ಏಡ್ಸ್ ಬಗ್ಗೆ ಜನ ಜಾಗೃತಿ ಸಹಿ ಸಂಗ್ರಹ
ತುಮಕೂರು: ಮಹಾಮಾರಿ ಏಡ್ಸ್ ಅನ್ನು ಕೊನೆಗಾಣಿಸಲು ತುಮಕೂರಿನಲ್ಲಿ ಬೃಹತ್ ಜನ ಜಾಗೃತಿ ಸಹಿ ಸಂಗ್ರಹಣೆ ನೆರವೇರಿಸಲಾಯಿತು.
ಒಂದುಗೂಡು ಮಹಿಳಾ ಸಂಘ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ-ತುಮಕೂರು, ಕೆ.ಎಚ್.ಪಿ ಟಿ, ಕೆಸಾಪ್ಸ್ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಭಾನುವಾರ ತುಮಕೂರಿನಲ್ಲಿ ಹಿಂಸೆಯನ್ನು ಕೊನೆಗಾಣಿಸಿ, ಹೆಚ್ಐವಿ, ಏಡ್ಸ್ ತೊಲಗಿಸಿ ಎಂಬ ಘೋಷ ವಾಕ್ಯದೊಂದಿಗೆ ಜನ ಜಾಗೃತಿ ಸಹಿಸಂಗ್ರಹಿಸಲಾಯಿತು.
ಜಿಲ್ಲಾ ಆಸ್ಪತ್ರೆ ಆವರಣದಿಂದ ಅಶೋಕ ರಸ್ತೆಯ ಮೂಲಕ ಜಿಲಾ ಆಸ್ಪತ್ರೆಯ ಸಭಾಂಗಣದವರೆಗೆ ಜಾಥಾ ಮೂಲಕ ಜನರಲ್ಲಿ ಹೆಚ್ ಐ ವಿ ಅರಿವಿನ ಮಾಹಿತಿಯನ್ನು ಪ್ರಚಾರ ಮಾಡಲಾಯಿತು.
ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಚೆನ್ನಮಲ್ಲಯ್ಯನವರು ಚಾಲನೆ ನೀಡಿದರು.
ಈ ದಿನದ ಅಂಗವಾಗಿ ವಿಶೇಷವಾಗಿ ನಡೆದ ಅರೇಂಜ್ ದ ವಲ್ಡ್ ಕಾರ್ಯಕ್ರಮದಲ್ಲಿ ಒಂದುಗೂಡು ಮಹಿಳಾ ಸಂಘದ ಜಿಲ್ಲಾ ಸಂಯೋಜನಾಧಿಕಾರಿ ರವೀಂದ್ರ. ಮ. ಹೆಗಡೆಯವರು ಅರೇಂಜ್ ದ ವರ್ಲ್ದ್ ಆಂದೋಲನದ ಪರಿಕಲ್ಪನೆಯ ಬಗ್ಗೆ ಹೇಳಿದರು.
ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯವರ ಕರೆಯ ಮೇಲೆ ಜಗತ್ತಿನಾದ್ಯಂತ 16 ದಿನಗಳ ಆಂದೋಲನವನ್ನು ಬರುವ ನವೆಂಬರ್ 25 ರಿಂದ ಡಿಸೆಂಬರ್ 10 ರವರೆಗೆ ಆಚರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ನಿರ್ಲಕ್ಷಿತ ಮಹಿಳೆಯರು ಅದರಲ್ಲೂ ಲೈಂಗಿಕ ವೃತ್ತಿ ನಿರತ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಮಾಡಲು ಶ್ರಮಿಸುತ್ತಿರುವ ಒಂದುಗೂಡು ಮಹಿಳಾ ಸಂಘದ ಸಂವೇದನ ಯೋಜನೆಯ ಸಹಭಾಗಿತ್ವದಲ್ಲಿ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನಾಚರಣೆ ಸಂದರ್ಭದಲ್ಲಿ ಹಿಂಸೆಯನ್ನು ಕೊನೆಗಾಣಿಸಿ, ಎಚ್ಐವಿ, ಏಡ್ಸ್ ತೊಲಗಿಸಿ ಎಂಬ ಬಗ್ಗೆ ಸಹಿ ಸಂಗ್ರಹಣೆಯನ್ನು. ಡಾಪ್ಕು ಅವರ ಜೊತೆ ಸಹಭಾಗಿತ್ವದಲ್ಲಿ ಮಾಡಲಾಯಿತು.
ಸಹಿ ಸಂಗ್ರಹಣೆ ಕಾರ್ಯಕ್ರಮಕ್ಕೆ ಜಿ.ಪಂ. ಸಿಇಓ ಗೋವಿಂದರಾಜು ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಚೆನ್ನಮಲ್ಲಯ್ಯ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸನತ್ಕುಮಾರ್, ಏ.ಆರ್.ಟಿ ವೈದ್ಯಾಧಿಕಾರಿ ಡಾ.ಮಮತಾ, ಮಂಜುಳ ಬಿಜಿ, ಕಾರ್ಯದರ್ಶಿ ಶಶಿಕಲಾ ಮತ್ತು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.