ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕ್ರೀಡೆ ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಹೆಚ್ಚು ಸಹಕಾರಿ

Vishwanath S
Updated On : 31 Aug 2013, 12:24 pm

ಗುಬ್ಬಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ದೈಹಿಕ ಬೆಳವಣಿಗೆಗೆ ಹೆಚ್ಚು ಸಹಕಾರಿಯಾಗಲಿವೆ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಮಮತಾ ಶಿವಲಿಂಗಯ್ಯ ತಿಳಿಸಿದರು. ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ 2013-14 ನೇಸಾಲಿನ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಗಳು ಮಾನವ ಬದುಕಿನಲ್ಲಿ ಮಾನಸಿಕ ಮತ್ತು ದೈಹಿಕ ಪ್ರಗತಿಗೆ ಪರಿಣಾಮಕಾರಿಯಾಗಲಿದ್ದು ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾಕೂಟದ ಯಶಸ್ವಿಗೆ ಸಹಕಾರ ನೀಡುವಂತೆ ತಿಳಿಸಿದರು. ಇಂದಿನ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯವಾಗಿದ್ದು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ತೊಡಗಿಸುವ ಮೂಲಕ ಅವರನ್ನು  ಸತ್ಪ್ರಜೆಗಳನ್ನಾಗಿ ಮಾಡುವಂತೆ ಕರೆನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿ ನರೇಂದ್ರ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೋಮಶೇಖರ್ ಮಾತನಾಡಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೊರವಯ್ಯ, ಕಾರ್ಯದರ್ಶಿ ಎನ್.ಟಿ. ಪ್ರಕಾಶ್, ಖಜಾಂಚಿ ಸಿದ್ದಲಿಂಗಯ್ಯ,  ಜಿಲ್ಲಾ ಖಜಾಂಚಿ ಬಿ.ಸಿ.ಶಿವಣ್ಣ, ತಾಲೂಕು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಖಜಾಂಚಿ ಶಿವಮಾದಯ್ಯ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಅಶ್ವತ್ಥಯ್ಯ,ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಾಂತರಾಜು, ಕ್ರೀಡಾಕೂಟದ ಸಂಚಾಲಕ ಆರ್.ಬಿ. ಜಯಣ್ಣ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ನಿಜಾನಂದ ಮೂರ್ತಿ, ಪದಾಧಿಕಾರಿಗಳಾದ ಪಿ.ಎಸ್.ಜಯಣ್ಣ, ಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.
ಅವಕಾಶವಾದಿ ರಾಜಕಾರಣಕ್ಕೆ ತಿರುಗುಬಾಣ
ತಿಪಟೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳೊಳಗೆ ನಡೆದ ಮೊದಲ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದು, ಕಾಂಗ್ರೆಸ್ ಪಕ್ಷದ ರಾಜಕೀಯ ಚಾಣಾಕ್ಷತನ ಮೆರೆದಿದ್ದು,ಅದು ಜೆಡಿಎಸ್‌ನ ಅನುಕೂಲ ಸಿಂಧು ರಾಜಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ವಿಧಾನಪರಿಷತ್‌ಗಳ ಮತದಾರರು ತಕ್ಕ ಪಾಠ ಕಲಿಸಿದ್ದಾರೆಂದುಕಾಂಗ್ರೆಸ್ ವಕ್ತಾರ ಕೆ.ಎಸ್.ಸದಾಶಿವಯ್ಯ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಳೆ ಮೈಸೂರು ಭಾಗದ ರಾಜಕಾರಣ ಮಗ್ಗಲು ಬದಲಿಸಿದ್ದು, ಜೆಡಿಎಸ್ ಪಾರುಪತ್ಯ ನುಚ್ಚು ನೂರಾಗಿದೆ. ತಮ್ಮದೇ ರಾಜಕೀಯ ಅಪರಾಧಗಳಿಗೆ ಜೆಡಿಎಸ್ ವರಿಷ್ಠರು ಬೆಲೆತೆತ್ತಿದ್ದು, ಸಂದರ್ಭವನ್ನು ಅನುಕೂಲಕ್ಕೆ ಬಳಸಿಕೊಳ್ಳುವ ಅವಕಾಶವಾದಿತನ ಅವರಿಗೇ ತಿರುಗುಬಾಣವಾಗಿದೆ ಎಂದಿದ್ದಾರೆ.  
ಗುರುಕುಲ ಶ್ರೀಗಳಿಂದ ವಿದ್ಯಾರ್ಥಿ ಸಂಘ ಉದ್ಘಾಟನೆ
ತಿಪಟೂರು: ತಾಲೂಕಿನ ಕುಪ್ಪಾಳು ಶ್ರೀ ಮಲ್ಲಿಕಾರ್ಜುನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ಹಾಗೂ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್. ಸಂಘಗಳನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಶ್ರೀ ಇಮ್ಮಡಿಕರಿಬಸವದೇಶಿಕೇಂದ್ರ ಸ್ವಾಮೀಜಿಗಳು ಉದ್ಘಾಟಿಸಿ ವಿದ್ಯಾರ್ಥಿಗಳು ಶಿಸ್ತು, ಗುರಿ ಮತ್ತು ಶ್ರಮದಿಂದ ಕಲಿಕೆಯತ್ನಕ್ಕೆ ಗಮನ ಹರಿಸಬೇಕು. ಹಾಗೆಯೇ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಗಳನ್ನು ಹೊರಹಾಕಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಗುಡಿಶಂಕರಪ್ಪ, ಕುಮಾರಸ್ವಾಮಿ, ಚನ್ನೇಗೌಡ, ಪ್ರಾಂಶುಪಾಲ ಬಿ.ನಾಗರಾಜು, ಮುಖ್ಯ ಶಿಕ್ಷಕ ಎಸ್. ಪ್ರಕಾಶಪ್ಪ, ರೈಲ್ವೆ ನಿಲ್ದಾಣಾಧಿಕಾರಿ ಆನಂದ್, ರಾಕೇಶ್ ಕುಮಾರ್ ಮತ್ತಿತರರಿದ್ದರು.
ಗುಬ್ಬಿ ಕ್ಷೇತ್ರ ಬಿಜೆಪಿ ಪದಾಧಿಕಾರಿಗಳು
ಗುಬ್ಬಿ: ಗುಬ್ಬಿ ವಿಧಾನ ಸಭಾ ಕ್ಷೇತ್ರದ 2013 ರಿಂದ 2015 ರ ಅವಧಿಗೆ ಈ ಕೆಳಕಂಡಂತೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಎಚ್.ಟಿ.ಬೈರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉಪಾಧ್ಯಕ್ಷರುಗಳಾಗಿ ನಾಗೇಂದ್ರಪ್ಪ, ಬಸವರಾಜು,ಕೆಂಪರಾಜು,ವೆಂಕಟೇಶ್, ಶೋಭ, ಪ್ರಧಾನ ಕಾರ್ಯದರ್ಶಿಗಳಾಗಿ ಉಮೇಶ್, ಗಂಗಣ್ಣ, ಕಾರ್ಯದರ್ಶಿಗಳಾಗಿ ಹರೀಶ್, ಕೆ.ಸಿ, ರೇವಣ್ಣ, ತಾರಾಮಣಿ, ಮಧು, ಬಸವರಾಜು, ಖಜಾಂಚಿಯಾಗಿ ಬಿ.ಎಸ್.ಪ್ರಸಾದ್, ರೈತ ಮೋರ್ಚಾ ಅಧ್ಯಕ್ಷರಾಗಿ ಪ್ರಭುಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಕರೇಗೌಡ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಶಿವಗಂಗಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಕಲಾ, ಯುವಮೋರ್ಚಾ ಅಧ್ಯಕ್ಷರಾಗಿ ಕೀರ್ತಿಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಸೋಮಶೇಖರ್, ಹಿಂದುಳಿದ ಮೋರ್ಚಾ ಅಧ್ಯಕ್ಷರಾಗಿ ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್, ಎಸ್.ಟಿ.ಮೋರ್ಚಾ ಅಧ್ಯಕ್ಷರಾಗಿ ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ರಂಗನಾಥ್, ಎಸ್.ಸಿ.ಮೋರ್ಚಾ ಅಧ್ಯಕ್ಷರಾಗಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ರಂಗನಾಥ್ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬಸ್ ಹರಿದು  ಕಾಲು ಊನ
ಚಿಕ್ಕನಾಯಕನಹಳ್ಳಿ: ಚಾಲಕನ ಅಜಾಗರೂಕತೆಯಿಂದಾಗಿ ಬೈಕ್‌ನಲ್ಲಿ ಹಿಂಬದಿ ಕುಳಿತಿದ್ದ  ಯುವಕನಿಗೆ ಹಿಂದಿನಿಂದ ಬಸ್ ಗುದ್ದಿದ ಪರಿಣಾಮ ಯುವಕನ ಕಾಲು ಮುರಿದ ಘಟನೆ ಪಟ್ಟಣದ ಎಂ.ಜಿ. ಗೇಟ್ ಬಳಿ ನಡೆದಿದೆ. ಶುಕ್ರವಾರ ಸಾಯಂಕಾಲ 5 ಗಂಟೆ ಸಮಯದಲ್ಲಿ ಪಟ್ಟಣದ ಎಂ.ಜಿ. ಗೇಟ್ ಬಳಿ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಕೊಡಲಾಗರ ಗ್ರಾಮದ ಜಗದೀಶ್(31) ಎಂಬ ಯುವಕನ ಮೇಲೆ ಚಾಲಕ ಅಜಾಗರೂಕತೆಯಿಂದ ಬಸ್ ಚಲಿಸಿದ ಪರಿಣಾಮ ಯುವಕನ ಕಾಲ ಮೇಲೆ ಬಸ್ ಹರಿದು ತೀವ್ರವಾಗಿ ಗಾಯಗೊಂಡಿದ್ದಾನೆ. ಆತನ ಕಾಲಿನ ಮೂಳೆಗಳು ಜಜ್ಜಿಹೋದ ಪರಿಣಾಮ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞರಾದ ಎನ್.ಎಂ. ಶಿವಕುಮಾರ್ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕಳುಹಿಸಿದ್ದಾರೆ.
ನಾಳೆ ಶಿಕ್ಷಕರಿಗಾಗಿ ಕ್ರೀಡಾಕೂಟ
ಶಿರಾ: ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ. 1 ರಂದು ಶಿಕ್ಷಕರಿಗಾಗಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿದ್ದು, ಆಸಕ್ತ ಶಿಕ್ಷಕರು ಪಾಲ್ಗೊಳ್ಳುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿರಾ ಘಟಕದ ಅಧ್ಯಕ್ಷ ಎಚ್. ಹಿಮಂತರಾಜು ಹಾಗೂ ಪ್ರಧಾನಕಾರ್ಯದರ್ಶಿ ಕೆ.ಸಿ.ಜೀವನ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9632178279 ಅಥವಾ 9972762069 ಸಂಪರ್ಕಿಸುವಂತೆ ಕೋರಲಾಗಿದೆ.
ಸೆ. 4 ರಂದು ತಾಲೂಕು ನಿವೃತ್ತ ನೌಕರರ ಸಭೆ
ಶಿರಾ: ತಾಲೂಕು ನಿವೃತ್ತ ನೌಕರರ ಸಂಘದ ವತಿಯಿಂದ ಸೆ. 4 ರಂದು ತಾಲೂಕು ನಿವೃತ್ತ ನೌಕರರ ಸಭೆ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಅಂದು ಬೆಳಿಗ್ಗೆ 11 ಗಂಟೆಗೆ ತಾವರೆಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಡೆಯುವ ಸಮಾರಂಭವನ್ನು ನಿವೃತ್ತ ರೇಲ್ವೆ ಅಧೀಕ್ಷಕ ದೌವಲತ್ ಸಿಂಗ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಜಿ.ಎಲ್.ರಾಮಣ್ಣ, ಅಧ್ಯಕ್ಷತೆ ವಹಿಸುವರು. ಪ್ರೊ. ಕೆ.ಹನುಮಂತರಾಯಪ್ಪ, ಪ್ರಾಚಾರ್ಯ ದೇವರಾಜು, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಕ್ರೀಡಾಕೂಟಕ್ಕೆ ಚಾಲನೆ
ಅರಸೀಕೆರೆ: ಕ್ರೀಡೆಗಳು ಸೌಹಾರ್ದತೆ ಬೆಳೆಸಲು ಹಾಗೂ ಓದಿಗೆ ಸ್ಫೂರ್ತಿದಾಯಕ. ಮಕ್ಕಳು ಮುಕ್ತಮನಸ್ಸಿನಿಂದ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕೆಂದು ತಾಪಂ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ ಕರೆ ನೀಡಿದರು.
ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ  ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಯಿಂದ ಉತ್ತಮ ಆರೋಗ್ಯ, ಸದೃಢ ಮನಸ್ಸು ಮತ್ತು ಮಾನಸಿಕ ಸ್ಥೈರ್ಯವನ್ನು ವೃದ್ಧಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕ್ರೀಡೆಗಳಲ್ಲಿ ಸೋಲು ಹಾಗೂ ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪರಸ್ಪರರು ಪ್ರೀತಿ, ವಿಶ್ವಾಸ ಗಳಿಸಲು ಕ್ರೀಡೆಗಳು ನೆರವಾಗಬೇಕು. ಶೈಕ್ಷಣಿಕ ಚಟುವಟಿಕೆಗಳಲ್ಲಿ ಓದು ಹೇಗೆ ಮುಖ್ಯವೋ ಆಟೋಟ ಚಟುವಟಿಕೆಗಳು ಕೂಡ ಅಷ್ಟೇ ಮುಖ್ಯ. ಭಾಗವಹಿಸಿರುವ ಶಾಲಾ ತಂಡಗಳು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಕಿವಿಮಾತು ಹೇಳಿದ ಅವರು ಗೆದ್ದನೆಂದು ಹಿಗ್ಗಬೇಡ, ಸೋತನೆಂದು ಕುಗ್ಗಬೇಡ ಎಂಬ ನಾಣ್ಣುಡಿಯಂತೆ ಸ್ಪರ್ಧಾತ್ಮಕವಾಗಿ ಪೈಪೋಟಿ ನಡೆಸಿ ಗೆಲವು ಸಾಧಿಸಬೇಕೆಂದರು.
 ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ನಟರಾಜ್ ಮಾತನಾಡಿ, ಸದೃಢ ದೇಹದಿಂದ ಸದೃಢ ಮನಸ್ಸು ರೂಪಿಸಿಕೊಳ್ಳಲು ಸಾಧ್ಯ.
ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ಗೆಲುವು ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವೇಗೌಡ, ಪ್ರೌಢ ಶಾಲೆ ಸಹ ಶಿಕ್ಷಕರ ಸಂಘ  ತಾಲೂಕು ಅಧ್ಯಕ್ಷ ಕಲ್ಯಾಣಕುಮಾರ್, ಕಾರ್ಯದರ್ಶಿ ಮೋತಿಲಾಲ್‌ನಾಯಕ್ ಇದ್ದರು. ಇದೇ ವೇಳೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ತಿಮ್ಮೇಶ್ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದರು.
ಕೆಜೆಪಿ ತಳಮಟ್ಟದಿಂದ ಕಟ್ಟಲು ಪ್ರಯತ್ನ
ಕ.ಪ್ರ.ವಾರ್ತೆ , ಅರಸೀಕೆರೆ , ಆ.30
ತಾಲೂಕಿನಲ್ಲಿ ಕೆಜೆಪಿ ಪಕ್ಷವನ್ನು ಕೆಳಮಟ್ಟದಿಂದ ಸದೃಢವಾಗಿ ಕಟ್ಟುವ ನಿಟ್ಟಿನಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೆಜೆಪಿ ಮುಖಂಡ ಕಾಟೀಕೆರೆ ಮೋಹನ್, ಜಯದೇವ್, ಚಂದ್ರಶೇಖರ್, ಕಣಕಟ್ಟೆ ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಮುಖಂಡರ ಸಭೆಯಲ್ಲಿ ಪಕ್ಷದ ಸ್ಥಿತಿಗತಿಗಳನ್ನು ಕುರಿತು ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್  ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ಸೇರಿದಂತೆ ಇನ್ನಿತರ ನಾಯಕರನ್ನು ಖುದ್ದು ಭೇಟಿ ಮಾಡಿ ಚುನಾವಣೆ ನಂತರ ನಡೆದಿರುವ ವಿದ್ಯಮಾನಗಳನ್ನು ಗಮನಕ್ಕೆ ತರಲಾಗುವುದು ಎಂದರು.
ಕ್ಷೇತ್ರದಲ್ಲಿ ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಪಕ್ಷದ ವಿರುದ್ಧ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅಂತಹ ಯಾವುದೇ ಬೆಳವಣಿಗೆಗಳು ಪಕ್ಷದಲ್ಲಿ ನಡೆದಿಲ್ಲ. ಪಕ್ಷ ಅಸ್ತಿತ್ವಕ್ಕೆ ಬಂದು ಕೇವಲ 5-6 ತಿಂಗಳು ಕಳೆದಿವೆ ಅಷ್ಟೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement