ಕವಿ, ಕಾವ್ಯ, ಸಾಹಿತ್ಯ ಚಿಂತನ ಕಾರ್ಯಕ್ರಮ
ಗುಬ್ಬಿ: ಕೃಷಿ ಚಟುವಟಿಕೆಯ ಜೊತೆಯಲ್ಲಿನ ವ್ಯಕ್ತಿ ಬದುಕನ್ನು ಸುಂದರ ಹಾಗೂ ಸರಳ ಭಾಷೆಯಲ್ಲಿ ತಿಳಿಸುವ
ಜನಪದದ ಮೂಲ ತಿಳಿಯಲು ಅಸಾಧ್ಯ ಎಂದು ಸಾಹಿತಿ ಪ್ರೊ.ಎಂ.ಶಂಕರಗೌಡ ಬಿರದಾರ್ ತಿಳಿಸಿದರು.
ಪಟ್ಟಣದ ವಿನಾಯಕನಗರ ಬಡಾವಣೆಯ ಡಾ.ಟಿ.ಕೆ.ಕೃಷ್ಣಮೂರ್ತಿ ಅವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕವಿ, ಕಾವ್ಯ, ಸಾಹಿತ್ಯ ಚಿಂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅರ್ಥಗರ್ಭಿತ ಹಾಡುಗಳನ್ನು ನೀಡಿದ ಜನಪದದಿಂದ ನಮ್ಮ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದೆ. ಅಲ್ಲದೆ ಜನಪದ ಸಾಹಿತ್ಯದಲ್ಲಿ ಗ್ರಾಮೀಣ ಸೊಗಡು ಅಡಗಿದೆ ಎಂದರು.
ಕೊಡುಗೆಯನ್ನು ನೀಡಿದ ಜನಪದ ಸಾಹಿತ್ಯ ರಚಿಸಿದವರಲ್ಲಿ ಅವಿದ್ಯಾವಂತರೇ ಹೆಚ್ಚು. ಬಾಳಿನುದ್ದಕ್ಕೂ ತೃಪ್ತಿ ಕಂಡ ಬಾಳು ಇಂದಿನ ಆಧುನಿಕ ಜನರ ಜೀವನಕ್ಕೆ ಮಾದರಿಯಾಗಿದೆ. ಅವರ ವಿಶಾಲ ಚಿಂತನೆಗಳು ಬದುಕಿಗೆ ಅನುಕರಣೀಯವಾಗಿದೆ. ಹಿತ ನೀಡುವ ಸಾಹಿತ್ಯವಾದ ಜನಪದ ಶಾಶ್ವತವಾದದು ಎಂದರು. ಡಾ.ಟಿ.ಕೆ. ಕೃಷ್ಣಮೂರ್ತಿ ಮಾತನಾಡಿ ಜನಪದ ಹಾಗೂ ಶರಣ ಸಾಹಿತ್ಯ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಿರಿವಂತಗೊಳಿಸಿದೆ. ನಮ್ಮ ಸಂಸ್ಕೃತಿ ಬಿಂಬಿಸುವ ಸಾಹಿತ್ಯ ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆಯುವಲ್ಲಿ ಕವಿ, ಸಾಹಿತಿಗಳ ಕೊಡುಗೆ ಕೂಡ ಅಪಾರವಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರ್ ಮಾತನಾಡಿ ಆಧುನಿಕತೆಗೆ ತಕ್ಕಂತೆ ಕನ್ನಡ ಭಾಷೆ ಬದಲಾಗಬೇಕು. ತಂತ್ರಜ್ಞಾನದಲ್ಲಿ ನಮ್ಮ ಭಾಷೆ ಮಾಧ್ಯಮವಾಗಿ ಬೆಳೆದಲ್ಲಿ ಉದ್ಯೋಗ ಭಾಷೆಯಾಗುತ್ತದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ಆರ್.ಶಿವಕುಮಾರ್, ಸದಸ್ಯರಾದ ಕೆ.ಎಲ್. ಗೋಪಾಲಕೃಷ್ಣಶೆಟ್ಟಿ, ಕೀರ್ತಿರಾಜ್, ಕಸಾಪ ತಾಲೂಕು ಅಧ್ಯಕ್ಷ ರಾಜೇಶ್ ಗುಬ್ಬಿ, ಗೌರವ ಕಾರ್ಯದರ್ಶಿ ಜಿ.ಗೋವಿಂದಯ್ಯ, ರೋಟರಿ ಕ್ಲಬ್ ಕಾರ್ಯದರ್ಶಿ ಸಿದ್ದಲಿಂಗಯ್ಯ, ಕುಮಾರಸ್ವಾಮಿ, ಅರ್ಜುನಯ್ಯ, ಲಿಂಗಣ್ಣ, ರಾಜಣ್ಣ ಇದ್ದರು.