ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಭಾರತದಲ್ಲಿ ಅತ್ಯುನ್ನತ ಶಿಕ್ಷಣ ವ್ಯವಸ್ಥೆ ಜಾಲ

Vishwanath S
Updated On : 27 Aug 2013, 12:59 pm

ಕ.ಪ್ರ.ವಾರ್ತೆ ,  ತುಮಕೂರು ,  ಆ.26
ಭಾರತ ಇಡೀ ಪ್ರಪಂಚದಲ್ಲಿಯೇ ಅತ್ಯುನ್ನತ ಉನ್ನತ ಶಿಕ್ಷಣ ವ್ಯವಸ್ಥೆಯ ಜಾಲವನ್ನು ಹೊಂದಿದ್ದು ಅಮೆರಿಕ ಮತ್ತು ಚೀನಾ ನಂತರದ ಸ್ಥಾನವನ್ನು ಪಡೆದಿದೆ ಎಂದು ಆಂಧ್ರ ವಿವಿ ವಿಶ್ರಾಂತ ಕುಲಪತಿ ಹಾಗೂ ನ್ಯಾಕ್ ತಂಡ ಮುಖ್ಯಸ್ಥೆ ಡಾ. ನಿರೂಪರಾಣಿ ಅಭಿಪ್ರಾಯಪಟ್ಟಿದ್ದಾರೆ.
ಅವರು ನಗರದ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನ ಬೋಧಕ ಮತ್ತು ಬೋಧಕೇತರರನ್ನು ಉದ್ದೇಶಿಸಿ ಮಾತನಾಡಿದರು.
ಈ ದೇಶದ 600 ವಿಶ್ವವಿದ್ಯಾಲಯಗಳಲ್ಲಿ 35 ಸಾವಿರ ಕಾಲೇಜುಗಳು ಅಫಿಲಿಯೇಶನ್ ಪಡೆದಿದ್ದರೂ ಅವುಗಳಲ್ಲಿ ಶೇ. 68 ರಷ್ಟು ವಿಶ್ವವಿದ್ಯಾನಿಲಯಗಳು ಮತ್ತು ಶೇ.73 ರಷ್ಟು ಕಾಲೇಜುಗಳು ಸಾಧಾರಣ ಅಥವಾ ಕನಿಷ್ಠ ಮಟ್ಟದಲ್ಲಿರುವುದು ಆತಂಕಕಾರಿಯಾದ ವಿಷಯವಾಗಿದೆ ಎಂದು ತಿಳಿಸಿದರು.
ಮುಂದಿನ ಹತ್ತು ವರ್ಷಗಳಲ್ಲಿ ಭಾರತ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಸವಾಲನ್ನು ಎದುರಿಸಲಿದ್ದು 40 ಮಿಲಿಯನ್ ವಿದ್ಯಾರ್ಥಿಗಳು ಈ ಕ್ಷೇತ್ರವನ್ನು ಪ್ರವೇಶಿಸುವ ಸಾಧ್ಯತೆ ಇದೆ. ಇಂತಹ ಸನ್ನಿವೇಶದಲ್ಲಿ ಪ್ರಸ್ತುತ ಇರುವ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳನ್ನು ಆಧುನಿಕತೆಗೆ ತಕ್ಕಂತೆ ಉನ್ನತೀಕರಿಸುವ ಯೋಜನೆಯನ್ನು ರೂಪಿಸಿಕೊಂಡರೆ ಮಾತ್ರ ಆ ಸವಾಲುಗಳನ್ನು ಮೆಟ್ಟಿನಿಲ್ಲಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಂಗಡಣೆ ಸಲ್ಲ: ಕಾಲೇಜುಗಳಲ್ಲಿ ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಕಾಲೇಜುಗಳೆಂಬ ವಿಂಗಡಣೆ ಸಲ್ಲದು. ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ನಡೆಸುತ್ತಿರುವ ಈ ಮಹಿಳಾ ಕಾಲೇಜು ಸರ್ವತೋಮುಖ ಬೆಳವಣಿಗೆಯನ್ನು ಹೊಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಅವರು ಮೂರು ದಿವಸದ ಮೌಲ್ಯಮಾಪನ ಪ್ರಕ್ರಿಯೆ ತಮಗೆ ತೃಪ್ತಿಯನ್ನು ತಂದಿದೆ ಎಂದರು.
ಶಿಕ್ಷಣದಿಂದ ಮಾತ್ರ ಸಾಧ್ಯ: ರಾಜಸ್ಥಾನದ ಜೋಧ್‌ಪುರ ಜೈನಾರಾಯಣ ವ್ಯಾಸ್ ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರೂ ಮತ್ತು ನ್ಯಾಕ್ ಸಮಿತಿಯ ಕೋಆರ್ಡಿನೇಟರ್ ಆದ ಡಾ. ಸುನೀತಾಕುಂಬತ್ ಅವರು ಗ್ರಾಮೀಣ ಭಾರತೀಯರ ಜೀವನ ಸುಧಾರಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಇದರ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಕೈಂಕರ್ಯವನ್ನು ಕೈಗೆತ್ತಿಕೊಂಡಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದರು.
ಜ್ಞಾನ ಜಾಲ ಸೃಷ್ಟಿಯಲ್ಲಿ ಸಂಶೋಧನೆ ಮತ್ತು ಹೊಸತನ ನೀಡುವುದರಲ್ಲಿ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜು ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದುದೇ ಅಲ್ಲದೆ ವಿದ್ಯಾರ್ಥಿಗಳ ಪ್ರಗತಿ, ಪಠ್ಯಪುಸ್ತಕ ಚಟುವಟಿಕೆಗಳನ್ನು ಒಳಗೊಂಡಂತೆ ಇರುವ 34 ವಿವಿಧ ಸಮಿತಿಗಳು ಕಾಲೇಜಿನ ಪ್ರಗತಿಗೆ ಶ್ರಮಿಸಿರುವುದು ದಾಖಲಾರ್ಹ ಸಂಗತಿಯಾಗಿದೆ ಎಂದು ಕಾಲೇಜಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ನ್ಯಾಕ್ ತಂಡದ ಸದಸ್ಯರೂ ಮತ್ತು ಚೆನ್ನೈನ ಕ್ರಿಶ್ಚಿಯನ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.  ಮಾರ್ಗರೇಟ್ ವ್ಯಾಲರ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ನಾಗಭೂಷಣ್ ಸ್ವಾಗತಿಸಿದರು. ಪ್ರೊ. ಎನ್ ಪಿ ರವೀಂದ್ರನಾಥ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement