ತಾಲೂಕು ಕಚೇರಿ ಕಾರ್ಯವೈಖರಿಗೆ ತೀವ್ರ ಅಸಮಾಧಾನ
ಕುಣಿಗಲ್: ಶಾಸಕರಾದ ತಾವೇ, ಕೆಲ ದಿನಗಳ ಹಿಂದೆ ನೀಡಿದ ಅರ್ಜಿಗೆ ಸಂಬಂಧಿಸಿದಂತೆ ನಿರ್ವಹಿಸಲಾಗಿರುವ ಕಡತ, ಯಾರ ಬಳಿ ಇದೆ ಎಂಬ ಉತ್ತರವು ದೊರೆಯದಂತ ಸ್ಥಿತಿಗೆ ತಲುಪಿರುವಾಗ, ಇನ್ನು ಸಾಮಾನ್ಯ ಜನರು ನೀಡುವ ಅರ್ಜಿಯ ಗತಿಯೇನು. ಇದು ತಾಲೂಕು ಕಚೇರಿಯ ಕಾರ್ಯವೈಖರಿ, ಇನ್ನು ಪುರಸಭೆ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಶಾಸಕ ಡಿ.ನಾಗರಾಜಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ಕಂದಾಯಭವನದಲ್ಲಿ ನೂತನವಾಗಿ ಪ್ರಾರಂಭಿಸಿರುವ ಸಕಾಲ ಸಹಾಯವಾಣಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ರಾಜ್ಯಮಟ್ಟದಿಂದ ಹಿಡಿದು ಜಿಲ್ಲಾಮಟ್ಟದವರೆಗೂ ತಾಲೂಕು ಕಚೇರಿ ಮತ್ತು ಪುರಸಭೆಯಲ್ಲಿನ ಕೆಟ್ಟ ಆಡಳಿತ ವ್ಯವಸ್ಥೆಗೆ ಸರಿದಾರಿಗೆ ತರುವ ನಿಟ್ಟಿನಲ್ಲಿ ಚರ್ಚೆಯಾಗುತ್ತಿದ್ದರೂ ಆಡಳಿತ ವ್ಯವಸ್ಥೆ ಸರಿದಾರಿಗೆ ಬರುತ್ತಿಲ್ಲ. ಇಂತಹವರಿಂದ ಸೂಕ್ತ ಸೇವೆ ಪಡೆಯಲು ಸಕಾಲ ಯೋಜನೆ ಜಾರಿಗೆ ತಂದರೂ, ಅದಕ್ಕೊಂದು ನೆಪಹೇಳುವ ವ್ಯವಸ್ಥೆಯನ್ನು ಕೆಲ ಅಧಿಕಾರಿಗಳು, ಸಿಬ್ಬಂದಿಗಳು ರೂಢಿಸಿಕೊಂಡಿದ್ದಾರೆ. ಎರಡೂ ಕಚೇರಿಯಲ್ಲಿ ಜನಸಾಮಾನ್ಯರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಮನೋಭಾವವನ್ನು ಅಧಿಕಾರಿ, ಸಿಬ್ಬಂದಿಗಳು ಹೊಂದದ ಹೊರೆತು ಯಾವ ಕಾನೂನು ತಂದರೂ ಎನೂ ಪ್ರಯೋಜನವಾಗದು ಎಂದರು.
ದಾರಿಗೆ ತರುವವರು ಯಾರು: ಪುರಸಭೆ ಆಡಳಿತಾಧಿಕಾರಿಯಾಗಿ ಉಪವಿಭಾಗಾಧಿಕಾರಿಗಳೇ ಇದ್ದರೂ, ತಾಲೂಕು ಕಚೇರಿಯ ಮೇಲಾಧಿಕಾರಿಗಳಾಗಿ ಇದೇ ಉಪವಿಭಾಗಾಧಿಗಳಿದ್ದರೂ ಎರಡೂ ಕಚೇರಿಗಳಲ್ಲಿ ಜನಪರ ಸಮಸ್ಯೆಗಳ ಇತ್ಯರ್ಥವಾಗುತ್ತಿಲ್ಲ. ಈ ರೀತಿಯಾದರೆ ಇವರನ್ನು ಸರಿದಾರಿಗೆ ತರುವವರು ಯಾರು,
ತಾಲೂಕು ಮಟ್ಟದ ಅಧಿಕಾರಿಗಳು ಮಾಡುವ ಕೆಲಸಕ್ಕೆ ಜಿಲ್ಲಾಧಿಕಾರಿ ಅಥವಾ ರಾಜ್ಯಮಟ್ಟದ ಕಾರ್ಯದರ್ಶಿಗಳನ್ನು ಕರೆತಂದು ಕೆಲಸ ಮಾಡಿಸಲಿಕ್ಕಾಗುತ್ತದೆಯೆ, ಸ್ಥಳೀಯ ಸಿಬ್ಬಂದಿಗಳ ವರ್ತನೆ ಇದೇ ರೀತಿ ಮುಂದುವರೆದಿದ್ದೇ ಆದಲ್ಲಿ, ಜನಪ್ರತಿನಿಧಿಗಳು ತಮ್ಮವರಸೆ ತೋರಿಸಿ ಕೆಲವರನ್ನು ಮನೆಗೆ ಕಳಿಸುವ ಪರಿಪಾಠಕ್ಕೆ ಇಳಿಯಬೇಕಾಗುತ್ತೆ, ಈ ಸ್ಥಿತಿಗೆ ಅವಕಾಶ ನೀಡದೆ ಪ್ರಾಮಾಣಿಕವಾಗಿ, ತಾವು ಪಡೆಯುವ ಸಂಬಳಕ್ಕಾದರೂ ಜನಸಾಮಾನ್ಯರ ಸೇವೆಗೆ ಮುಂದಾಗಬೇಕೆಂದರು.
ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ಕೆಲ ಅಧಿಕಾರಿಶಾಹಿಗಳ ನಿರ್ಲಕ್ಷ್ಯಮನೋಭಾವದಿಂದ ಸರ್ಕಾರದ ಸೇವೆಗಳು ಜನಸಾಮಾನ್ಯರಿಗೆ ಲಭ್ಯವಾಗುವುದು ವಿಳಂಬವಾಗುವುದನ್ನು ತಪ್ಪಿಸಲು ಸರ್ಕಾರ ಸಕಾಲ ಯೋಜನೆ ಜಾರಿಗೆ ತಂದಿದೆ. ಅಧಿಕಾರಿಗಳು, ಸಿಬ್ಬಂದಿಗಳು ಜನರನ್ನು ಆಳುವುದಕ್ಕೆ ಇಲ್ಲ ಜನಸೇವಕರೆಂಬುದನ್ನು ಅರಿತು ಸಮರ್ಪಕ ಸೇವೆ ಸಲ್ಲಿಸುವ ಮನೋಭಾವಹೊಂದಿ, ಯೋಜನೆಯ ಅನುಷ್ಠಾನಕ್ಕೆ ಬದ್ಧತೆಯಿಂದ ಶ್ರಮಿಸಬೇಕೆಂದರು. ತಹಸೀಲ್ದಾರ್ ಪುಟ್ಟನರಸಯ್ಯ ಸರ್ಕಾರದ 42 ಇಲಾಖೆಯ 375 ಸೇವೆಗಳು ಸಕಾಲದಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗೆ ಈ ಸಹಾಯವಾಣಿಯ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ತಾಪಂ ಅಧ್ಯಕ್ಷೆ ತೇಜಸ್ವಿನಿ, ಸಿಪಿಐ ಧರ್ಮೇಂದ್ರ, ಸಹಾಯಕ ಕೃಷಿ ನಿರ್ದೇಶಕ ನಾರಾಯಣಸ್ವಾಮಿ, ಜಿಪಂ ಎಇಇ ಸಣ್ಣಮರಿಗೌಡ ಸೇರಿದಂತೆ ವಿವಿಧ ಇಲಾಖಾದಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು, ಸಮಾರಂಭದಲ್ಲಿ ದಲಿತ ದೌರ್ಜನ್ಯ ಪ್ರಕರಣದ ಫಲಾನುಭವಿಗಳಿಗೆ, ರಾಷ್ಟ್ರೀಯ ಕುಟುಂಬ ಕ್ಷೇಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ, ಪ್ರಕೃತಿ ವಿಕೋಪದಲ್ಲಿ ಮಡಿದವರ ಕುಟುಂಬಕ್ಕೆ ಸಹಾಯಧನ ವಿತರಿಸಲಾಯಿತು.