ಸದ್ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗ ಸಮಸ್ಯೆಗಳಿಂದ ಮುಕ್ತಿ
ಕುಣಿಗಲ್: ಅಜ್ಞಾನಗಳ ಅಂಧಕಾರದಿಂದ ಸಾಕಷ್ಟು ಸಮಸ್ಯೆಗಳ ಸುಳಿಗೆ ಸಿಕ್ಕು ನಲುಗಿ, ಬಳಲುವಂತ ಮನುಷ್ಯನು, ಸದ್ಗುರುವಿನ ಮಾರ್ಗದರ್ಶನದಲ್ಲಿ ನಡೆದಾಗ ಸಮಸ್ಯೆಗಳಿಂದ ಮುಕ್ತಿಗೊಂಡು, ಸಂತೃಪ್ತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಬ್ರಹ್ಮಾಂಡ ಖ್ಯಾತಿಯ ಅಖಂಡ ವರಮಹಾಲಕ್ಷ್ಮಿ ಸಂಸ್ಥಾನದ ನರೇಂದ್ರಬಾಬುಶರ್ಮ ತಿಳಿಸಿದರು.
ಭಾನುವಾರ, ತಾಲೂಕಿನ ಯಡೆಯೂರಿನ ಬಾಳೆಹೊನ್ನೂರು ಖಾಸಾಶಾಖಾ ಮಠದಲ್ಲಿ ಹಮ್ಮಿಕೊಳ್ಳಲಾದ ಭಾವೈಕ್ಯಧರ್ಮ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಹೇಗಾದರೂ ಸರಿ ಧನಾರ್ಜನೆಯ ಪ್ರಮುಖ ಗುರಿಯಾಗಿರಿಸಿಕೊಂಡು, ಜ್ಞಾನಾರ್ಜನೆ ಬದಿಗೊತ್ತಿ, ಧರ್ಮ, ಸಂಸ್ಕೃತಿ, ಸಂಸ್ಕಾರಗಳನ್ನು ಕಡೆಗಣಿಸುತ್ತಾ ಮಾಡಬಾರದನ್ನು ಮಾಡಿದಾಗ ಸಹನೆ ಇಲ್ಲದ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ಇಂತಹ ಸಮಾಜ ನಿರ್ಮಾಣದಿಂದ ಯಾವುದೇ ಪ್ರಯೋಜನವಿಲ್ಲ ಎಂದರು.
ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ರಂಭಾಪುರಿ ಜಗದ್ಗುರು ಪ್ರಸನ್ನ ವೀರಸೋಮೇಶ್ವರ ರಾಜದೇಶೀಕೇಂದ್ರ ಭಗವತ್ಪಾದರು, ಎಲ್ಲಾ ರಂಗಗಳಲ್ಲೂ ಅತೃಪ್ತಿ, ಅಸಮಾಧಾನ ಹೆಚ್ಚುತ್ತಿದೆ.ಇತಿಹಾಸದ ಗತಪುಟದಲ್ಲೂ ನಾಸ್ತಿಕರು ಹಲವು ಧಾರ್ಮಿಕ ಸಂಪ್ರದಾಯ ವಿರೋಧಿಸಿಕೊಂಡು ಬಂದಿದ್ದಾರೆ. ಆದರೆ, ವೀರಶೈವ ಸಂಸ್ಕೃತಿಯ ಬೇರುಗಳು ಭದ್ರವಾಗಿ ಬಂಡೆಕಲ್ಲಿನಂತೆ ದೃಢವಾಗಿದ್ದು, ಯಾರು ಏನೇ ಮಾಡಿದರೂ ಅದು ಕ್ಷಣಿಕ. ಪರರ ಲೇಸನ್ನು ಬಯಸಿ, ಸರ್ವರಿಗೂ ಹಿತವನ್ನು ಬಯಸಿ, ಸರ್ವರ ಹಿತಕ್ಕಾಗಿ ಶ್ರಮಿಸುತ್ತಿರುವುದೇ ವೀರಶೈವಧರ್ಮದ ಸಾರವಾಗಿದೆ. ಎಲ್ಲ ಧರ್ಮಗಳಲ್ಲೂ ಮಾನವೀಯ ಮೌಲ್ಯಗಳಿವೆ, ಧರ್ಮಗಳು ನಮ್ಮನ್ನು ಬಂಧಿಸುವುದಿಲ್ಲ. ನಮ್ಮನ್ನು ಸನ್ಮಾರ್ಗದಲ್ಲಿ ನಡೆಸಿ ರಕ್ಷಿಸುತ್ತವೆ. ಆದ್ದರಿಂದ ಸದಾ ಧರ್ಮಮಾರ್ಗದಲ್ಲಿ ಸಂತೃಪ್ತ ಜೀವನ ನಡೆಸಬೇಕೆಂದರು.
ಯಡೆಯೂರು ಬಾಳೆಹೊನ್ನೂರು ಖಾಸಾಶಾಖಾ ಮಠಾಧೀಶರಾದ ರೇಣುಕಾಶಿವಾಚಾರ್ಯಸ್ವಾಮಿಜಿ, ಕುಪ್ಪೂರುಮಠದ ಯತೀಶ್ವರ ಶಿವಾಚಾರ್ಯಸ್ವಾಮಿಜಿ, ಕಗ್ಗೆರೆ ತೋಂಟದಾರ್ಯಸ್ವಾಮಿ, ಹುಲಿಯೂರು ದುರ್ಗದ ಸಿದ್ದಲಿಂಗಸ್ವಾಮಿ, ಶಿವಾನಂದ ಶಿವಾಚಾರ್ಯಸ್ವಾಮಿ ಹಿರೇಪುರಮಠ, ತಾವರೆಕೆರೆ ಶಿಲಾಮಠದ ಅಭಿನವಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಸೇರಿದಂತೆ ಇತರರು ಉಪಸ್ಥಿತರಿದ್ದರು.