ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆರ್ಥಿಕ ನೀತಿ ಬದಲಿಸದೆ ದೇಶೋದ್ಧಾರ ಅಸಾಧ್ಯ

Vishwanath S
Updated On : 31 Aug 2013, 12:22 pm

ಕ.ಪ್ರ.ವಾರ್ತೆ , ತುಮಕೂರು , ಆ. 30
ವಿಶ್ವಬ್ಯಾಂಕ್, ಐಎಂಎಫ್ ಪ್ರಣೀತ ನವ ವಸಾಹತು ಆರ್ಥಿಕ ನೀತಿಯಿಂದಾಗಿ ದೇಶ ದಿವಾಳಿಯಂಚಿಗೆ ಸಾಗುತ್ತಿದೆ. ಆರ್ಥಿಕ ನೀತಿ ಬದಲಿಸದೆ ದೇಶೋದ್ಧಾರ ಸಾಧ್ಯವಿಲ್ಲ ಎಂದು  ಸಿಪಿಐ(ಎಂ) ರಾಷ್ಟ್ರೀಯ ಮುಖಂಡ ಹಾಗೂ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಬಲವಾಗಿ ಪ್ರತಿಪಾದಿಸಿದರು.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಬಡವರ, ಕಾರ್ಮಿಕರ, ರೈತರ ಹಿತರಕ್ಷಿಸದೆ ದೇಶೋದ್ಧಾರದ ಮಾತುಗಳನ್ನಾಡಿ, ಅನೀತಿ ಅನುಸರಿಸುತ್ತಾ ಕೇಂದ್ರ ಯುಪಿಎ ಸರ್ಕಾರ ಬಡಜನತೆ ಪರ  ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಆರ್ಥಿಕತೆ ಹಿಂಜರಿಕೆಯತ್ತ ಸಾಗುತ್ತಿದೆ. ಪ್ರತಿದಿನ ರುಪಾಯಿ ಅಪಮೌಲ್ಯವಾಗುತ್ತಿದೆ. ಆಹಾರ ಪದಾರ್ಥಗಳ ಬೆಲೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಬೆಲೆಗಳಿಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.
ಸ್ವತಃ ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್ ಅವರೇ ತಮ್ಮ ಸರ್ಕಾರ ಅನುಸರಿಸುತ್ತಿರುವು ನವ ವಸಾಹತು ಶಾಹಿ ಆರ್ಥಿಕ ನೀತಿ ಎಂದು ಒಪ್ಪಿದ್ದಾರೆ. 1991 ರಲ್ಲಿ ಗ್ಯಾಟ್ ಒಪ್ಪಂದ ಜಾರಿಯಾಗುವ ಮುನ್ನವೇ ತಮ್ಮ ಪಕ್ಷ ಎಚ್ಚರಿಕೆ ನೀಡಿತ್ತು. ಅದೀಗ ನಿಜವಾಗುತ್ತಿದೆ. 22 ವರ್ಷಗಳ ಹಿಂದೆ ಅಂದರೆ ಅಂದಿನ ಪ್ರಧಾನಿ ನರಸಿಂಹರಾವ್ ಕಾಲದಲ್ಲಿದ್ದ ಆರ್ಥಿಕ ಅಧೋಗತಿಗೆ ಇಂದು ದೇಶ ಸಾಗಿದೆ ಎಂಬುದು ಗಮನಾರ್ಹ ಎಂದು ಶ್ರೀರಾಮರೆಡ್ಡಿ ಮಾರ್ಮಿಕವಾಗಿ ನುಡಿದರು.
ಅಧೋಗತಿಯತ್ತ : ದೇಶದ ಕೈಗಾರಿಕಾ ಉತ್ಪಾದನೆ ಶೇ.1 ಕ್ಕೆ ಬಂದಿದೆ. ಕೃಷಿ  ಉತ್ಪಾದನೆ 3.3 ರಷ್ಟಕ್ಕೆ ಇಳಿದಿದೆ. ಜನ ಸಾಮಾನ್ಯರ ಜೀವನ ಅಧೋಗತಿಯತ್ತ ಸಾಗಿದೆ. ಜನತೆಯ ಕೊಂಡುಕೊಳ್ಳುವ ಶಕ್ತಿ ಕುಂಠಿತಗೊಂಡಿದೆ. ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ಸಾಮಾನ್ಯ ಜನತೆ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ.
ಆದಾಯಕ್ಕೂ - ಖರ್ಚಿಗೂ ಹೋಲಿಕೆ ಮಾಡದಂತಾಗಿದೆ. ಅಜ -ಗಜಾಂತರ ವ್ಯತ್ಯಾಸ ಕಂಡು ಬರುತ್ತಿದೆ. ಐಟಿ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಆಂತರಿಕ ಮಾರುಕಟ್ಟೆಯಲ್ಲಿ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ವಿದೇಶಿ ಚಾಲ್ತಿ ಕೊರತೆಯುಂಟಾಗಿದೆ.
ಆಮದು ಹಾಗೂ ರಪ್ತಿನಲ್ಲಿ ಭಾರೀ ಏರುಪೇರಾಗಿದೆ. ಸರಿಪಡಿಸುವ ಗೋಜಿಗೆ ಪ್ರಧಾನಿ ಮನಮೋಹನ್ ಸಿಂಗ್ ಆಸಕ್ತಿ ವಹಿಸಿಲ್ಲ. ಒಟ್ಟಾರೆ ದೇಶ ಅಧೋಗತಿಯತ್ತ ಸಾಗುತ್ತಿದೆ ಎಂದು ಶ್ರೀರಾಮರೆಡ್ಡಿ ಆತಂಕ ವ್ಯಕ್ತಪಡಿಸಿದರು.
ಷೇರು ಮಾರುಕಟ್ಟೆ ಹಾಸ್ಯಾಸ್ಪದ: ಷೇರು ಮಾರುಕಟ್ಟೆ ಆಧಾರಿತ ಬೆಳವಣಿಗೆ ಹಾಸ್ಯಾಸ್ಪದ. ಯಾವುದೇ ಕೆಲಸ - ಕಾರ್ಯ ನಡೆಯದೆ ಬೆಳವಣಿಗೆ ನಡೆಯುತ್ತದೆ ಎಂಬುದೇ ದೊಡ್ಡ ಜೋಕ್. ಇದಕ್ಕೆ ಷೇರು ಮಾರುಕಟ್ಟೆ ಒಂದು ಉತ್ತಮ  ಉದಾಹರಣೆ ಎಂದು ಲೇವಡಿ ಮಾಡಿದರು.
ಈ ಷೇರು ಮಾರುಕಟ್ಟೆಯಿಂದಾಗಿ ದೇಶದ ಕೇವಲ ಶೇ.2 ರಷ್ಟು ಜನತೆಗೆ ಮಾತ್ರ ಅನುಕೂಲವಾಗಿದೆ. ಅದು ಶ್ರೀಮಂತರಿಗೆ ಮಾತ್ರ ಎಂಬುದನ್ನು ಬೇರೆ ಹೇಳಬೇಕಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ. ಉಮೇಶ್, ಸಿಪಿಐ(ಎಂ) ಜಿಲ್ಲಾ ಮುಖ್ಯಸ್ಥ ಸೈಯದ್ ಮುಜೀಬ್, ಮುಖಂಡ ಎನ್.ಕೆ. ಸುಬ್ರಹ್ಮಣ್ಯ ಸೇರಿದಂತೆ ಜಿಲ್ಲೆಯ ಇತರೆ ಮುಖಂಡರು ಉಪಸ್ಥಿತರಿದ್ದರು.
ಬಿಜೆಪಿಯ ರಾಗವೂ ಭಿನ್ನವಲ್ಲ
ಕಾಂಗ್ರೆಸ್ ಸರ್ಕಾರ 1991 ರಲ್ಲಿ ಜಾರಿಗೆ ತಂದ ನವ ವಸಾಹತುಶಾಹಿ ಆರ್ಥಿಕ ನೀತಿಯನ್ನೇ 1998 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೂಡ ಅನುಸರಿಸಿತು. ಗ್ಯಾಟ್ ಒಪ್ಪಂದ ಜಾರಿ ಮಾಡಲು 2000 ನೇ ಇಸವಿಯವರೆಗೆ ಅವಕಾಶವಿತ್ತು. ಆದರೆ ಎನ್‌ಡಿಎ ಸರ್ಕಾರ 2 ವರ್ಷ ಮುಂಚಿತವಾಗಿಯೇ ಒಪ್ಪಂದ ಜಾರಿಗೆ ಮುಂದಾಯಿತು. ಕಾಂಗ್ರೆಸ್ ಸರ್ಕಾರದ ನವ ವಸಾಹತು ಶಾಹಿ ಆರ್ಥಿಕ ನೀತಿಗೆ ಮುಂದಾಯಿತು. ಹೀಗಾಗಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ಅಥವಾ ಎನ್‌ಡಿಎ ಆರ್ಥಿಕ ನೀತಿ ರಾಗ ಕೂಡ ಭಿನ್ನವೇನಲ್ಲ ಎಂಬುದನ್ನು ಜನತೆ ಗಮನಿಸಬೇಕು. ಎಚ್ಚರಿಕೆ ವಹಿಸಬೇಕು ಎಂದು ಮಾರ್ಮಿಕವಾಗಿ ನುಡಿದರು.
ವ್ಯಕ್ತಿಗಳಿಂದ ಬದಲಾವಣೆ ಸಾಧ್ಯವಿಲ್ಲ
ತುಮಕೂರು: ಇಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ  ಅವರನ್ನು ದೇಶೋದ್ಧಾರದ ಪ್ರಮುಖರೆಂದು, ಭಾವಿ ಪ್ರಧಾನಿಗಳೆಂಬಂತೆ ಬಿಂಬಿಸಲಾಗುತ್ತಿದೆ. ಮೋದಿ ಬೇಕೋ, ರಾಹುಲ್ ಗಾಂಧಿ ಬೇಕೋ ಎಂಬ ಅನಗತ್ಯ ಚರ್ಚೆ ಹುಟ್ಟಿ ಹಾಕಲಾಗಿದೆ. ಆದರೆ ಹಾಲಿ ಇರುವ ಆರ್ಥಿಕ ನೀತಿ ಬದಲಾವಣೆಯಾಗದೆ ದೇಶೋದ್ಧಾರ ಸಾಧ್ಯವಿಲ್ಲ. ದೇಶೋದ್ಧಾರ ವ್ಯಕ್ತಿಗಳಿಂದ ಸಾಧ್ಯವಿಲ್ಲ. ಆರ್ಥಿಕ ನೀತಿ ಬದಲಾವಣೆಯಿಂದ ಮಾತ್ರ ಸಾಧ್ಯ ಎಂಬುದನ್ನು ಜನತೆ ಮನಗಾಣಬೇಕು ಎಂದು ಶ್ರೀರಾಮರೆಡ್ಡಿ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement