ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿಯಿಂದ ಪರಿಶಿಷ್ಟ ಪಂಗಡಕ್ಕೆ ದೊಡ್ಡ ಕೊಡುಗೆ

Rashmi Kasaragodu
Updated On : 2 Dec 2013, 11:33 am

ತುಮಕೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಯಕ ಜನಾಂಗಕ್ಕೆ ಶಿಕ್ಷಣ, ಉದ್ಯೋಗಾವಕಾಶ ಹಾಗೂ ರಾಜಕೀಯವಾಗಿ ಬೆಳೆಯಲು  ಅವಕಾಶ ಮಾಡಿಕೊಟ್ಟು, ಪರಿಶಿಷ್ಟ ಪಂಗಡದವರಿಗೆ ಭಾರೀ ಕೊಡುಗೆ ನೀಡಿತ್ತು ಎಂದು ಬಿಜೆಪಿ ರಾಜ್ಯ ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ಹಾಗೂ ಮಾಜಿ ಶಾಸಕ ಸೋಮಲಿಂಗಪ್ಪ ಅಭಿಪ್ರಾಯಪಟ್ಟರು.
ಅವರು ತುಮಕೂರು ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಎಸ್.ಟಿ. ಜನಾಂಗವನ್ನು ಓಟ್ ಬ್ಯಾಂಕ್ ಮಾಡಿಕೊಂಡಿದ್ದು, ಕಳೆದ 60 ವರ್ಷಗಳಿಂದ ಮೂಗಿಗೆ ತುಪ್ಪ ಸವರಿ, ಕಾಂಗ್ರೆಸ್ ಮತ ಪಡೆಯುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ನಿಗಮ ರಚಿಸಿ, ಸುಮಾರು ಒಂಬತ್ತು ಸಾವಿರ ಕೋಟಿ ರು. ಹಣವನ್ನು ವಿವಿಧ ಇಲಾಖೆಗಳಿಂದ ಒಟ್ಟು ಗೂಡಿಸಿ ಹಲವಾರು ಪ್ರಗತಿ ಪರ ಕಾರ್ಯಕ್ರಗಳನ್ನು ಹಮ್ಮಿಕೊಂಡು, ನಾಯಕ ಜನಾಂಗದ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಿ, ಸರ್ಕಾರಿ ಕಾರ್ಯಕ್ರಮವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ರಜಾ ಘೋಷಿಸಿತು ಎಂದರು. ನಾಯಕ ಜನಾಂಗಕ್ಕೆ ಬಿಜೆಪಿ ನೀಡಿದ ಕೊಡುಗೆ ಬಗ್ಗೆ ಗಮನಿಸಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ ನೀಡುವಂತೆ, ಜನಾಂಗದವರನ್ನು ಪ್ರೇರೇಪಿಸಬೇಕೆಂದು ಎಸ್.ಟಿ. ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಕರೆ ನೀಡಿದರು.
ಮೋದಿ ಮೋಡಿ: ಬಿಜೆಪಿ ಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೋಡಿ, ಇಡೀ ದೇಶದಲ್ಲಿ ಪಸರಿಸಿದ್ದು, ಎಲ್ಲಾ ವರ್ಗ ಜನಾಂಗದ ಸರ್ವಮಾನ್ಯರಾಗಿರುವ ನಮೋ ಪ್ರಧಾನಿಯಾಗಿಸಲು ಬಿಜೆಪಿಗೆ ಮತ ನೀಡಲು ನಾಯಕ ಸಮುದಾಯದ ಬಂಧುಗಳಿಗೆ ಮನವಿ ಮಾಡಿ ಎಂದರಲ್ಲದೆ, ಎಸ್.ಟಿ. ಮೋರ್ಚಾ ಬಲವರ್ಧನೆಗೆ ಕಾರ್ಯಕ್ರಮಗಳನ್ನು ರೂಪಿಸಲು ಕೋರಿ, ನಾಯಕ ಜನಾಂಗದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸಿದರು.
ಹಲವು ಯೋಜನೆ: ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಬಿ. ಸುರೇಶ್ಗೌಡ, ನಾಯಕ ಜನಾಂಗದ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರ್ಕಾರ ಹಲವಾರು ಯೋಜನೆ ರೂಪಿಸಿ, ಹಣ ಬಿಡುಗಡೆ ಮಾಡಿತ್ತು. ಪರಿಶಿಷ್ಟರು ವಾಸಿಸುವ ಪ್ರದೇಶಗಳ ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಿ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬೆಳೆಯಲು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಮಾಡಿತ್ತು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಪರಿಶಿಷ್ಟರಿಗೆ ತಿಳಿಸಿದರಲ್ಲದೆ, ರಾಜಕೀಯ ಶಕ್ತಿಯಾಗಿ ಬೆಳೆಯಲಿ ಎಂದು ಕರೆ ನೀಡಿದರು.
ಗೆಲವಿಗೆ ಶ್ರಮಿಸೋಣ: ದೇಶದ ಗಡಿ ರಕ್ಷಣೆ, ಬೆಲೆ ಏರಿಕೆ, ಆರ್ಥಿಕ ದಿವಾಳಿತನ, ಭ್ರಷ್ಟಾಚಾರ ತಡೆಗೆ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವಿಫಲವಾಗಿದ್ದು, ಗುಜರಾತ್ನ ಅಭಿವೃದ್ಧಿ ಹರಿಕಾರ, ಬಿಜೆಪಿ ಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ತುಮಕೂರು ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸೋಣ ಎಂದರು. ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ದಯಾನಂದ್ ಅವರು ಕಾರ್ಯಕಾರಿಣಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮತವಾಗಿ ಪರಿವರ್ತಿಸಿ: ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಬಿ. ನಂದೀಶ್ ಅವರು ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಕಾರ್ಯಕರ್ತರು ತಮ್ಮ ವ್ಯಕ್ತಿತ್ವ, ಕಾರ್ಯತತ್ಪರತೆ, ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಬಿಜೆಪಿಯನ್ನು ಜೀವನದ ವೃತ ಮಾಡಿಕೊಂಡ ವ್ಯಕ್ತಿಗಳು ಇದ್ದು, ಸಮಾಜದ ಬದಲಾವಣೆ ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಚಟುವಟಿಕೆಯ ಕಾರ್ಯಕರ್ತನು ವೈಯಕ್ತಿಕವಾಗಿ ಬೆಳೆದು ಜನರಿಗೆ ಸರ್ಕಾರದ ಕಾರ್ಯಕ್ರಮಗಳನ್ನು ಮುಟ್ಟಿಸಿ, ಬಿಜೆಪಿಗೆ ಮತವಾಗಿ ಪರಿವರ್ತಿಸಲು ಮುಂದಾಗುವಂತೆ ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement