ತುಮಕೂರು ಗಾಂಧಿ ಸ್ಮಾರಕ ಭವನ ಪರಿಶೀಲಿಸಿದ ಶಾಸಕ ರಫೀಕ್ ಅಹ್ಮದ್
ತುಮಕೂರು: ನಗರದ ಬಿ.ಎಚ್. ರಸ್ತೆಯಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿರುವ ಮಹಾತ್ಮಗಾಂಧಿ ಸ್ಮಾರಕ ಭವನಕ್ಕೆ ತುಮಕೂರು ನಗರ ಶಾಸಕ ಡಾ. ರಫೀಕ್ ಅಹ್ಮದ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ಸ್ಮಾರಕ ಭವನದ ಮೇಲ್ಚಾವಣಿಯ ಹೆಂಚುಗಳು ಹಾಳಾಗಿರುವುದನ್ನು ಗಮನಿಸಿದ ಶಾಸಕರು, ಹೆಂಚು ದುರಸ್ತಿ ಮತ್ತು ಸ್ಮಾರಕ ಭವನದ ಇನ್ನಿತರೆ ಸಣ್ಣಪುಟ್ಟ ದುರಸ್ತಿ ಕಾರ್ಯಕ್ಕೆ ತಮ್ಮದೇ ಅಥವಾ ಇತರೆ ಅನುದಾನ ಬಳಸಿ, ನವೀಕರಣ ಕಾರ್ಯ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಸ್ಮಾರಕ ಭವನದ ಮುಂಭಾಗ ಗಾಂಧಿ ಪುತ್ಥಳಿ ಅನಾವರಣಗೊಳಿಸುವ ಸಂಬಂಧ ಕ್ರಮಕೈಗೊಳ್ಳಲಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು. ಮಹಾತ್ಮ ಗಾಂಧೀಜಿಯವರ ಅನೇಕ ಭಾವಚಿತ್ರಗಳು ಸ್ಮಾರಕ ಭವನದಲ್ಲಿ ಲಭ್ಯವಿದ್ದು, ಭಾವಚಿತ್ರಗಳನ್ನು ಸಾರ್ವಜನಿಕರ ವೀಕ್ಷಣೆಗೆ ಅನುವಾಗುವಂತೆ ವ್ಯವಸ್ಥೆ ಕಲ್ಪಿಸುವಂತೆ ಕಾಲೇಜಿನ ಪ್ರಾಂಶುಪಾಲ ರಾಜಣ್ಣ ಅವರಿಗೆ ಸೂಚಿಸಿದರು.