂಬಂಧಿಸಿದಂತೆ ಚಾಲರಿಬ್ಬರು ತಲೆ ಮರೆಸಿಕೊಂಡಿದ್ದಾರೆ.

ಪತ್ರಕರ್ತೆ ಸರ ಅಪಹರಣ
ತುಮಕೂರು: ಪತ್ರಕರ್ತೆಯೊಬ್ಬರನ್ನು ಅಪರಿಚಿತರು ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ಒಡವೆಗಳನ್ನು ಅಪಹರಿಸಿರುವ ಘಟನೆ ನಗರದ ಕುವೆಂಪು ನಗರದ ಬಳಿ ನಡೆದಿದೆ. ರಮಾಏಕೇಶ್ ಕುವೆಂಪು ನಗರದ ಪುಟ್ಟಾಂಜನೇಯ ದೇವಸ್ಥಾನದ ಬಳಿಯಿರುವ ತಮ್ಮ ನಿವಾಸದ ಬಳಿಯಿರುವ ಕುವೆಂಪು ಪುತ್ಥಳಿ ಬಳಿ ಆಟೋ ಹತ್ತಲು ತೆರಳುತ್ತಿದ್ದಾಗ ಇಬ್ಬರು ಅಪರಿಚಿತರು ರಮಾ ಅವರನ್ನು ಹೆದರಿಸಿ ಅವರ ಬಳಿಯಿದ್ದ 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 5 ಗ್ರಾಂ ತೂಕದ ಮೂರು ಉಂಗುರವನ್ನು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಹೊಸ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 ರಂದು ಗರ್ಕಿನ್ ಇಂಡಸ್ಟ್ರಿಗೆ ಚಾಲನೆ
ಶಿರಾ: ತಾಲೂಕಿನಲ್ಲಿ ಇದೇ ಪ್ರಥಮವಾಗಿ ಗರ್ಕಿನ್ ಇಂಡಸ್ಟ್ರೀಯನ್ನು ಆ. 25 ರಂದು ಅಧಿಕೃತವಾಗಿ ಪ್ರಾರಂಭಿಸಲಾಗುತ್ತಿದೆ ಎಂದು ಐಎಫ್‌ಜಿ ಇನ್ನೋವೆಟಿವ್ ಮುಖ್ಯಸ್ಥ ಬಿರಾದಾರ್ ತಿಳಿಸಿದ್ದಾರೆ. ಶಿರಾ ಬರದ ನಾಡು ಎಂದು ಹೆಸರು ಮಾಡಿದ್ದರು ಈ ತಾಲೂಕಿನಲ್ಲಿ ಮಿಡಿ ಸೌತೆ ಬೆಳೆಯಿಂದ ರೈತರಿಗೆ ಒಂದಷ್ಟು ನೆಮ್ಮದಿ ಮೂಡಿಸಿದೆ. ಉಪ್ಪಿನ ಕಾಯಿಗೆ ಮಿಡಿ ಸೌತೆ ಬೆಳೆ ನೆರೆ ದೇಶಗಳಾದ ಅಮೇರಿಕಾ, ರಷ್ಯಾ, ಜರ್ಮನಿ, ಯೂರೋಪ್ ಮತ್ತು ಆಸ್ಟ್ರೇಲಿಯ ಮಾರುಕಟ್ಟೆಗಳಿಗೆ ಪ್ರತಿ ವರ್ಷ 20 ರಿಂದ 30 ಸಾವಿರ ಟನ್ ರವಾನೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬರದಿಂದಾಗಿ ಖುಷ್ಕಿ ಜಮೀನಿನ ರೈತರು ಆಘಾತಕ್ಕಿಡಾಗಿದ್ದರೆ. ಮತ್ತೊಂದೆಡೆ ಬರದ ನಡುವೆಯೇ ನೀರಾವರಿ ಪ್ರದೇಶದ ಬೆಳೆಗಾರರು ಮಿಡಿ ಸೌತೆ ಬೆಳೆದು ಕೊಂಚ ಮಟ್ಟಿಗೆ ಸಂತುಷ್ಟರಾಗಿದ್ದಾರೆ. ಸಾಧಾರಣವಾಗಿ ಮುಂಗಾರು ಹಂಗಾಮಿನಲ್ಲಿ ಹೆಚ್ಚು ಆದಾಯ ಬರುವ ಈ ಬೆಳೆ ವರ್ಷದಲ್ಲಿ ಮೂರು ಬೆಳೆ ಬೆಳೆಯಲಾಗುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಹೆಚ್ಚು ಬೆಳೆ ನಿರೀಕ್ಷಿಸುತ್ತಿದ್ದು, ನೂರಾರು ಮಂದಿ ಇಲ್ಲಿ ಉದ್ಯೋಗ ದೊರಕಿದಂತಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಪರಿಸರ ಸ್ನೇಹಿ ಕಾರ್ಖಾನೆ: ಈ ಕಾರ್ಖಾನೆಯಿಂದ ಪರಿಸರಕ್ಕಾಗಲಿ, ಸಿಬ್ಬಂದಿಗಾಗಲಿ ಯಾವುದೇ ಅಪಾಯಗಳಿಲ್ಲ. ಈ ಕಾರ್ಖಾನೆಯಿಂದ ಹೊರ ಬರುವ ನೀರನ್ನು ಶುದ್ದೀಕರಿಸಿ ಗಿಡಗಳಿಗೆ ಬಳಸಲಾಗುವುದು ಎಂದು ತಿಳಿಸಿದ ಅವರು. ಸಚಿವ ಟಿ.ಬಿ.ಜಯಚಂದ್ರ ನೂತನ ಘಟಕ ಉದ್ಘಾಟಿಸಲಿದ್ದು, ವಿಶೇಷ ಆಹ್ವಾನಿತರಾಗಿ ಕೃಷಿ ಮಾಜಿ ಸಚಿವ ಉಮೇಶ್ ಕತ್ತಿ ಆಗಮಿಸಲಿದ್ದು, ಕಂಪನಿ ಮುಖ್ಯಸ್ಥರಾದ ಬಿರಾದಾರ್ ಅಧ್ಯಕ್ಷತೆ ವಹಿಸುವರು. ತಹಸೀಲ್ದಾರ್ ಕುಲಕರ್ಣಿ, ಜಿ.ಪಂ. ಸದಸ್ಯ ಅರೇಹಳ್ಳಿ ರಮೇಶ್, ಶಿರಾ ಉಮೇಶ್, ಸಿ.ಪಿ.ಐ. ಪಿ.ರವಿ, ತಾ.ಪಂ. ಸದಸ್ಯ ಉಮಾರಂಗಸ್ವಾಮಿ ಸೇರಿದಂತೆಮತ್ತಿತರರು ಹಾಜರಿದ್ದರು.

ವ್ಯಕ್ತಿ ಆತ್ಮಹತ್ಯೆ
ಕೊರಟಗೆರೆ: ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಬೇಸತ್ತ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದ ಬಳಿ ನಡೆದಿದೆ. ಬೆಂಗಳೂರಿನ ಕೆ.ಆರ್.ಪುರಂ ವಾಸಿ ಶ್ರೀನಿವಾಸ್(50) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಕೆ.ಆರ್.ಪುರಂನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದು ಅತಿಯಾಗಿ ಗ್ರಾಹಕರಿಗೆ ಸಾಲ ನೀಡಿದ್ದು, ಮರುಪಾವತಿಸುವಂತೆ ಕೇಳಿದಾಗ ಕೊಟ್ಟ ಸಾಲ ವಾಪಸ್ ನೀಡುವುದಿಲ್ಲ ಎಂದು ಕೆಲವರು ಧಮಕಿ ಹಾಕಿದರು. ಇದರಿಂದ ಬೇಸತ್ತು ಹೆಂಡತಿ ಕಣ್ ತಪ್ಪಿಸಿ ವಿಷ ಸೇವಿಸಿದ್ದಾನೆ. ಇದನ್ನು ಕಂಡ ಪತ್ನಿ ಪೂರ್ಣಿಮಾ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಈ ಬಗ್ಗೆ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದಾರೆ.

ರಕ್ಷಾ ಬಂಧನ ಆಚರಣೆ
ಕ.ಪ್ರ.ವಾರ್ತೆ , ಹುಳಿಯಾರು , ಆ. 21
ಸೋದರ-ಸೋದರಿಯರ ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಹಬ್ಬವನ್ನು ಪಟ್ಟಣದ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲದ ಆಧ್ಯಾತ್ಮ ಶಿಕ್ಷಕಿ ಗೀತಕ್ಕ ಅವರ ನೇತೃತ್ವದಲ್ಲಿ ವಿದ್ಯಾಲಯದ ಇತರ ಅಕ್ಕಂದಿರು ಹಾಗೂ ಅಣ್ಣಂದಿರು ಸೇರಿ ಸೋದರರಿಗೆ ರಾಖಿ ಕಟ್ಟಿ ಸಿಹಿ ಹಂಚುವ ಮೂಲಕ ಆಯುಶ್ ಆರೋಗ್ಯ ವೃದ್ಧಿಯಾಗಲಿ ಎಂದು ಆಶಿಸಿದರು.
ರಕ್ಷ ಬಂಧನದ ಅಂಗವಾಗಿ ಪಟ್ಟಣದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರಿಗೆ, ಉಪನ್ಯಾಸಕರಿಗೆ, ಪೋಲೀಸ್ ಠಾಣೆಯಲ್ಲಿ ಪೇದೆಗಳಿಗೆ, ನಾಡ ಕಚೇರಿ ಸಿಬ್ಬಂದಿ ಸೇರಿದಂತೆ ಇತರೆ ಕಚೇರಿಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ರಾಖಿ ಕಟ್ಟಿ ಸಿಹಿ ಹಂಚಿ ಶುಭಾಷಯ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement