ದ್ವೇಷದ ರಾಜಕಾರಣ ನಮಗೆ ಗೊತ್ತಿಲ್ಲ
ಕ.ಪ್ರ.ವಾರ್ತೆ , ಕುಣಿಗಲ್ , ಆ.25
ನನಗಾಗಲಿ ತಮ್ಮ ಸಹೋದರನಿಗಾಗಲಿ ದ್ವೇಷದ ರಾಜಕಾರಣವೆಂದರೆ ಗೊತ್ತಿಲ್ಲ, ನಮ್ಮದೇನಿದ್ದರೂ ಅಭಿವೃದ್ಧಿ, ಜನತೆ ಹಿತಚಿಂತನೆ ಮತ್ತು ಕಾರ್ಯಕರ್ತರ ರಕ್ಷಣೆಯ ಪರವಾದ ರಾಜಕಾರಣ. ಜೆಡಿಎಸ್ ಅಥವಾ ಬಿಜೆಪಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತೇವೆಂಬ ಆರೋಪ ನಿರಾಧಾರವೆಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ತಿಳಿಸಿದರು.
ಭಾನುವಾರ, ಪಟ್ಟಣದ ಕಾಂಗ್ರೆಸ್ ಕಾರ್ಯಾಲಯ ನಮ್ಮ ಮನೆಯಲ್ಲಿ, ತಮ್ಮ ಸಹೋದರ ಸಂಸದ ಡಿ.ಕೆ.ಸುರೇಶ್ ಜೊತೆಯಲ್ಲಿ ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ ಸಲ್ಲಿಸಲು ನಡೆದ ಸಭೆಯಲ್ಲಿ ಮಾತನಾಡಿ ಸೋಮವಾರ ನಡೆಯಲಿರುವ ಅಧಿವೇಶನಕ್ಕೆ ನಿಮ್ಮ ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದರು.
ಕುಣಿಗಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಶಾಸಕರಿಲ್ಲದ ಕಾರಣ, ಆ ಕೊರಗನ್ನು ಸಂಸದ ಸುರೇಶ್ ನೀಗಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಕಾರ್ಯ ಕ್ರಮಗಳನ್ನು ಹಾಕಿಕೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ, ಪಕ್ಷವನ್ನು ಮತ್ತಷ್ಟು ಸದೃಢವಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದಾರೆ. ಕುಣಿಗಲ್ ತಾಲೂಕು ಸಹ ಕನಕಪುರ ಕ್ಷೇತ್ರ ಅಭಿವೃದ್ಧಿ ಹೊಂದಿದ ರೀತಿಯಲ್ಲಿ ಅಭಿವೃದ್ದಿಗೊಳ್ಳಲಿದೆ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ: ನೂತನ ಸಂಸದ ಡಿ.ಕೆ.ಸುರೇಶ್, ತಾಲೂಕಿನ ಎಲ್ಲಾ ಹಂತದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಒಮ್ಮತ್ತದಿಂದ ಶ್ರಮಿಸಿದ್ದರ ಫಲವಾಗಿ ಕಾಂಗ್ರೆಸ್ ಮುನ್ನಡೆ ಸಾಧಿಸಿ, ಅಭ್ಯರ್ಥಿಯ ಗೆಲವಿಗೆ ಸಹಕಾರಿಯಾಗಿದೆ. ಉಳಿದ ಅಲ್ಪವಾಧಿಯಲ್ಲಿ ಜನತೆಯ, ಮತದಾರರ ನಂಬಿಕೆ ಚ್ಯುತಿ ಬಾರದ ರೀತಿಯಲ್ಲಿ ಕೈಲಾದ ಮಟ್ಟಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ನೋಣವಿನಕೆರೆಯ ಕಾಡುಸಿದ್ದೇಶ್ವರಮಠದಲ್ಲಿ ವಿಶೇಷ ಪೂಜೆ ಮುಗಿಸಿ ಹನ್ನೆರಡು ಗಂಟೆ ಸುಮಾರಿಗೆ ಪಟ್ಟಣಕ್ಕೆ ಆಗಮಿಸಿದ ನೂತನ ಸಂಸದ ಡಿ.ಕೆ.ಸುರೇಶ್, ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಮೊದಲಿಗೆ ಕುವೆಂಪುನಗರದಲ್ಲಿ ಮುಖಂಡರಾದ ಹುಚ್ಚೇಗೌಡ, ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ ಸ್ವಾಗತಿಸಿದರೆ, ನಂತರ ಮಾಜಿ ಸಚಿವ ವೈ.ಕೆ.ರಾಮಯ್ಯನವರ ಪತ್ನಿ ಅನಸೂಯಮ್ಮ ಅಭಿನಂದಿಸಿದರು. ತಾಲೂಕು ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ಮುಖಂಡ ಡಾ.ರುದ್ರಯ್ಯ ಬೆಂಬಲಿಗರು ಅಭಿನಂದಿಸಿದರು. ಕೊನೆಗೆ ಕಾಂಗ್ರೆಸ್ ಕಾರ್ಯಾಲಯ ನಮ್ಮ ಮನೆಯಲ್ಲಿ ಕಾರ್ಯಕರ್ತರು ಅಭಿನಂದಿಸಿದರು.
ತುಮಕೂರು ಶಾಸಕ ಡಾ.ರಫೀಕ್ ಅಹಮದ್, ಮಾಜಿ ಶಾಸಕ ರಾಮಸ್ವಾಮಿ ಗೌಡ, ಮುಖಂಡರಾದ ಆಡಿ ಟರ್ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್, ಮುಖಂಡರಾದ ರೆಹಮಾನ್ ಷರೀಫ್, ಹೇರೂರು ಶಂಕರ್, ರಂಗಸ್ವಾಮಿ, ರಂಗಣ್ಣಗೌಡ, ಅರುಣಕುಮಾರ್, ಮಾಗಡಿಪಾಳ್ಯ ಲಕ್ಷ್ಮಣ, ಮುನ್ನ ಗಿರೀಶ್, ಜಯಲಕ್ಷ್ಮೀ, ವಿಜಯಮ್ಮ,ಇದ್ದರು.