ಇಂದಿನಿಂದ ಫೆಡರೇಷನ್ ಕಪ್ ಖೋ ಖೋ
ತುಮಕೂರು: ಡಿ. 4 ರಿಂದ 8 ರವರೆಗೆ ರಾಷ್ಟ್ರಮಟ್ಟದ 24 ನೇ ಪುರುಷ ಹಾಗೂ ಮಹಿಳೆಯರ, 25 ನೇ ಬಾಲಕ, ಬಾಲಕಿಯರ ಫೆಡರೇಷನ್ ಕಪ್ ಹೊನಲು ಬೆಳಕಿನ ದೇಸಿ ಕ್ರೀಡೆ ಖೋ ಖೋ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ತುಮಕೂರು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಗಮನಾರ್ಹ. ಎಲ್ಲ ಆಟೋಟಗಳಿಗೆ ಜಾಗ ಒದಗಿಸುವ ತುಮಕೂರು ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಈ ಪಂದ್ಯಾವಳಿ ಏರ್ಪಾಟಾಗಿವೆ.
ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನಾಚರಣೆ ಅಂಗವಾಗಿ ಅಖಿಲ ಭಾರತ ಖೋ ಖೋ ಫೆಡರೇಷನ್, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಹಾಗೂ ತುಮಕೂರು ಜಿಲ್ಲಾ ಖೋ ಖೋ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಈ ರಾಷ್ಟ್ರೀಯ ಖೋ ಖೋ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಖೋ ಖೋ ಸಂಸ್ಥೆ ಕಾರ್ಯದರ್ಶಿ ಹಾಗೂ ಕೆಜೆಪಿ ಮುಖಂಡರೂ ಆದ ಲೋಕೇಶ್ವರ್, ಈ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ದೇಶದ ಎಲ್ಲ ರಾಜ್ಯದ ತಂಡಗಳು, ಕೇಂದ್ರಾಡಳಿತ ಪ್ರದೇಶಗಳು ಒಳಗೊಂಡಂತೆ ಒಟ್ಟು 75 ತಂಡಗಳ ಬಾಲಕ, ಬಾಲಕಿಯರ ತಂಡಗಳು ಹಾಗೂ ವಿವಿಧ ವಲಯದ 16 ಪುರುಷ ಹಾಗೂ ಮಹಿಳಾ ತಂಡಗಳು ಪಾಲ್ಗೊಳ್ಳುತ್ತಿವೆ.
ಕ್ರೀಡಾ ಕೂಟದಲ್ಲಿ ಭಾಗವಹಿಸುವ ಆಟಗಾರರು, ಅಧಿಕಾರಿಗಳು ಹಾಗೂ ವಿವಿಧ ರಾಜ್ಯದ ಪದಾಧಿಕಾರಿಗಳು ಸೇರಿದಂತೆ ಸುಮಾರು 1500 ಮಂದಿಗೆ ಸಿದ್ದಗಂಗಾ ಮಠ,ಎಸ್ಐಟಿ ಹಾಗೂ ತುಮಕೂರಿನ ಹಲವು ಹೋಟೆಲ್ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಊಟದ ವ್ಯವಸ್ಥೆಯನ್ನು ಸಪಪೂ ಕಾಲೇಜು ಬಳಿಯಲ್ಲೇ ಇರುವ ಭದ್ರಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ: ಕ್ರೀಡಾಕೂಟಕ್ಕೆ ಎರಡು ಹೊನಲು ಬೆಳಕಿನ ಅಂಕಣ ಸೇರಿ, ಒಟ್ಟು 4 ಅಂಕಣಗಳನ್ನು ಸಿದ್ಧಪಡಿಸಲಾಗಿದೆ. ಸುಮಾರು 6 ರಿಂದ 8 ಸಾವಿರ ಮಂದಿ ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಮಹಿಳಾ ಪ್ರೇಕ್ಷಕರಿಗೆ ಪ್ರತ್ಯೇಕ ಗ್ಯಾಲರಿನಿರ್ಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ದಾನಿಗಳಿಂದ ವೆಚ್ಚ: ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ನಾಲ್ಕು ವಿಭಾಗದ ಆಟಗಾರರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಆಲ್ರೌಂಡರ್ಗಳಿಗೆ ಮಹಿಳೆಯರ ವಿಭಾಗದಲ್ಲಿ ಇಳಾ ಪ್ರಶಸ್ತಿ, ಪುರುಷರ ವಿಭಾಗದಲ್ಲಿ ಭರತ ಪ್ರಶಸ್ತಿ ನೀಡಲಾಗುವುದು ಎಂದರು. ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ನೆರವು ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಂದ್ಯಾವಳಿಯ ನೇತೃತ್ವ ವಹಿಸಿರುವವರಲ್ಲಿ ಒಬ್ಬರಾಗಿರುವ ಧನಿಯಾ ಕುಮಾರ್ ಮಾತನಾಡಿ, ಕ್ರೀಡಾಕೂಟಕ್ಕೆ ತಗಲುವ ವೆಚ್ಚವನ್ನು ವಿವಿಧ ಸಂಘ- ಸಂಸ್ಥೆಗಳು, ದಾನಿಗಳು, ವರ್ತಕರು, ಗಣ್ಯರಿಂದ, ಕ್ರೀಡಾ ಪ್ರೋತ್ಸಾಹಕರ ಸಹಕಾರದಿಂದ ಭರಿಸಲಾಗುತ್ತಿದೆ. ಸಾಧ್ಯವಾದಷ್ಟು ವಸ್ತು ರೂಪದಲ್ಲಿ ಸಹಕಾರ ಕೋರಲಾಗಿದೆ ಎಂದರು.
ಇಂದು ಚಾಲನೆ: ಡಿ. 4 ರಂದು ಸಂಜೆ 4 ಗಂಟೆಗೆ ದೇಶದ ಎಲ್ಲ ರಾಜ್ಯಗಳ ಕ್ರೀಡಾಪಟುಗಳ ನಡಿಗೆ ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಜಾಥಾ ಆಯೋಜಿಸಲಾಗಿದೆ. ಬಿಎಚ್ ರಸ್ತೆ, ಅಶೋಕ ರಸ್ತೆ, ಎಂಜಿ ರಸ್ತೆ ಮೂಲಕ ಜಾಥಾ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೇರಲಿದೆ. ಸಿದ್ದಗಂಗಾ ಮಠಾಧ್ಯಕ್ಷ ಡಾ. ಶಿವಕುಮಾರಸ್ವಾಮಿಗಳು ಈ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ರಾಮಕೃಷ್ಣಾಶ್ರಮದ ಡಾ. ವೀರೇಶಾನಂದ ಸರಸ್ವತಿ ಸ್ವಾಮಿಗಳು, ತುಮಕೂರು ನಗರ ಶಾಸಕ ಡಾ. ರಫೀಕ್ ಅಹಮದ್, ಮಾಜಿ ಸಚಿವ ಸಿ. ಚೆನ್ನಿಗಪ್ಪ ಉಪಸ್ಥಿತರಿರುವರು.
ಡಿ. 5 ರಂದು ಸಂಜೆ 7 ಗಂಟೆಗೆ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ಏರ್ಪಾಟಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೂಟ ಉದ್ಘಾಟಿಸಲಿದ್ದಾರೆ. ಡಿ. 6 ರಂದು ಮಾಜಿ ಸಚಿವ ಸೊಗಡು ಶಿವಣ್ಣ, ಪಿ.ಎನ್. ಕೃಷ್ಣಮೂರ್ತಿ ಪಾಲ್ಗೊಳ್ಳಲ್ಲಿದ್ದಾರೆ. ಡಿ. 7 ರಂದು ಸಂಜೆ 7 ಗಂಟೆಗೆ ಮಾಜಿ ಸಿಎಂ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಪಾಲ್ಗೊಳ್ಳಲ್ಲಿದ್ದಾರೆ. ಡಿ. 8 ರಂದು ಸಂಜೆ 8 ಗಂಟೆಗೆ ಮುಕ್ತಾಯ ಸಮಾರಂಭ ಏರ್ಪಾಟಾಗಿದೆ. ಸಿದ್ದಗಂಗೆಯ ಸಿದ್ದಲಿಂಗ ಶ್ರೀಗಳು, ರಾಜ್ಯ ಕ್ರೀಡಾ ಸಚಿವ ಅಭಯಚಂದ್ರ ಜೈನ್, ಮಾಜಿ ಸಿಎಂ ಸದಾನಂದಗೌಡ, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ಗೌಡ, ಡಾ. ರಫೀಕ್ ಅಹಮದ್, ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ, ಸಂಸದ ಜಿ.ಎಸ್. ಬಸವರಾಜು, ಕೃಷ್ಣಮೂರ್ತಿ ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಖೋಖೋ ಮಾಜಿ ಆಟಗಾರರಾದ ಸುನಿಲ್, ಕೋಚ್ ರಾಜಶೇಖರಯ್ಯ, ಹಾಲಿ ಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಖೋಖೋ ಮಾಜಿ ಆಟಗಾರ ರಾಮಕೃಷ್ಣಯ್ಯ, ಸುರೇಶ್ಕುಮಾರ್, ಮಲ್ಲಿಕಾರ್ಜುನಯ್ಯ ಇತರರಿದ್ದರು.