ಇಚ್ಛಾಶಕ್ತಿ ಇದ್ದರೆ ಅಭಿವೃದ್ಧಿ ಸಾಧ್ಯ: ಮಾದಾರ ಚನ್ನಯ್ಯ ಸ್ವಾಮೀಜಿ
ಪಾವಗಡ: ಇಚ್ಛಾಶಕ್ತಿ ಇದ್ದರೆ ಅಭಿವೃದ್ಧಿ ಸಾಧ್ಯವೆಂದ ಚಿತ್ರದುರ್ಗ ಗುರುಪೀಠದ ಅಧ್ಯಕ್ಷ ಮಾದಾರ ಚನ್ನಯ್ಯ ಸಾಮೀಜಿ 10ವರ್ಷದಲ್ಲಿ ದುಬೈ ಅಭಿವೃದ್ಧಿ ಬಿರುಗಾಳಿಯ ಕುರಿತು ವಿವರಿಸಿದರು.
ಆದಿಜಾಂಬವ ಸಂಘದ ವತಿಯಿಂದ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸುಮಾರು 25ನಿಮಿಷಗಳ ಕಾಲ ಕನ್ನಡಪ್ರಭ ಪತ್ರಿಕೆಯಲ್ಲಿ ಈ ಕುರಿತು ಪ್ರಕಟವಾದ ಸಂಪಾದಕರ ಲೇಖನದ ಬಗ್ಗೆ ಸಮಾರಂಭದಲ್ಲಿ ವಿವರಿಸಿದ ಅವರು, ಆ ದೇಶದ ಅಧ್ಯಕ್ಷರ ಇಚ್ಛಾಶಕ್ತಿಯಿಂದ ಮರುಭೂಮಿಯಿಂತಿದ್ದ ದುಬೈಅನ್ನು 10ವರ್ಷದಲ್ಲಿ ಅಭಿವೃದ್ಧಿ ಪಡಿಸಿದ ಪರಿಣಾಮ ಇಂದು ಪ್ರಪಂಚ ದುಬೈ ಕಡೆ ಮುಖ ಮಾಡಿದೆ ಎಂದರು.
ದೇಶದ ಅಭಿವೃದ್ಧಿಯಲ್ಲಿ ನಾನು ಸಾಧಿಸಿರುವುದು ಅತ್ಯಲ್ಪ, ಇನ್ನೂ ಸಾಧಿಸುವುದು ಬಹಳವಿದೆ ಎಂದು ಆ ದೇಶದ ಅಧ್ಯಕ್ಷ ಹೇಳಿರುವ ಮಾತು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದರು.
ತಾಲೂಕಿನ ಅದಿಜಾಂಬವ ಜನಾಂಗವನ್ನು ಸಂಘಟಿಸಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ ಅವರು, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಆರ್.ಎಂ. ನರಂಸಿಂಹಮೂರ್ತಿ ಮತ್ತು ಶಿಕ್ಷಕ ಧನುಂಜಯ ಇತರರನ್ನು ಮುಕ್ತ ಕಂಠದಿಂದ ಪ್ರಶಂಸೆ ಮಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ರೂಪಿಸಬೇಕೆಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಮಾದರ ಗುರುಪೀಠದ ಅಧ್ಯಕ್ಷ ಮಾದರ ಚನ್ನಯ್ಯ ಸಾಮೀಜಿಗಳು ಸೇರಿದಂತೆ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜನಪ್ರತಿನಿಧಿಗಳಾದ ಹುಚ್ಚಯ್ಯ, ಕೆಂಚಮಾರಯ್ಯ, ಮುಖಂಡರಾದ ಎಸ್. ಹನುಮಂತರಾಯಪ್ಪ, ಕೋರ್ಟ್ ನರಸಪ್ಪ, ಉಗ್ರಪ್ಪ, ಎಂಜಿನಿಯರ್ ಚಂದ್ರಕಾಂತ್ ಅವರನ್ನು ಸನ್ಮಾನಿಸಿದರು.