ಎಲ್ಲರೂ ಒಂದಾದಾಗ ಮಾತ್ರ ಪ್ರಗತಿ ಸಾಧ್ಯ
ಪಟ್ಟನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಈಶ್ವರಯ್ಯ ಅಭಿಮತ
ಶಿರಾ: ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಅಲ್ಪಸಂಖ್ಯಾತರು ಮತ್ತು ದಲಿತರು ಒಂದುಗೂಡಿದಾಗ ಮಾತ್ರ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲು ಸಾಧ್ಯ ಎಂದು ಪಟ್ಟನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಎನ್. ಈಶ್ವರಯ್ಯ ಅಭಿಪ್ರಾಯಪಟ್ಟರು.
ಅವರು ನಗರದ ಪತಂಜಲಿ ಯೋಗ ಶಿಕ್ಷಣ ಮಂದಿರದಲ್ಲಿ ತಾಲೂಕು ಕನಕ-ಕೃಷ್ಣ ನೌಕರರ ಬಳಗದಿಂದ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ನೌಕರರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಜಾತಿ ಎಂಬ ವಿಷ ಬೀಜ ಬಿತ್ತುವ ಮೂಲಕ ಸಮಾಜದ ಹಿತವನ್ನು ಹಾಳು ಮಾಡುತ್ತಿದ್ದಾರೆ. ಇದು ಕೊನೆಯಾದಾಗ ಮಾತ್ರ ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಎಂಬ ತತ್ವಕ್ಕೆ ಅರ್ಥ ಬರುತ್ತದೆ. ಹಿಂದುಳಿದ ವರ್ಗದವರ ಹೋರಾಟ ಮುಂದುವರೆದ ಹಾಗೂ ಬಲಿಷ್ಠ ಜನರ ವಿರುದ್ಧ ಆಗಬಾರದು. ಅದು ನಮ್ಮ ಉಳಿವಿಗಾಗಿ ಎಂಬುದನ್ನು ಮನಗಂಡು ಹೋರಾಡಿ, ನಮ್ಮ ಹಕ್ಕನ್ನು ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಚಂಗಾವರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಜಿ.ಮಂಜುನಾಥ್, ಅಹಿಂದ ಎಂದರೆ ಕೇವಲ ಕುರುಬ, ಗೊಲ್ಲ, ನಾಯಕ ಜನಾಂಗ ಅಲ್ಲ ಎಲ್ಲಾ ಹಿಂದುಳಿದ ವರ್ಗದವರೂ ಸೇರಬೇಕು. ಎಲ್ಲಾ ಸಮಾಜ ಹಿಂದುಳಿದ ಯಾವ ಸಂದರ್ಭದಲ್ಲಾದರೂ ಅನ್ಯಾಯವಾದರೆ ಧೈರ್ಯವಾಗಿ ಖಂಡಿಸುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಪಟ್ಟನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಪಿ.ಪಾಂಡುರಂಗಯ್ಯ ಮಾತನಾಡಿ ಜಗತ್ತಿನ ಶ್ರೇಷ್ಠ ವ್ಯಕ್ತಿಗಳು ಎಲ್ಲಿಯೂ ಜಾತಿ ಹೆಸರನ್ನು ಪ್ರಸ್ತಾಪಿಸದೆ, ಸ್ವಯಂ ಶಕ್ತಿಯಿಂದ ಮೇಲೆ ಬಂದಿದ್ದಾರೆ. ಅದರಲ್ಲೂ ಸೋಲಿನಿಂದ ಯಾರೂ ಕಂಗೆಡಬಾರದು, ಸೋಲೇ ಗೆಲವಿನ ಸೋಪಾನ ಎಂಬುದನ್ನು ಅರಿತರೆ ಮುಂದೊಂದು ದಿನ ಜಯ ಲಭಿಸುತ್ತದೆ ಎಂದು ಹೇಳಿದರು.
ಹೊಸ ಸಂದೇಶ: ಯುವ ಮುಖಂಡ ಎಸ್.ಎಲ್.ರಂಗನಾಥ್ ಮಾತನಾಡಿ ಈ ರಾಜ್ಯದ ಮುಖ್ಯಮಂತ್ರಿ ಸಾಮಾನ್ಯ ಜನರಿಗಾಗಿ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಲಿಷ್ಠ ಜನಾಂಗದವರಿಗೆ ಹೊಸ ಸಂದೇಶವನ್ನು ರವಾನಿಸಿದ್ದಾರೆ. ಆದ್ದರಿಂದ ರಾಜ್ಯದ ಎಲ್ಲಾ ವರ್ಗದ ಜನರೂ ಇಂದು ಸಿದ್ಧರಾಮಯ್ಯನವರ ಜನಪರ ಕಾರ್ಯಕ್ರಮಗಳನ್ನು ಮೆಚ್ಚುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ನೌಕರರು ಉತ್ತಮ ಆಡಳಿತ ನೀಡಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಮಾಜಿ ಸದಸ್ಯ ಈರೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ನರೇಶ್ ಬಾಬು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಜಿ.ಸಿದ್ದರಾಜು, ಸಾಕ್ಷಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಟಿ. ವಿಜಯಕುಮಾರ್, ಪ.ಪೂ. ಕಾಲೇಜಿನ ಉಪನ್ಯಾಸಕ ಬಾನುಪ್ರಕಾಶ್, ರೇವಣ್ಣ ಸಿದ್ದೇಶ್ವರ, ಸುರೇಶ್, ಎನ್.ಎ.ನಾಗವೀಣಾ, ಎಸ್.ಎಲ್.ರಂಗನಾಥ್, ಕೆ.ಎನ್.ದೊಡ್ಡರಾಜು ಹಾಜರಿದ್ದರು.