ಕ್ರೀಡಾ ಇಲಾಖೆಗೇ ಬೇಡ ಕ್ರೀಡಾಂಗಣ!
ಕ.ಪ್ರ.ವಾರ್ತೆ , ಚಿಕ್ಕನಾಯಕನಹಳ್ಳಿ , ಆ. 25
ಸರ್ಕಾರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಕಡ್ಡಾಯಗೊಳಿಸಿ, ಅದರಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ನಲಿ-ಕಲಿ (ಆಟ-ಪಾಠ) ಅಂಶ ಸೇರಿಸಿ ಜಾರಿಗೊಳಿಸಲಾಗಿದೆ.
ಆದರೆ, ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾದ ಇಲಾಖೆಯ ನಿರ್ಲಕ್ಷ್ಯದಿಂದ ಮಕ್ಕಳು ನಲಿಯುವಿಕೆಯಲ್ಲಿ ವಂಚಿತರಾಗಿದ್ದಾರೆ. ಪಟ್ಟಣದ ಆಯಕಟ್ಟಿನ ಜಾಗದಲ್ಲಿರುವ ಸುಮಾರು 4-00 ಎಕರೆ ವೀಸ್ತೀರ್ಣದಲ್ಲಿ ಕ್ರೀಡಾಂಗಣವನ್ನು 2008-09ರಲ್ಲಿ ಹಿಂದಿನ ಸರ್ಕಾರ ರು. 67 ಲಕ್ಷ ಯೋಜನೆಯನ್ನು ಮಂಜೂರು ಮಾಡಿ ಹಣ ಬಿಡುಗಡೆಗೊಳಿಸಿತು.ಕಾಮಗಾರಿ ಹೊಣೆ ಹೊತ್ತ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದು ಪ್ರಕ್ರಿಯೆಗಳನ್ನು ಮುಗಿಸಿದನಂತರ ಗುತ್ತಿಗೆದಾರರು ಸದರಿ ಕಾಮಗಾರಿಯನ್ನು 31-3-2011 ಕ್ಕೆ ಮುಗಿಸಿ ಲೋಕೋಪಯೋಗಿ ಇಲಾಖೆಗೆ ವಹಿಸಿಕೊಟ್ಟಿರುತ್ತಾರೆ.
ನಂತರ ಲೋಕೋಪಯೋಗಿ ಇಲಾಖೆ ಯುವಜನ ಮತ್ತು ಕ್ರೀಡಾ ಇಲಾಖೆಗೆ ಕ್ರೀಡಾಂಗಣವನ್ನು ವಹಿಸಿಕೊಳ್ಳುವಂತೆ ಅನೇಕ ಬಾರಿ ಪತ್ರಬರೆದರು ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ.
ಕಾಮಗಾರಿ ಮುಗಿದು 2ವರ್ಷಗಳ ಮೇಲಾಗಿದೆ.ಸಂಬಂದ ಪಟ್ಟ ಇಲಾಖೆ ಅದನ್ನು ತನ್ನ ವಶಕ್ಕೆ ಪಡೆದು ಸಮರ್ಪಕವಾಗಿ ನಿರ್ವಹಣೆಯ ಜವಾಬ್ದಾರಿ ಹೊರದಿದ್ದರೆ ಅದರ ನಿರ್ವಹಣೆಯ ಹೊಣೆಯನ್ನು ಯಾರು ಹೊರಬೇಕು. ಈ ಬಗ್ಗೆ ಗುತ್ತಿಗೆದಾರರಾದ ಎಂ.ಎನ್.ಶಿವರಾಜುರವರನ್ನು ಸಂಪರ್ಕಿಸಿದಾಗ ಅವರು ನಿರ್ವಹಣೆಯ ಜವಾಬ್ದಾರಿ ಹೊಂದಿದಿರುವ ಕ್ರೀಡಾ ಇಲಾಖೆ ವಶಕ್ಕೆ ಪಡೆಯದಿರುವುದರಿಂದ ಅದನ್ನು ಸುಸ್ಥಿತಿಯಲ್ಲಿಡಬೇಕಾದವರು ಯಾರು ಎಂಬ ಪ್ರಶ್ನೆ ಉಂಟಾಗುತ್ತದೆ. ಈಗಾಗಲೇ ಕಿಡಿಗೇಡಿಗಳಿಂದ ಹಾಳಾದ ಕಿಟಕಿ, ಬಾಗಿಲನಲ್ಲಿ ಮುಂತಾದ ಕೆಲಮೊಂದು ಐಟಂಗಳನ್ನು ರಿಪೇರಿ ಮಾಡಿಸಿದ ಬಾಬ್ತು 40 ಸಾವಿರ ಖರ್ಚಾಗಿದೆ.ಅದನ್ನು ನಾವು ಮರಳಿ ಪಡೆಯಲು ಬರುವುದಿಲ್ಲ ಎಂದರು. ಈ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ತ್ವರಿತವಾಗಿ ಕ್ರೀಡಾಂಗಣವನ್ನು ತನ್ನ ವಶಕ್ಕೆ ಪಡೆದು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಕ್ರೀಡಾಂಗಣ ನಿರ್ಮಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂಬುದು ಇಲ್ಲಿನ ನಾಗರಿಕರ ಒತ್ತಾಯ.