ಪಾರ್ಥೆನಿಯಂ ಕೊಂಪೆಯಾಗಿದೆ ಪಾರ್ಕ್
ತುಮಕೂರಿನ ಬಿ.ಎಚ್. ರಸ್ತೆಯಲ್ಲಿರುವ ಪಾರ್ಕ್ ಅಕ್ಷರಶಃ ಪಾರ್ಥೆನಿಯಂ ಕೊಂಪೆಯಾಗಿದೆ. ಅತ್ಯಂತ ಪ್ರತಿಷ್ಠಿತ ಮತ್ತು ಜನನಿಬಿಡ ರಸ್ತೆಯಲ್ಲಿರುವ ಈ ಪಾರ್ಕ್ ನಿರ್ವಹಣೆಯಿಲ್ಲದೆ ಕೊಂಪೆಯಾಗಿದೆ.
ತುಮಕೂರು ನಗರದ ಮಧ್ಯ ಭಾಗದಲ್ಲಿರುವ ಈ ಪಾರ್ಕ್ನಲ್ಲಿ ಯಾವೊಂದು ಸೌಲಭ್ಯವೂ ಇಲ್ಲ. ಮಕ್ಕಳಿಗೆ ಸಂಜೆ ವೇಳೆ ಆಟವಾಡಲು ಅನುಕೂಲವಾಗಲು ಜಾರೋ ಬಂಡೆ ಸೇರಿದಂತೆ ಆಟಿಕೆ ವಸ್ತುಗಳನ್ನು ಇಡಲಾಗಿತ್ತು. ಆದರೆ ಎಲ್ಲವೂ ಹಾಳಾಗಿವೆ. ಈಗ ಯಾರೊಬ್ಬರು ಈ ಪಾರ್ಕ್ಗೆ ಬರುತ್ತಿಲ್ಲ.
ಆಳೆತ್ತರಕ್ಕೆ ಪಾರ್ಥೆನಿಯಂ ಬೆಳೆದಿರುವ ಪರಿಣಾಮ ಈ ಪಾರ್ಕ್ ಈಗ ಹಾವು, ಚೇಳು, ಹಂದಿಗಳಿಗೆ ಆಶ್ರಯ ತಾಣವಾಗಿದೆ. ತುಮಕೂರಿನಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಪಾರ್ಕ್ ಇದೆ. ಅದರಲ್ಲಿ ಇದು ಕೂಡ ಒಂದು. ಆದರೆ ನಿರ್ವಹಣೆ ಮಾತ್ರ ಎಳ್ಳಷ್ಟು ಇಲ್ಲ. ತುಮಕೂರಿನ ಮಧ್ಯಭಾಗದಲ್ಲಿ ಈ ಪಾರ್ಕ್ ಇರುವುದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳಿಗೆಲ್ಲಾ ಈ ಪಾರ್ಕ್ ಬಗ್ಗೆ ಮಾಹಿತಿ ಇದೆ. ಆದರೆ ಅದನ್ನು ಸ್ವಚ್ಛಮಾಡುವ ಇಚ್ಛಾಶಕ್ತಿಯನ್ನು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತೋರುತ್ತಿಲ್ಲ. ಪಾರ್ಕ್ ಅನ್ನು ವ್ಯವಸ್ಥಿತವಾಗಿ ನಿರ್ಮಿಸಿ ಎಂಬ ದೂರುಗಳು ನಗರಸಭೆಗೆ ನಿರಂತರವಾಗಿ ಬರುತ್ತಿದ್ದರೂ ಸಹ ನಗರಸಭೆಯವರು ಅದರ ಬಗ್ಗೆ ಗಮನ ಕೊಡುತ್ತಿಲ್ಲ. ಮಕ್ಕಳಿಗಾಗಿ ನಿರ್ಮಾಣಗೊಂಡಿದ್ದ ಈ ಪಾರ್ಕ್ ಈಗ ನಗರಸಭೆಯ ತ್ಯಾಜ್ಯ ಹಾಕುವ ಜಾಗವಾಗಿದೆ.
ಎಲ್ಲೆಂದರಲ್ಲಿ ಕಸವೋ ಕಸ
ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರು ಎಂದರೆ ಕಸದ ಊರು ಎಂಬ ಖ್ಯಾತಿ ಬಂದು ಬಿಟ್ಟಿದೆ. ತುಮಕೂರಿನ ಬಹುತೇಕ ಎಲ್ಲಾ ಪ್ರತಿಷ್ಠಿತ ಬಡಾವಣೆಗಳಲ್ಲೂ ಕೂಡ ಕಸದ ರಾಶಿ ತುಂಬಿ ತುಳುಕುತ್ತಿದೆ. ಆಯಾ ಬಡಾವಣೆಗಳಲ್ಲಿ ಇಟ್ಟಿರುವ ಕಸದ ತೊಟ್ಟಿ ತುಂಬಿ ಹೆಚ್ಚುವರಿ ಕಸ ನೆಲಕ್ಕೆ ಬೀಳುತ್ತಿದ್ದರೂ ಸಹ ನಗರಸಭೆಯವರು ಮಾತ್ರ ಜಾಣ ಮೌನ ವಹಿಸಿದ್ದಾರೆ. ಈಗಾಗಲೇ ಕಸ ವಿಲೇವಾರಿ ಮಾಡುವಂತೆ ಹಲವಾರು ಬಾರಿ ನಾಗರಿಕರು ಮನವಿ ಮಾಡಿದ್ದರೂ ಸಹ ನಗರಸಭೆಯ ಅಧಿಕಾರಿಗಳು ಕ್ಯಾರೇ ಅನ್ನುತ್ತಿಲ್ಲ.
ಕೆಲವು ಕಡೆ ಕಸದ ತೊಟ್ಟಿಯೇ ಮುರಿದು ಹೋಗಿದೆ. ಹೀಗಾಗಿ ರಸ್ತೆ ಪಕ್ಕದಲ್ಲಿ ಗುಡ್ಡದ ರೀತಿಯಲ್ಲಿ ಕಸಗಳು ಬಿದ್ದಿವೆ. ನಗರಸಭೆಯವರು ಮಾತ್ರ ಕಂಡು ಕಾಣದ ಹಾಗೆ ಇದ್ದು ಬಿಟ್ಟಿದ್ದಾರೆ. ಈಗಾಗಲೇ ಕಸ ವಿಲೇವಾರಿ ಮಾಡದೇ ಇರುವ ನಗರಸಭೆ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಆದರೂ ನಗರಸಭೆಯವರು ಮಾತ್ರ ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ.
ತುಮಕೂರಿನ ಗಾಂಧಿನಗರ, ಸೋಮೇಶ್ವರಪುರಂ, ಎಸ್ಐಟಿ, ಗೋಕುಲ, ಬಟವಾಡಿ, ಶಿರಾ ಗೇಟ್ ಹೀಗೆ ಪ್ರತಿಯೊಂದು ಬಡಾವಣೆಗಳಲ್ಲೂ ಕಸದ ದೊಡ್ಡ ಸಮಸ್ಯೆ ಇದೆ. ಕೆಲವು ಕಡೆಯಂತೂ ಕಸದ ರಾಶಿ ತುಂಬಿ ತುಳುಕುತ್ತಿರುವ ಪರಿಣಾಮ ಗಬ್ಬು ವಾಸನೆ ಅಡರುತ್ತಿದೆ.
ರಸ್ತೆ ಪಕ್ಕದಲ್ಲಿ ಕಸದ ರಾಶಿ ಇದ್ದು ಗಾಳಿಗೆ ರಸ್ತೆ ಮಧ್ಯಕ್ಕೂ ಬರುತ್ತಿದೆ. ಹೀಗಾಗಿ ಸವಾರರು ಕೂಡ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನಾದರೂ ನಗರಸಭೆಯವರು ಗಮನಹರಿಸುವರೇ.
ಚರಂಡಿಯೇ ಇಲ್ಲ....
ತುಮಕೂರು ನಗರವನ್ನು ಚೆಂದ ಮಾಡಬೇಕಾದ ನಗರಸಭೆಯವರು ಹಾಳುಗೆಡವುತ್ತಿದ್ದಾರೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ತುಮಕೂರಿನ ಕುರಿಪಾಳ್ಯ ಬಡಾವಣೆಯಲ್ಲಿ ಚರಂಡಿಯೇ ಇಲ್ಲ. ಮಳೆ ನೀರು, ಕೊಳಕು ನೀರೆಲ್ಲಾ ರಸ್ತೆ ಪಕ್ಕದಲ್ಲೇ ಸಂಗ್ರಹವಾಗುತ್ತಿದೆ. ಅಷ್ಟೇಕೆ ತುಮಕೂರಿನ ಸೋಮೇಶ್ವರಪುರಂನ ಮುಖ್ಯ ರಸ್ತೆಯಲ್ಲೂ ಇದೇ ಪರಿಸ್ಥಿತಿ ಇದೆ. ಸುನಿತಾ ಹೊಟೇಲ್ ನಿಂದ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದವರೆಗೆ ಚರಂಡಿಯೇ ಇಲ್ಲ. ಹೀಗಾಗಿ ಮಳೆ ನೀರು, ಕೊಳಚೆ ನೀರು ಸರಾಗವಾಗಿ ಹರಿಯಲು ಆಗುತ್ತಿಲ್ಲ.
ಇದು ಕೇವಲ ಎರಡು ಬಡಾವಣೆಯ ಸಮಸ್ಯೆಯಲ್ಲ. ತುಮಕೂರಿನ ಬಹುತೇಕ ಬಡಾವಣೆಗಳಲ್ಲೂ ಕೂಡ ಇದೇ ಪರಿಸ್ಥಿತಿ ಇದೆ. ಬಟವಾಡಿ, ಗೋಕುಲ, ಎಸ್ಐಟಿ, ಜಯನಗರ, ಶೆಟ್ಟಿಹಳ್ಳಿ ಹೀಗೆ ಪ್ರತಿಯೊಂದು ಬಡಾವಣೆಯಲ್ಲೂ ಸಹ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೆಲವು ಕಡೆ ಒಳಚರಂಡಿ ವ್ಯವಸ್ಥೆ ಇದೆ. ಆದರೆ ಚರಂಡಿಯಲ್ಲಿ ಕಸ ಕಡ್ಡಿ ಕಟ್ಟಿಕೊಂಡು ನೀರು ಸರಾಗವಾಗಿ ಹರಿಯದೇ ನೀರು ಕಟ್ಟಿಕೊಂಡು ವಾಸನೆ ಅಡರುತ್ತಿದೆ.
ಹೀಗಾಗಿ ಕೆಲ ಬಡಾವಣೆಗಳಲ್ಲಿ ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ಸ್ವಚ್ಛಗೊಳಿಸಿ ಎಂದು ನಗರಸಭೆಗೆ ಪ್ರತಿ ದಿನವೂ ದೂರು ಕೊಟ್ಟು ಕೊಟ್ಟು ಜನತೆ ಬೇಸತ್ತು ಹೋಗಿದ್ದಾರೆ. ಪಾಲಿಕೆಯಾಗುವು ಹೊಸ್ತಿಲಲ್ಲಿ ಇರುವ ನಗರಸಭೆಯವರು ಮಾತ್ರ ಸ್ವಚ್ಛತೆಗೆ ಗಮನ ಕೊಡದೇ ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ.