ಅಂಕ ಗಳಿಕೆ ಮೇಲೆ ಮಕ್ಕಳ ಸಾಮರ್ಥ್ಯ ಅಳತೆ ಬೇಡ
ತುರುವೇಕೆರೆ: ಮಕ್ಕಳು ಶಾಲೆಯಲ್ಲಿ ಗಳಿಸುವ ಅಂಕದ ಮೇಲೆ ಮಕ್ಕಳ ಸಾಮರ್ಥ್ಯವನ್ನು ಅಳೆಯಬೇಡಿ. ಮಕ್ಕಳು ಯಾವ ಕ್ಷೇತ್ರದಲ್ಲಿ ಉತ್ತಮ ಅಭಿರುಚಿ ಹೊಂದಿದ್ದಾರೆ ಎಂಬುದನ್ನು ಅರಿತು ಅವರಿಗೆ ಆ ಕ್ಷೇತ್ರದಲ್ಲಿ ಸೂಕ್ತ ಸಲಹೆ ಸಹಕಾರ ನೀಡಿದಲ್ಲಿ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಲಯನ್ಸ್ ಕ್ಲಬ್ನ ಕೋ ಆರ್ಡಿನೇಟರ್ ಲಯನ್ ಅನಿಲ್ ಕುಮಾರ್ ಹೇಳಿದರು.
ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ನಡೆದ ಮಕ್ಕಳ ಸಪ್ತಾಹ ದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಶಿಕ್ಷಕರು ಹಾಗೂ ಪೋಷಕರೂ ಮಕ್ಕಳ ಮನೋಭಾವವನ್ನು ಅರಿತು ತರಬೇತು ನೀಡಬೇಕು ಎಂದರು. ಶಿಕ್ಷಣಕ್ಕೆ ಒತ್ತು ನೀಡುವಷ್ಟು ಮಹತ್ವವನ್ನು ಪಠ್ಯೇತರ ಚಟುವಟಿಕೆಗೂ ನೀಡಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳಿಗೆ ಶಿಕ್ಷಣವನ್ನು ಒತ್ತಡ ನೀಡುವುದಕ್ಕಿಂತ ಅವರಿಗೆ ಆಸಕ್ತಿ ಹುಟ್ಟಿಸುವ ವಿಧಾನವನ್ನು ಅರಿತು ಶಿಕ್ಷಣ ನೀಡಬೇಕು ಎಂದರು. ಈಗ ಶೈಕ್ಷಣಿಕ ಕ್ಷೇತ್ರಕ್ಕೆ ಇರುವಷ್ಟೇ ಆದ್ಯತೆ ಕ್ರೀಡಾ ಕ್ಷೇತ್ರಕ್ಕೂ ಇದೆ. ಸಚಿನ್ ತಂಡೋಲ್ಕರ್ ವಿದ್ಯಾಭ್ಯಾಸದಲ್ಲಿ ಅಷ್ಟೇನು ಸಾಧನೆ ಮಾಡಿದವರಲ್ಲ. ಆದರೂ ಆವರು ಇಂದು ಕ್ರಿಕೆಟ್ ಜಗತ್ತಿನ ದಂತ ಕಥೆಯಾಗಿ ವಿಶ್ವದಾದ್ಯಂತ ಖ್ಯಾತಿಯಾದರು. ಯಾವುದೇ ಕ್ಷೇತ್ರವಾದರೂ ಸಾಧನೆ ಎಂಬುದು ಮುಖ್ಯ ಎಂದು ಅನಿಲ್ ಕುಮಾರ್ ಹೇಳಿದರು.
ಮಕ್ಕಳ ಸಪ್ತಾಹದಲ್ಲಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸುಮಾರು 650 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಹುಮಾನ ವಿಜೇತರಾದರು. ಸಮಾರಂಭದಲ್ಲಿ ಮಕ್ಕಳ ಸಪ್ತಾಹದ ಅಧ್ಯಕ್ಷ ಟಿ.ಎ.ವಿ.ಗುಪ್ತ, ಲಯನ್ಸ್ ಕ್ಲಬ್ ನ ಅಧ್ಯಕ್ಷ ಜಗರಾಮ್ ಪಟೇಲ್, ಕಾರ್ಯದರ್ಶಿ ಆರ್.ಸತ್ಯನಾರಾಯಣ್, ಡಾ.ಎ.ನಾಗರಾಜು, ಎಸ್.ಎಂ.ಕುಮಾರಸ್ವಾಮಿ, ಟಿ.ಬಿ. ಮಂಜುನಾಥ್, ಗಂಗಾಧರ್ ದೇವರ ಮನೆ ಎಂ.ಎಸ್.ಭಾಸ್ಕರ್ ಮೊದಲಾದವರು ಇದ್ದರು. ಗಂಗಾಧರ್ ದೇವರ ಮನೆ ಸ್ವಾಗತಿಸಿದರು. ಭಾಸ್ಕರ್ ವಂದಿಸಿದರು. ಡಾ.ಎ.ನಾಗರಾಜು ಕಾರ್ಯಕ್ರಮ ನಿರೂಪಿಸಿದರು.