ಕಡೆ ಕಾರ್ತೀಕದ ಅಂಗವಾಗಿ ವಿಶೇಷ ಪೂಜೆ, ಹೋಮಕಾರ್ಯ
ಹುಳಿಯಾರು: ಪಟ್ಟಣದ ವಿವಿಧ ದೇವಾಲಯಗಳಲ್ಲಿ ಸೋಮವಾರದಂದು ಕಡೆ ಕಾತೀಕ ಮಾಸದ ಅಂಗವಾಗಿ ವಿಶೇಷ ಪೂಜೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೂರಾರು ಭಕ್ತರ ಹರ್ಷೋದ್ಘಾರದಲ್ಲಿ ಜರುಗಿದವು.
ವಸಂತನಗರ ಬಡವಾಣೆಯ ಶ್ರಿಕಾಳಿಕಮಟೇಶ್ವರಿ ದೇವಾಲಯದಲ್ಲಿ ವಿಶ್ವಕರ್ಮ ಸಮಾಜ ಭಾಂದವರಿಂದ ಹೊಸದುರ್ಗದ ವಿ. ವಿಜಯ್ ಕುಮಾರ್ ಅವರ ಪ್ರಧಾನ ಪೌರೋಹಿತ್ಯದಲ್ಲಿ ನವಗ್ರಹ, ವಾಸ್ತು, ದಿಕ್ಪಾಲಕ, ವಿಶ್ವಕರ್ಮ, ಪಂಚಬ್ರಹ್ಮ, ಕಾಳಿಕಮಟೇಶ್ವರಿ ದೇವತಾ, ದುರ್ಗಾಹೋಮಗಳೊಂದಿಗೆ ಪೂರ್ಣಾಹುತಿ ನಡೆಸಿ ನಂತರ ಮಹಾಮಂಗಳಾರತಿಯೊಂದಿಗೆ ಪ್ರಸಾದ ವಿನಿಯೋಗ ಕಾರ್ಯ ನಡೆಸಲಾಯಿತು. ಮಧ್ಯಾಹ್ನ ವಿವಿಧ ಹೂಗಳಿಂದ ಅಮ್ಮನವರನ್ನು ಅಲಂಕರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಿ ನಂತರ ಉಯ್ಯಾಲೋತ್ಸವ ಕಾರ್ಯ ಜರುಗಿತು.ಈ ಸಂಧರ್ಭದಲ್ಲಿ ವಿಶ್ವಕರ್ಮ ಸಮುದಾಯದವರು ಉಪಸ್ಥಿತರಿದ್ದರು.