ಅಧಿಕಾರಿಗಳು ಹಳ್ಳಿ ಮರೆತಂತಿದೆ
ಕುಣಿಗಲ್: ತಾಲೂಕಿನ ಬಹುತೇಕ ಅಧಿಕಾರಿಗಳು ಹಳ್ಳಿಗಳನ್ನು ಮರೆತಿರುವುದು ತಮ್ಮ ಪ್ರವಾಸದ ಸಂರ್ಭದಲ್ಲಿ ವ್ಯಕ್ತವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಗ್ರಾಮಗಳಲ್ಲಿನ ಸಮಸ್ಯೆಗಳ ಅರಿವಿಲ್ಲ. ಇದರ ಜೊತೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಪರಿಣಾಮಕಾರಿ ಯೋಜನೆಗಳ ಬಗ್ಗೆಯೂ ಅಧಿಕಾರಿಗಳು ಅರಿವು ಮೂಡಿಸಲು ಕ್ರಮ ಕೈಗೊಂಡಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ, ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೊತ್ತಗೆರೆಹೋಬಳಿಯಲ್ಲಿ ಪ್ರವಾಸ ನಡೆಸಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಸಿಂಗೋನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೇಲ್ನೋಟಕ್ಕೆ ತಾಲೂಕಿನಲ್ಲಿ ಆಡಳಿತ ಯಂತ್ರ ಕುಸಿದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆ ಜನತೆಗೆ ಮುಟ್ಟುತ್ತಿಲ್ಲ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಂತಹ ಉತ್ತಮ ಯೋಜನೆಗಳಿದ್ದರೂ, ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳು ರೈತರು ಹಾಗೂ ಗ್ರಾಮಾಂತರ ಪ್ರದೇಶದ ಜನತೆಗೆ ಸಾಕಷ್ಟು ಸವಲತ್ತು ಕಲ್ಪಿಸುಬಹುದಾಗಿದ್ದರೂ, ಯೋಜನೆಯ ಬಗ್ಗೆ ಅರಿವು ಮೂಡಿಸಿ ಕಾರ್ಯಕ್ರಮ ಅನುಷ್ಠಾನಕ್ಕೆ ಶ್ರಮಿಸದೆ, ಸೋಮಾರಿತನ ಪ್ರದರ್ಶಿಸಿರುವುದು ನಿಜಕ್ಕೂ ಖಂಡನೀಯ ಎಂದರು.
ಅಧಿಕಾರಿಗಳಿಗೆ ಸೂಚನೆ: ಈ ನಿಟ್ಟಿನಲ್ಲಿ ಕೂಡಲೆ ಯೋಜನೆ ಬಗ್ಗೆ ಅರಿವು ಮೂಡಿಸಿ ಜನತೆಗೆ ಪೂರಕವಾದ ಸೇವೆ, ಸವಲತ್ತು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ ಅವರು, ಬಹುತೇಕ ಕಡೆಗಳಲ್ಲಿ ಬಿಪಿಎಲ್ ಕಾರ್ಡ್ನ ಅವ್ಯವಸ್ಥೆ ಬಗ್ಗೆ ವ್ಯಾಪಕ ದೂರುಗಳಿದ್ದು ಈ ದಿಸೆಯಲ್ಲಿ ಅರ್ಜಿಗಳನ್ನು ಇಪ್ಪತ್ತು ದಿನದೊಳಗೆ ಪರಿಹರಿಸಲು ಹಾಗೂ ಸರ್ಕಾರಿ ಭೂಮಿ ಅತಿಕ್ರಣ ತೆರವುಗೊಳಿಸಲು ತಹಸೀಲ್ದಾರ್ಗೆ ಸೂಚನೆ ನೀಡಲಾಗಿದೆ. ಬಹುತೇಕ ಗ್ರಾಮಾಂತರ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗದೆ ಜನತೆ ಪರದಾಡುತ್ತಿದ್ದಾರೆಂದರು. ಗ್ರಾಮಾಂತರಪ್ರದೇಶದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು ಲಭ್ಯವಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿಲ್ಲ. ಕೇಂದ್ರದ ಅನುದಾನ ಬಳಕೆ ಮಾಡಿಕೊಂಡು ಜನತೆಗೆ ನೀರು ಪೂರೈಸುವಂತೆ ತಾಪಂ ಇಒಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪಟ್ಟಣದಲ್ಲಿ ಹಾದು ಹೋಗಿರುವ ಹಳೇ ರಾಹೆ 48ರ ಅಭಿವೃದ್ಧಿಗೆ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದರು.
ಪ್ರಾಮಾಣಿಕ ಯತ್ನ: ಈ ತಿಂಗಳ ಅಂತ್ಯದೊಳಗೆ ತಾಲೂಕಿನ ವಿವಿಧ ಹೋಬಳಿಗಳ ಪ್ರವಾಸ ಮುಗಿಸಿ ತಾಲೂಕು ಮಟ್ಟದ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆನಡೆಸಿ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದೆಂದರು.
ಸ್ಥಳದಲ್ಲೇ ಪರಿಹಾರ: ಸಂಸದರ ಪ್ರವಾಸ ಸಮಯದಲ್ಲಿ ಎರಡು ಸಮಸ್ಯೆಗೆ ಸ್ಥಳದಲ್ಲೆ ಪರಿಹಾರ ದೊರೆತು ಕಾರ್ಯವೈಖರಿಗೆ ಜನತೆ ಹಾಗೂ ವಿದ್ಯಾರ್ಥಿಗಳಿಂದ ವ್ಯಾಪಕ ಮೆಚ್ಚುಗೆ ದೊರೆಯಿತು. ಕೊತ್ತಗೆರೆ ಹೋಬಳಿಯ ಕೆಲಗ್ರಾಮಗಳಲ್ಲಿ ನರೇಗ ಯೋಜನೆಯಲ್ಲಿ ಸಣ್ಣ ರೈತರು ಕೊಟ್ಟಿಗೆ ಕಟ್ಟಿಕೊಳ್ಳಲು ಪಹಣಿ ಸೇರಿದಂತೆ ಇತರೆ ಪೂರಕ ದಾಖಲೆ ನೀಡಬೇಕೆಂಬ ನೆಪದಿಂದ, ರೈತರು ಕೊಟ್ಟಿಗೆ ಕಟ್ಟಲಾಗದೆ ಪರದಾಡವಂತಾಗಿ, ಸಂಸದರ ಗಮನಕ್ಕೆ ತಂದ ಮೇರೆಗೆ, ಇಒ, ಜಿಪಂ ಸಿಇಒರೊಂದಿಗೆ ಚರ್ಚಿಸಿ ಪಹಣಿದಾಖಲೆ ಇಲ್ಲದೆ ಕೊಟ್ಟಿಗೆ ನಿರ್ಮಿಸಲು ಅವಕಾಶ ಕಲ್ಪಿಸಿದರೆ, ಸಿಂಗೂನಹಳ್ಳಿಯಿಂದ ನಾರನಹಳ್ಳಿಗೆ ಸುಮಾರು ಎರಡೂವರೆ ಕಿಮಿವರೆಗೂ ಸಂಜೆ ವೇಳೆ ಬಸ್ಇಲ್ಲದೆ ವಿದ್ಯಾರ್ಥಿಗಳು ನಡೆದುಕೊಂಡ ಹೋಗಬೇಕಾದ ಸಮಸ್ಯೆ ಸಂಸಂದರ ಗಮನಕ್ಕೆ ವಿದ್ಯಾರ್ಥಿಗಳು ತಂದರು. ಈ ಹಿನ್ನೆಲೆಯಲ್ಲಿ ಸಂಸದರು ಸ್ಥಳದಲ್ಲೆ, ಡಿಪೋ ಮ್ಯಾನೆಜರ್, ವಿಭಾಗೀಯ ನಿಯಂತ್ರಣಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿದರು. ಸಂಸದರ ಪ್ರವಾಸದ ಸಮಯದಲ್ಲಿ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಾಯಿತ್ರಿರಾಜು, ತಹಸೀಲ್ದಾರ್ ಪುಟ್ಟನರಸಯ್ಯ, ಇಒ ಶಂಕರಪ್ಪ, ಬಿಇಒ ಸಿದ್ದಯ್ಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.