ಪಾರ್ಕ್ನಲ್ಲಿ 'ಕಸ'ವಿಸಿ
ಕ.ಪ್ರ.ವಾರ್ತೆ , ತುಮಕೂರು , ಆ. 30
ತುಮಕೂರಿನ ವಿನೋಬನಗರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಪಾರ್ಕ್ನಲ್ಲಿ ಕಸ ವಿಲೇವಾರಿ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧ್ಯಕ್ಷ ವಿಷ್ಣುವರ್ಧನ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಪಾರ್ಕಿನ ಅಭಿವೃದ್ಧಿ ಕಾರ್ಯಗಳು ಸುಮಾರು 3 ವರ್ಷಗಳಿಂದ ಆಮೆ ಗತಿಯಲ್ಲಿ ನಡೆಯುತ್ತಿದೆ. ಹೀಗೆ ಸುಮಾರು 2 ತಿಂಗಳಿಂದ ಬಹುತೇಕ ವಾರ್ಡ್ಗಳ ಚರಂಡಿಯ ಕಸವನ್ನು ತಂದು ಪಾರ್ಕಿನಲ್ಲಿ ಗುಡ್ಡೆ ಮಾಡಿರುತ್ತಾರೆ. ಅದರಿಂದ ಪಾರ್ಕಿನಲ್ಲಿ ಗಲೀಜು ನೀರು ಶೇಖರಣೆಯಾಗಿ ದುರ್ವಾಸನೆ ಬರುತ್ತಿದೆ ಎಂದಿದ್ದಾರೆ.
ಇದರಿಂದಾಗಿ ಸುತ್ತ-ಮುತ್ತಲಿನ ಮನೆಗಳಲ್ಲಿ ವಾಸಿಸುವವರಿಗೆ ಇದು ಅಸಹನೀಯವಾಗಿರುತ್ತದೆ. ಇದರಿಂದಾಗಿ ಅತಿಯಾದ ಸೊಳ್ಳೆಗಳು ಹಾಗೂ ವಿಚಿತ್ರ ಹುಳುಗಳು ಕಾಣಿಸಿಕೊಂಡಿದ್ದು, ಈಗಾಗಲೇ ಕೆಲವು ಸಾರ್ವಜನಿಕರಿಗೆ ಜ್ವರ, ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅಲ್ಲದೆ ಮಲೇರಿಯಾ, ಡೆಂಘೀ ಮುಂತಾದ ಕಾಯಿಲೆಗಳು ಹರಡುವ ಸಂಭವವಿದ್ದು, ಇದರಿಂದ ಸಾರ್ವಜನಿಕರು ಭಯದಿಂದ ದಿನದೂಡುವಂತಾಗಿದೆ. ಅಲ್ಲದೆ ಸದರಿ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ನಗರಸಭೆ ವತಿಯಿಂದ ಫಾಗಿಂಗ್ ಮಾಡುವುದಾಗಲೀ, ಡಿ.ಡಿ.ಟಿ. ಸಿಂಪರಣೆ ಮಾಡುವುದಾಗಲಿ ಮಾಡಿಲ್ಲ ಎಂದಿದ್ದಾರೆ.
ದೂರು ಕೊಟ್ಟರೂ ಕ್ರಮವಿಲ್ಲ: ಈ ಬಗ್ಗೆ ಸಂಬಂಧಪಟ್ಟ ಸಾರ್ವಜನಿಕರು ಹಲವು ಬಾರಿ ನಗರಸಭೆಗೆ ದೂರು ನೀಡಿದಾಗ್ಯೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಜಿಲ್ಲಾಧ್ಯಕ್ಷ ಎನ್.ಎಸ್. ವಿಷ್ಣುವರ್ಧನ ತಿಳಿಸಿದರು.
ಆದ್ದರಿಂದ ಜಿಲ್ಲಾಧಿಕಾರಿಗಳು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, 3 ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿರುವ ಪಾರ್ಕಿನ ಅಭಿವೃದ್ಧಿ ಕಾರ್ಯವನ್ನು ಅತಿ ಜರೂರಾಗಿ ಪೂರ್ಣಗೊಳಿಸಬೇಕೆಂದು ಕೋರಿದ್ದಾರೆ.
ವಿನೋಬನಗರ ಮತ್ತು ಸುತ್ತ-ಮುತ್ತಲಿರುವ ಪಿ.ಹೆಚ್. ಕಾಲೋನಿ, ಹೆಗ್ಗಡೆ ಕಾಲೋನಿ, ಕುರಿಪಾಳ್ಯ, ನಜರಾಬಾದ್, ಈದ್ಗ ಮೊಹಲ್ಲಾ ಮುಂತಾದ ಜಾಗಗಳು ಅತಿಯಾದ ಜನದಟ್ಟಣೆಯಿಂದ ತುಂಬಿದ ಪ್ರದೇಶಗಳಾಗಿದ್ದು, ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಸದರಿ ಪ್ರದೇಶಗಳಲ್ಲಿ ಫಾಗಿಂಗ್ ಮಾಡಬೇಕೆಂದು ಹಾಗೂ ಡಿ.ಡಿ.ಟಿ. ಸಿಂಪರಣೆ ಮಾಡಬೇಕೆಂದು ಕೋರಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಿ: ಈ ಬಗ್ಗೆ ಸಾರ್ವಜನಿಕರು ನಗರಸಭೆಗೆ ಹಲವು ಬಾರಿ ದೂರು ನೀಡಿದರೂ ಸಹ ಯಾವೊಂದು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಸ್ಥಳಗಳಿಗೆ ತಾವು ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಈ ಒಂದು ಬೇಜವಾಬ್ದಾರಿಯುತ ಕ್ರಮಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ಪರವಾಗಿ ಜೆ.ಹೆಚ್.ಎಂ. ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಮೇಲ್ಕಂಡ ಕೊರತೆಗಳನ್ನು ಆದಷ್ಟು ಬೇಗ ಪರಿಹರಿಸದಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಬೃಹತ್ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕ.ರ.ವೇ. ಜಿಲ್ಲಾಧ್ಯಕ್ಷ ಎನ್.ಎಸ್. ವಿಷ್ಣುವರ್ಧನ, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಮೂರ್ತಿ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಕ್ಷಯ್ ಚೌದರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ್ ಕುಮಾರ್ ಜಿ.ಆರ್., ಜಿಲ್ಲಾ ಉಪಾಧ್ಯಕ್ಷ ದೀಪಕ್ ಟಿ.ಎಲ್., ತುಮಕೂರು ತಾಲೂಕು ಅಧ್ಯಕ್ಷ ಸತೀಶ್ ಕುಮಾರ್ ಡಿ.ಎನ್., ಗ್ರಾಮಾಂತರ ವಿದ್ಯಾರ್ಥಿ ಘಟಕದ ಅಧ್ಯಕ್ಷ ರಾಜೇಶ್ ಜಿ.ಎಲ್., ತುಮಕೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಚಂದ್ರಶೇಖರ್, ಮಹಿಳಾ ಘಟಕದ ಗೌರವಾಧ್ಯಕ್ಷೆ ಜಯಸುಧಾ ಹಾಗೂ ಕ.ರ.ವೇ. ಮುಖಂಡರಾದ ಮಂಜುನಾಥ್ ಆರ್., ರಾಜೇಶ್ ಡಿ.ಟಿ., ಮಹೇಶ್ ಎಸ್., ಯೋಗೀಶ್ ಜಿ., ಆರ್ಮುಗಂ, ಶಿವರಾಜು ಇನ್ನು ಮುಂತಾದವರು ಉಪಸ್ಥಿತರಿದ್ದರು.