ಮನುಕುಲದ ಏಳಿಗೆಗೆ ವೀರಶೈವರ ಕೊಡುಗೆ ಅಪಾರ
ತಿಪಟೂರು: ವಿಶ್ವದಲ್ಲೇ ಮನುಕುಲದ ಏಳಿಗೆಗೆ ಬೆಳಕು ಚೆಲ್ಲಿದ ಸಮಾಜವೆಂದರೆ ಅದು ವೀರಶೈವ ಸಮಾಜ. ವಿಶ್ವಮಾನವ ಬಸವಣ್ಣನವರು ಆಧುನಿಕ ಜಗತ್ತಿನ ಕಾನೂನು ಕಟ್ಟಲೆಗಳು,ಸರ್ವರಿಗೂ ಸಮಪಾಲು, ಸಮಬಾಳು ಮತ್ತು ಮಹಿಳಾ ಆದ್ಯತೆಗಳಂತ ಸಮಾನತೆಗಳನ್ನು 12ನೇ ಶತಮಾನದಲ್ಲೇ ಸಾರಿದ್ದು, ಇವೆಲ್ಲವುಗಳೂ ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಪ್ರ.ಕಾರ್ಯದರ್ಶಿ ಹಾಗೂ ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ್ ಭೀಮಣ್ಣ ಖಂಡ್ರೆ ತಿಳಿಸಿದರು.
ನಗರದ ಎಸ್.ವಿ.ಪಿ ಕಾಲೇಜು ಆವರಣದಲ್ಲಿ ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ, ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಬಸವೇಶ್ವರ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವೀರಶೈವ ಲಿಂಗಾಯಿತ ನೌಕರರ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತೆ ಇಂದು ಭಾರತದ ಮಾನವ ಸಂಪನ್ಮೂಲದತ್ತ ತಿರುಗುವಂತೆ ಮಾಡಿದ್ದು ಕರ್ನಾಟಕ ವೀರಶೈವ ಮಠಗಳು ಮತ್ತು ಸಂಘ ಸಂಸ್ಥೆಗಳ ಶಕ್ತಿ. ಶೈಕ್ಷಣಿಕವಾಗಿ ಮಹತ್ವದ ಚಿಂತನೆಗಳು, ಜ್ಞಾನ ದಾಸೋಹದ ಆಂದೋಲನಗಳನ್ನು ವೀರಶೈವ ಶ್ರೀಮಠಗಳು, ಸಂಘ ಸಂಸ್ಥೆಗಳು ಯುವಶಕ್ತಿಗೆ ಗುಣಾತ್ಮಕ ಚಿಂತನೆಗಳು, ಸಂಸ್ಕಾರಯುತ ಶಿಕ್ಷಣ ನೀಡಿದ ಫಲವಾಗಿ ವಿಶ್ವದ ಅದೆಷ್ಟೋ ಕ್ಷೇತ್ರಗಳಲ್ಲಿ ಭಾರತದ ಪ್ರತಿಭೆಗಳು ತೊಡಗಿಸಿಕೊಳ್ಳುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಸ್ಟೆಲ್ ಕೊರತೆ: ನಿವೃತ್ತ ಎಸಿಪಿ ಹಾಗೂ ಕೆಜೆಪಿ ಮುಖಂಡ ಲೋಕೇಶ್ವರ ಮಾತನಾಡಿ ಬಡ ಮಧ್ಯಮ ವೀರಶೈವ ವಿದ್ಯಾರ್ಥಿಗಳಿಗೆ ಬೆಂಗಳೂರು, ಮೈಸೂರಿನಂತಹ ಮಹಾನಗರಗಳಲ್ಲಿ ಹಾಸ್ಟೆಲ್ ಸೌಲಭ್ಯಗಳ ಕೊರತೆ ಹೇಳತೀರದಷ್ಟಿದೆ. ಕಡುಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣ ಶುಲ್ಕ ಕಟ್ಟಲು ಪರದಾಡಿ ಕೊನೆಗೆ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳು ದೈಹಿಕವಾಗಿ ಆರೋಗ್ಯದಿಂದಿರುವಂತೆ ನೋಡಿಕೊಳ್ಳಬೇಕೆಂದರು.
ಗುರಿಮುಟ್ಟಲು ಸಹಕಾರಿ: ಶಾಸಕ ಕೆ.ಷಡಕ್ಷರಿ ಮಾತನಾಡಿ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸಿ ಗುರಿ ಮುಟ್ಟಲು ಸಹಕಾರಿ. ಪ್ರತಿಭಾ ಪುರಸ್ಕಾರ ಕಾರ್ಯಗಳು ಎಲ್ಲಾ ಸಮಾಜದಲ್ಲಿ ಹೆಚ್ಚೆಚ್ಚು ನಡೆಯಬೇಕೆಂದರು. ಬಿಳಿಗೆರೆ ಕಾಲೇಜಿನ ಉಪನ್ಯಾಸಕ ತಗಡೂರು ವೀರಭದ್ರಪ್ಪ ಉಪನ್ಯಾಸ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ಪ್ರ.ಕಾರ್ಯದರ್ಶಿ ಹಾಗೂ ಬಾಲ್ಕಿ ಕ್ಷೇತ್ರದ ಶಾಸಕ ಈಶ್ವರ್ ಭೀಮಣ್ಣ ಖಂಡ್ರೆ ಮತ್ತು ಜಿಲ್ಲಾ ಪ್ರ.ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಶಾಲಾ, ಕಾಲೇಜುಗಳ ವೀರಶೈವ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್.ವಿ.ಪಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಕೆ.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಲಿಂಗರಾಜು, ನೊಣವಿನಕೆರೆ, ವೀ.ರಾ.ಸಂ.ಕಾರ್ಯದರ್ಶಿ ಬಿ.ಕೆ.ಚಂದ್ರಶೇಖರ್, ನೌಕರರ ಸಂಘದ ತಾ.ಅಧ್ಯಕ್ಷ ಕೆ.ಎಂ. ರಾಜಣ್ಣ, ಎಚ್.ಇ.ರಮೇಶ್, ಎಪಿಎಂಸಿ ಅಧ್ಯಕ್ಷ ಪ್ರಕಾಶ್, ನಗರಸಭಾ ಸದಸ್ಯರಾದ ಟಿ.ಜಿ. ಲಿಂಗರಾಜು, ಸುಧಾಕರ್,ನಿಜಗುಣ, ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿಸ್ಲೇಹಳ್ಳಿ ಜಗದೀಶ್, ಚೌಡೇಶ್ವರಿ ಬ್ಯಾಂಕಿನ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ವೀರಶೈವ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ತಾ.ಅಧ್ಯಕ್ಷ ಪ್ರಸನ್ನಕುಮಾರ್ ಸ್ವಾಗತಿಸಿ, ಶಿಕ್ಷಕ ಪರಮೇಶ್ ನಿರೂಪಿಸಿ, ಸುರೇಶ್ ವಂದಿಸಿದರು.