'ಶಿಕ್ಷಣದ ಖಾಸಗೀಕರಣ'
ತುಮಕೂರು: ಆರ್ಥಿಕ, ಪ್ರಾದೇಶಿಕ, ಲಿಂಗ ಅಸಮಾನತೆಗಳು ಸಮಾಜದಲ್ಲಿ ಚಾಲ್ತಿಯಲ್ಲಿದ್ದು ಶಿಕ್ಷಣದ ಮೂಲಕ ಅರಿವು ಮೂಡಿಸಬೇಕು. ಆದರೆ ಶಿಕ್ಷಣದ ಖಾಸಗೀಕರಣ ನಡೆಯುತ್ತಿದ್ದು, ಕೋಮು ವಿಷಬೀಜ ಬಿತ್ತಲಾಗುತ್ತಿದೆ ಎಂದು ಪ್ರಗತಿಪರ ಚಿಂತಕ ಕೆ.ದೊರೈರಾಜ್ ಅವರು ಅಭಿಪ್ರಾಯಪಟ್ಟರು.
ಅವರು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಓ) ತುಮಕೂರು ಜಿಲ್ಲಾ ಘಟಕ ಸಂಘಟಿಸಿದ್ದ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿ ಸಮಾವೇಶ ಉದ್ಘಾಟಿಸಿ ಹೇಳಿದರು.
ಈ ಸಮಾವೇಶದಲ್ಲಿ ವಿವಿಧ ಕಾಲೇಜುಗಳ 150 ಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು. ಇಂದಿನ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳನ್ನು ಭೋಗ ಸಂಸ್ಕೃತಿಗೆ ತಳ್ಳುತ್ತಿದೆ. ಮನರಂಜನೆ ಹೆಸರಿನಲ್ಲಿ ಸಾಂಸ್ಕೃತಿಕ ವಿಕೃತಿಯ ಮನೋಭೂಮಿಕೆಯನ್ನು ಮಾಧ್ಯಮಗಳು ಸೃಷ್ಟಿಸುತ್ತಿವೆ ಎಂದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ.ಉಮಾರವರು ವಿವಿಧ ಶಿಕ್ಷಣ ನೀತಿಗಳನ್ನು ವಿಮರ್ಶಿಸಿ ಮಾತನಾಡಿದರು.
ಎಐಡಿಎಸ್ಓನ ರಾಜ್ಯ ಕಾರ್ಯದರ್ಶಿ ಡಾ. ಪ್ರಮೋದ್ ಮಾತನಾಡಿದರು.
ತುಮಕೂರಿನ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸಬೇಕು, ಹಾಸ್ಟೆಲ್ಗಳನ್ನು ಶಾಲೆ-ಕಾಲೇಜುಗಳ ಜೊತೆಯಲ್ಲೇ ತೆರೆಯಬೇಕು, ಸಂಖ್ಯೆಯನ್ನು ಹೆಚ್ಚಿಸಬೇಕು, ಉತ್ತಮವಾದ ಆಹಾರ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಒಳಗೊಂಡ ಮುಖ್ಯ ಗೊತ್ತುವಳಿಯನ್ನು ಸಮಾವೇಶವು ಅಂಗೀಕಾರ ಮಾಡಿತು.
ನಂತರ ಮಾದಪ್ಪ ಎಸ್.ಕೆ ಅಧ್ಯಕ್ಷರಾಗಿ, ವೆಂಕಟೇಶ್ ಕಾರ್ಯದರ್ಶಿಯಾಗಿ, ರಾಜೇಶ್ವರಿ ಜಂಟಿ ಕಾರ್ಯದರ್ಶಿಯಾಗಿ ಮತ್ತು 19 ಸದಸ್ಯರ ಒಳಗೊಂಡ ಎಐಡಿಎಸ್ಓನ ತುಮಕೂರು ಜಿಲ್ಲಾ ಸಂಘಟನಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಮಾವೇಶದ ಕೊನೆಯ ಭಾಗದಲ್ಲಿ ಸಮೂಹ ಹಾಗೂ ಏಕವ್ಯಕ್ತಿ ಗಾನ, ಕವನ ವಾಚನ ಮತ್ತು ಗೋಸುಂಬೆ ನಾಟಕಗಳನ್ನು ಒಳಗೊಂಡ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.