ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಲೋಕಕಲ್ಯಾಣಾರ್ಥವಾಗಿ ಸಹಸ್ರ ರುದ್ರಪಠಣ

Vishwanath S
Updated On : 27 Aug 2013, 1:02 am

ಚಿಕ್ಕನಾಯಕನಹಳ್ಳಿ: ನಮ್ಮನ್ನು ಉದ್ಧರಿಸುವುದು ಪುಣ್ಯ, ಅವನತಿಗೆ ತಳ್ಳುವುದು ಪಾಪ, ನಾವು ಹೆಚ್ಚಾಗಿ ದೈವೀಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ  ಪಾಪ ಕೂಪದಿಂದ ಪಾರಾಗಬಹುದು ಎಂದು ಕುಪ್ಪೂರು ಗದ್ದಿಗೆ ಮಠದ ಕ್ಷೇತ್ರಾಧ್ಯಕ್ಷರಾದ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿ ನುಡಿದರು.
ಪ್ರಳಯ ಭೀತಿಯಿಂದ  ಮನುಕುಲವನ್ನು ಪಾರು ಮಾಡಲು, ಲೋಕಲ್ಯಾಣಕ್ಕಾಗಿ, ಶ್ರೀಕ್ಷೇತ್ರದಲ್ಲಿ ನಿರಂತರ ಅಹೋರಾತ್ರಿ ಸಹಸ್ರ ರುದ್ರ ಪಠಣ ಮತ್ತು ರುದ್ರಾಭೀಷೇಕ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀಮರುಳಸಿದ್ದೇಶ್ವರ ಸ್ವಾಮಿಗೆ ಅಭಿಷೇಕ ಮಾಡುವ ಮೂಲಕ  ವಿಧಿವತ್ತಾಗಿ  ಪ್ರಾರಂಭಿಸಿ ಆಶೀರ್ವಚನ ನೀಡಿದರು. ಮಾನವನಲ್ಲಿರುವ ಮೃಗೀಯ ಗುಣವನ್ನು ನಾಶಮಾಡಿ, ಮಾನವೀಯ ಗುಣವನ್ನಾದರು  ಸಂಪಾದಿಸಿ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳೋಣ ಎಂದರು. ನೂರಾರು ಭಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ  ದೈವಾನುಗ್ರಹ ಪಡೆದರು.
'ಅರ್ಹರಿಗೆ ಸರ್ಕಾರಿ ಸವಲತ್ತು ತಲುಪಲಿ'
ಮಧುಗಿರಿ: ತಾಲೂಕು ಸತತ ಬರಗಾಲಕ್ಕೆ ತುತ್ತಾಗಿ  ರೈತರು, ಕೂಲಿ ಕಾರ್ಮಿಕರು ಸಂಕಷ್ಟದಲ್ಲಿರುವ ಕಾರಣ ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಿ ಸರ್ಕಾರದ ಸವಲತ್ತು ತಲುಪಿಸುವ ಮಹತ್ತರ ಜವಾಬ್ದಾರಿ ಆಯಾಯ ಚುನಾಯಿತ ಜನ  ಪ್ರತಿನಿಧಿಗಳು, ಮುಖಂಡರು ಹಾಗೂ ಅಧಿಕಾರಿಗಳ ಮೇಲಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ತಾಕೀತು ಮಾಡಿದರು. ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಸೆ.3 ರಂದು ಜನ ಸಂಪರ್ಕ ಸಭೆ ನಡೆಯಲಿರುವ ಹಿನ್ನಲೆಯಲ್ಲಿ  ಖಾತೆ ಅಂದೋಲನ, ಪಿಂಚಣಿ ಅದಾಲತ್  ಹಾಗೂ ರೇಷನ್ ಕಾರ್ಡ್ ವಿಷಯ ಕುರಿತಂತೆ ಕರೆದಿದ್ದ ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರ ಮನೆ ಬಾಗಿಲಿಗೆ ಸರ್ಕಾರದ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ ತಮ್ಮ ಅಹವಾಲುಗಳನ್ನು ಸ್ವೀಕರಿಸಿ ಇತ್ಯರ್ಥಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ ವಿವಿಧ ಪಂಚಣಿ ಯೋಜನೆಗಳ ಫಲಾನುಭವಿಳಿಗೆ ಮಾಸಶಾನ ಸಕಾಲದಲ್ಲಿ ದಕ್ಕುವಂತೆ ಜೊತೆಗೆ ಪಡಿತರ ಚೀಟಿಯನ್ನು ವಿತರಿಸಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಈ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿದರು. ತಹಸೀಲ್ದಾರ್ ಕೆ. ರಮೇಶ್ ಮಾತನಾಡಿ, ಸೆ.3 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳು  ಅರ್ಜಿ, ಪಾವತಿ ಮರಣಪತ್ರ, ವಂಶವೃಕ್ಷ,ಅಫೀಡವಿಟ್, ರೇಷನ್‌ಕಾರ್ಡ್‌ಗೆ ಕರೆಂಟ್ ಬಿಲ್,ಆಧಾರ್‌ಕಾರ್ಡ್ ಅಗತ್ಯವಿರುವ ಎಲ್ಲ ದಾಖಲಾತಿಗಳೊಂದಿಗೆ ಸಲ್ಲಿಸಬೇಕು ಎಂದು ತಿಳಿಸಿದರು. ಪೂರ್ವಭಾವಿ ಸಭೆಯಲ್ಲಿ ಜಿ.ಪಂ.ಸದಸ್ಯೆ ಶಾಂತಲಾ ರಾಜಣ್ಣ, ಗ್ರಾ.ಪಂ.ಅಧ್ಯಕ್ಷೆ ನಾಗಮಣಿ, ಮುಖಂಡರಾದ ಕೆ.ವಿ.ವೆಂಕಟೇಶಯ್ಯ, ಮಲ್ಲಿಕಾರ್ಜುನಯ್ಯ, ಮಂಜುನಾಥ್, ಎಸ್.ಡಿ.ಕೃಷ್ಣಪ್ಪ,ನಾಗರಾಜು, ಸಂಜೀವಗೌಡ ಮತ್ತಿತರರು ಉಪಸ್ಥಿತರಿದ್ದರು.
ಚೆಕ್ ವಿತರಣೆ
ಪಾವಗಡ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆ ಅಡಿಯಲ್ಲಿ 1ಲಕ್ಷ ರು. ಪರಿಹಾರದ ಚೆಕ್‌ಗಳನ್ನು ಶಾಸಕ ಕೆ.ಎಂ.ತಿಮ್ಮರಾಯಪ್ಪ ವಿತರಿಸಿದರು. ಜಮೀನಿನಲ್ಲಿ ಬತ್ತದ ಗದ್ದೆಗೆ ನೀರು ಹಾಯಿಸುವಾಗ ಆಕಸ್ಮಾತ್ ಹಾವು ಕಚ್ಚಿ ಮೃತಪಟ್ಟ ನಾಗಲಮಡಿಕೆ ಹೋಬಳಿ ಕ್ಯಾದಿಗುಂಟೆ ಗ್ರಾಮದ ಅಲುವೇಲಮ್ಮ ಎಂಬುವರ ಹೆಸರಿನಲ್ಲಿ ಅವರ ಕುಟುಂಬದ ಓಬಳೇಶಪ್ಪ ಎಂಬುವರಿಗೆ 50 ಸಾವಿರ ಹಾಗೂ ಜಮೀನಿನಲ್ಲಿದ್ದ ಬಳ್ಳಿಯೊಂದರಲ್ಲಿ ಚಿಗಟೆ ಕಾಯಿ ಕೀಳುವಾಗ  ಹಾವು ಕಚ್ಚಿ ಮೃತಪಟ್ಟ ನಾಗಲಮಡಿಕೆ ಹೋಬಳಿಯ ಗೋವರ್ಧನಗಿರಿ ಗ್ರಾಮದ ವಾಸಿ ಚಿತ್ತಮ್ಮ ಎಂಬುವರ ಹೆಸರಿನಲ್ಲಿ ಅವರ ಕುಟುಂಬ ವರ್ಗದ ನಾಗೇಂದ್ರಪ್ಪ ಎಂಬುವರಿಗೆ 50ಸಾವಿರ ಚೆಕ್ ವಿತರಿಸಿದರು.
'ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ'
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆಗೆ ಕ್ರೀಡೆಗಳ ಕುರಿತ ಆಸಕ್ತಿಯನ್ನೂ ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು. ಇಲ್ಲಿನ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ  ಸೋಮವಾರ ಬೆಳಗ್ಗೆ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ಯುವಜನತೆ ಸೃಜನಶೀಲತೆ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳುವ ಮೂಲಕ ಗುರಿ ಮುಟ್ಟಲು ಸಾಧ್ಯವಿದೆ. ದೇಶದ ಏಳಿಗೆಗೆ ಯುವಶಕ್ತಿಯ ಪಾತ್ರ ಪ್ರಮುಖವಾಗಿದೆ. ಮಕ್ಕಳಿಗೆ ಪಾಠ ಪ್ರವಚನಗಳ ಜೊತೆಗೆ ಕ್ರಿಯಾತ್ಮಕ ಚಟುವಟಿಕೆಗಳಿಗೂ ಗಮನ ನೀಡಬೇಕಿದೆ. ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ಮುಖ್ಯ. ಯುವ ಜನರ ಈ ಬಗೆಯ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡಲು ಶಿಕ್ಷಣ ಇಲಾಖೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ: ಪೂರ್ವಭಾವಿ ಸಭೆ
ಹುಳಿಯಾರು: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೇಮಿಸುವಂತೆ ಹಾಗೂ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಹೋಬಳಿಯ ವಿವಿಧ ಸಂಘ ಸಂಸ್ಥೆಯವರು ಉಗ್ರ ಹೋರಾಟ ನಡೆಸುವ ನಿಟ್ಟಿನಲ್ಲಿ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಸೋಮವಾರ ಪೂರ್ವಭಾವಿ ಸಭೆ ನಡೆಸಿದರು.
ಕೆಲ ದಿನಗಳಲ್ಲಿ ಗೌರಿಹಬ್ಬವಿದ್ದು, ಮುಂದಿನ ಒಂದು ವಾರದೊಳಗಾಗಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸದೇ ಹೊದರೇ  ಹೋಬಳಿಯ ವಿವಿಧ ಸಂಘಟನೆಯವರು ಹಾಗೂ ಸಾರ್ವಜನಿಕರು ಒಟ್ಟಾಗಿ ಸೇರಿ ಕಾಯಂ ವೈದ್ಯರನ್ನು ನೇಮಿಸುವ ತನಕ ಸಾಂಕೇತಿಕವಾಗಿ ರಸ್ತೆತಡೆ ನಡೆಸಿ ನಂತರ  ಆಸ್ಪತ್ರೆಯ ಆವರಣದಲ್ಲಿ ಗಾಂಧಿಜೀಯವರ ಭಾವಚಿತ್ರವನಿಟ್ಟು ನಿತ್ಯ ಹೋರಾಟ ನಡೆಸುವುದಾಗಿ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಯಿತು.
ಹುಳಿಯಾರು ಹೋಬಳಿ ಚಿ.ನಾ.ಹಳ್ಳಿ ತಾಲೂಕಿನಲ್ಲಿ ಮುಖ್ಯ ಹೋಬಳಿ ಕೇಂದ್ರವಾಗಿದ್ದರೂ ಅಲ್ಲಿಗೆ ವೈದ್ಯರನ್ನು ನೇಮಿಸಲು ಹಿಂದೇಟು ಹಾಕುತ್ತಿರುವ ಆರೋಗ್ಯ ಸಚಿವರಾಗಲಿ, ಆರೋಗ್ಯ ಅಧಿಕಾರಿಗಳಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಇಲ್ಲಿಗೆ ಧಾವಿಸಿ ಇಲ್ಲಿನ ಆಸ್ಪತ್ರೆಯ ದುಸ್ಥಿಯನ್ನು ಕಂಡು, ಜನರ ಅಳಲನ್ನು ಅಲಿಸಿ ಕಾಯಂ ವೈದ್ಯರನ್ನು ನೇಮಿಸಬೇಕು ಹಾಗೂ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು. ಅಲ್ಲಿಯವರೆಗೆ ತಮ್ಮ ಹೋರಾಟ  ನಡೆಯುವುದಾಗಿ  ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement