'ಧರ್ಮ ಗೌರವ' ಕಾನೂನಿಗೂ ನೀಡಿ: ನ್ಯಾ. ಲಾವಣ್ಯ ಲತಾ
ಗುಬ್ಬಿ: ನಮ್ಮ ಸಮಾಜದಲ್ಲಿ ಧರ್ಮಕ್ಕೆ ನೀಡುವಷ್ಟೇ ಗೌರವವನ್ನು ಕಾನೂನುಗಳಿಗೂ ನೀಡಿದಾಗ ಸುಸಂಸ್ಕತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಬಿ.ಎನ್. ಲಾವಣ್ಯಲತಾ ಅಭಿಪ್ರಾಯಪಟ್ಟರು
ಅವರು ತಾಲೂಕಿನ ಅಮ್ಮನಘಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ವ್ಯಕ್ತಿಯ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳಲ್ಲೂ ಕಾನೂನು ಅಡಗಿದೆ. ಕಾನೂನಿನ ಚೌಕಟ್ಟಿಗೆ ಒಳಪಡುವ ಮನುಷ್ಯ ಅಪರಾಧ ಪ್ರಕರಣದಿಂದ ಮುಕ್ತನಾಗಿರಲು ಕಾನೂನು ಸಹಕಾರಿ ಎಂದು ತಿಳಿಸಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ರ್ಯಾಗಿಂಗ್ ಪಿಡುಗು ವಿದ್ಯಾರ್ಥಿಗಳ ಬದುಕಿಗೆ ಮಾರಕವಾಗಿದೆ. ಸುಂದರ ಬದುಕಿನ
ಕನಸು ಕಟ್ಟಿಕೊಂಡು ಮನೆ ಬಿಟ್ಟು ವಿದ್ಯಾರ್ಜನೆಗೆ ಬರುವ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುವ ರ್ಯಾಗಿಂಗ್ ಬಗ್ಗೆ ಕಠಿಣ ಕಾನೂನು ಕ್ರಮವನ್ನು ಜರುಗಿಸುವ ಅವಶ್ಯವಿದೆ. ವಿಶ್ವದ ಎಲ್ಲಾ ರಾಷ್ಟ್ರದಲ್ಲೂ ಈ ಪಿಡುಗು ನಿವಾರಣೆಗೆ ಶಿಸ್ತು ಕ್ರಮ ಜರುಗಿಸಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಪೊಲೀಸರು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದ ಅವರು ಶಿಕ್ಷಣ ಇಲಾಖೆಯೂ ರ್ಯಾಗಿಂಗ್ ಪಿಡುಗನ್ನು ನಿಯಂತ್ರಿಸಲು ವಿವಿಧ ಹಂತದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಉಚಿತ ಕಾನೂನು ಸಲಹೆ: ಸಿವಿಲ್ ನ್ಯಾಯಾಧೀಶ ಎಚ್.ಕೆ.ಉಮೇಶ್ ಮಾತನಾಡಿ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ಸಲಹೆ ಮತ್ತು ಸೌಲಭ್ಯವನ್ನು ಕಾನೂನು ಸೇವಾ ಸಮಿತಿಯಿಂದ ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ, ಶಿಬಿರವನ್ನು ಸಮಿತಿ ನಿರಂತರವಾಗಿ ನಡೆಸುತ್ತಿದೆ ಎಂದ ಅವರು ಇಂದಿನ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಕಾನೂನುಗಳ ಬಗ್ಗೆ ಸಮಗ್ರವಾದ ಮಾಹಿತಿಗಳಿದ್ದಾಗ ಮಾತ್ರ ಕಾನೂನುಗಳ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಎಚ್.ಕೆ.ಕರಿಯಪ್ಪ, ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ರ್ಯಾಗಿಂಗ್ ತಡೆಗಟ್ಟಲು ಈಗಾಗಲೇ ಶಿಕ್ಷಣ ಇಲಾಖೆಯು ವಿವಿಧ ಹಂತದ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ವಿದ್ಯಾರ್ಥಿಗಳು ಮುಕ್ತವಾಗಿ ಶಿಕ್ಷಣ ಪಡೆಯಲು ಅನುಕೂಲವಾಗುವಂತಹ ವಾತಾವರಣ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಸರಕಾರಿ ಸಹಾಯಕ ಅಭಿಯೋಜಕರಾದ ಕುಮಾರಿ ಸುನಿತಾ ರ್ಯಾಗಿಂಗ್ ವಿರೋದಿ ಕಾನೂನುಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.
ಸರಕಾರಿ ಸಹಾಯಕ ಅಭಿಯೋಜಕರಾದ ನಾಗರಾಜು, ತಾಲೂಕು ವಕೀಲರ ಸಂಘದ ಖಜಾಂಚಿ ಬಿ.ಎನ್.ಮಂಗಳಾ, ವಕೀಲರಾದ ಬಿ.ಶಿವಕುಮಾರ್, ಕೆ. ಶಶಿಕುಮಾರ್ ರಾಜ್ ಅರಸ್, ರಾಜ್‌ಕುಮಾರ್, ಚಂದಿರಧರ, ಶಿವರಾಜ್, ಅಧ್ಯಾಪಕರುಗಳಾದ ಗಿರಿರಾಜು, ನಟರಾಜು, ಸಂಜೀವಯ್ಯ, ಮಹಾಲಿಂಗಯ್ಯ, ಚೇತನ, ಉಮಾಶಂಕರ್, ಪ್ರಸನ್ನ ಮುಂತಾದವರಿದ್ದರು.