ಕ್ರೀಡೆಯಿಂದ ದೈಹಿಕ, ಮಾನಸಿಕ, ಧೈರ್ಯ, ಶಿಸ್ತು ಸಾಧ್ಯ: ಲೋಕೇಶ್ವರ
ತಿಪಟೂರು: ಯಾವುದೇ ಒಂದು ರಾಷ್ಟ್ರ ಜಗತ್ತಿನಲ್ಲಿ ಬಲಶಾಲಿ ರಾಷ್ಟ್ರವಾಗಿದೆ ಎನ್ನಲು ಆ ರಾಷ್ಚ್ರದ ಕ್ರೀಡಾಸಾಧನೆಯೂ ಪ್ರಮುಖವಾಗಿರುತ್ತದೆ ಎಂದು ತಾಲೂಕು ಕೆಜೆಪಿ ಮುಖಂಡ ಲೋಕೇಶ್ವರ ತಿಳಿಸಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶ ದೇಶಗಳ ನಡುವೆ ಸಾಮರಸ್ಯ ಹಾಗೂ ಉತ್ತಮ ಬಾಂಧವ್ಯಗಳನ್ನು ಬೆಳೆಸಲು ಕ್ರೀಡೆ ಪ್ರಮುಖ ಸಾಧನವಾಗಿದೆ. ಆಗಸ್ಟ್ 29 ದೇಶ ಕಂಡ ಮಹಾನ್ ಕ್ರೀಡಾಪಟು ಧ್ಯಾನ್‌ಚಂದ್ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾಪ್ರಾಧಿಕಾರವು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಣೆಗೆ ತಂದಿರುವುದು ಕ್ರೀಡಾಪಟುಗಳಿಗೆ ಸಲ್ಲಿಸುವಂತ ಗೌರವವಾಗಿದೆ. ಇಂದಿನ ಯುವಕರಲ್ಲಿ ದೈಹಿಕ
ಬೆಳವಣಿಗೆ ಕುಂಠಿತವಾಗುತ್ತಿದ್ದು, ಯುವಕರು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುವ ಜೊತೆಗೆ ಧೈರ್ಯ, ಶಿಸ್ತು ಬದ್ಧತೆಗಳನ್ನು ಕಲಿಸಿಕೊಡುತ್ತದೆ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಬಿ.ಆರ್.ಮಂಜುನಾಥ್ ಧ್ಯಾನ್‌ಚಂದ್ ರಾಷ್ಟ್ರಮಟ್ಟದ ದೊಡ್ಡ ಕ್ರೀಡಾಪಟು. ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿಯಲ್ಲಿ ಚಿನ್ನದ ಪದಕ ಗೆಲ್ಲುವಂತೆ ಮಾಡಿ ರಾಷ್ಟ್ರದ ಕೀರ್ತಿಯನ್ನು ಪ್ರಖ್ಯಾತಿಗೊಳಿಸಿದ ಅವರ ಜನ್ಮ ದಿನವನ್ನು ರಾಷ್ಚ್ರೀಯ ಕ್ರೀಡಾದಿನವನ್ನಾಗಿ ಆಚರಣೆ ಮಾಡುತ್ತಿರುವು ಹೆಮ್ಮೆಯ ಸಂಗತಿಯಾಗಿದೆ ಎಂದರು. ಬಿಇಓ ಮನಮೋಹನ್ ಮತ್ತು ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಕೆ.ಎನ್. ಶಿವರಾಮಯ್ಯ ಮಾತನಾಡಿದರು.
ಕ್ರೀಡೆಯನ್ನು ಆಯೋಜಿಸಿದ್ದ ಬಿದಿರಾಂಬಿಕಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಪುಟ್ಟತಾಯಮ್ಮ,ಬಸವರಾಜು, ಚಂದ್ರಶೇಖರ್, ಪ.ಪೂ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ರಂಗನಾಥ್, ಬಸವರಾಜು, ಕಾರ್ಯದರ್ಶಿ ಕಾಂತರಾಜು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.