ಸಮುದಾಯ ಆಧಾರಿತ ಸಂಘ ಬಲಪಡಿಸಿ
ತುಮಕೂರು: ಸಮುದಾಯ ಆಧಾರಿತ ಸಂಘಗಳನ್ನು ಬಲಪಡಿಸಬೇಕೆಂದು ಸಮಾಜ ಕಾರ್ಯಕರ್ತ ಪದ್ಮರಾಜ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಹೇಮಾದ್ರಿ ಸ್ನಾತಕೋತ್ತರ ಕೇಂದ್ರ ಹಾಗೂ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ಯುವ ನಾಯಕತ್ವ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಮುದಾಯ ಆಧಾರಿತ ಸಂಘಗಳನ್ನು ಬಲಪಡಿಸುವ ಮೂಲಕ ಸಮುದಾಯ ಅಭಿವೃದ್ಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದರು. ಜಿಲ್ಲಾ ಸಂಯೋಜನಾಧಿಕಾರಿ ಎ.ಎ. ಡೋನಿ ಮಾತನಾಡಿ ಸಮಾಜ ಕಾರ್ಯದ ಪ್ರಶಿಕ್ಷಣಾರ್ಥಿಗಳು, ಸಮಾಜ ಕಾರ್ಯದ ವಿವಿಧ ತಂತ್ರ ಕೌಶಲ್ಯ ಬಳಸಿಕೊಂಡು ಸಮುದಾಯ ಅಭಿವೃದ್ಧಿ ಹೇಗೆ ಮಾಡಬೇಕೆಂದು ತಿಳಿಸಿದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಸಿ.ಸಿ. ಪಾವಟೆ ಮಾತನಾಡಿ ಮಾನವನ ಅಗತ್ಯತೆಗಳು, ಅನುಭವ, ಅವರ ಹಿನ್ನೆಲೆಗಳಿಂದ ನಿರ್ಧರಿಸುತ್ತದೆ ಎಂದರು. ಜೀವನದ ಅಭಿವೃದ್ಧಿಗೆ ಉಪಯುಕ್ತವಾದ ವಿಷಯವನ್ನು ಆಯ್ಕೆ ಮಾಡುವ ಮೂಲಕ ವ್ಯಕ್ತಿ ಯಶಸ್ಸನ್ನು ಸಾಧಿಸಬಹುದು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಹೇಮಾದ್ರಿ ಸ್ನಾತಕೋತ್ತರ ಕೇಂದ್ರ ಆಡಳಿತ ಅಧಿಕಾರಿ ವಿ.ಟಿ. ತಿಪ್ಪೇಸ್ವಾಮಿ ಮಾತನಾಡಿ ಈ ತರಬೇತಿಯಿಂದ ಪಡೆಯುವ ಸೂಕ್ತ ಸೂಕ್ತ ಮಾರ್ಗದರ್ಶನಗಳನ್ನು ಜೀವನದಲ್ಲಿ ಅಳವಡಿಸುವ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಹೇಮಾದ್ರಿ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯ ಬಿ.ಕೆ. ನಟರಾಜ್, ಮೋಹನ್ ವಿ.ಟಿ. ಶ್ರೀದೇವಿ, ಚೇತನ ಉಪಸ್ಥಿತರಿದ್ದರು. ಲತಾ ನಿರೂಪಿಸಿದರು. ಶೃತಿ ಮತ್ತು ಸವಿತ ಪ್ರಾರ್ಥಿಸಿದರು. ಪೂರ್ಣಿಮ ಸ್ವಾಗತಿಸಿದರು. ಶಿವರಾಜು ವಂದಿಸಿದರು.
ದಲಿತ ವಿಮೋಚನಾ ಸೇನೆ ಸಭೆ
ತುಮಕೂರು: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜನವರಿ ತಿಂಗಳಿನಲ್ಲಿ ಸಂವಿಧಾನರ್ಪಣ ದಿನದದ ಅಂಗವಾಗಿ ರಾಜ್ಯ ಸಮಾವೇಶ ಆಚರಿಸುವ ಸಂದರ್ಭ ಚರ್ಚಿಸಲು ದಲಿತ ವಿಮೋಚನಾ ಸೇನೆಯ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಮುನಿರಾಜು ಅವರು ಜನವರಿ 30 ರಂದು ಸಮಾವೇಶ ಆಚರಿಸಲಿದ್ದು ಸಮಾವೇಶದ ಆಗು ಹೋಗು, ಸಮಾರಂಭ ನಡೆಸುವ ವಿಚಾರದ ಬಗ್ಗೆ ಮಾಹಿತಿ ನೀಡಿ ಜಿಲ್ಲಾ ಘಟಕವನ್ನು ಇಂದಿನಿಂದಲೇ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ರಾಜ್ಯ ಮಹಿಳಾ ಘಟಕದ ನೂತನ ಅಧ್ಯಕ್ಷೆ ಸತ್ಯವತಿ ಅವರು ಸಂಘಟನೆಯ ವಿಧಿ, ವಿಧಾನಗಳಿಗೆ ಅನುಗುಣವಾಗಿ ಕೆಲಸ ನಿರ್ವಹಿಸುವಂತೆ ಶುಭ ಕೋರಿದರು.