ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಕೀಲರಿಗೆ ಮಾನಸಿಕ ಆರೋಗ್ಯ, ಒಳನೋಟ ಮುಖ್ಯ

Rashmi Kasaragodu
Updated On : 4 Dec 2013, 12:46 pm

ಕ.ಪ್ರ.ವಾರ್ತೆ   ತುಮಕೂರು   ಡಿ. 3
ತುಮಕೂರು ಜಿಲ್ಲಾ ವಕೀಲರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಕೀಲರ ದಿನಾಚರಣೆಯಲ್ಲಿ ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶ ಎಚ್.ಬಿ. ಪ್ರಭಾಕರಶಾಸ್ತ್ರಿ ರಕ್ತದಾನ ಮಾಡಿದರು.
ಈಗಾಗಲೇ ತಮ್ಮ ಖಡಕ್ ಮಾತುಗಳಿಂದ ಜಿಲ್ಲೆಯ ಗಮನ ಸೆಳೆದಿರುವ ನ್ಯಾಯಾಧೀಶ ಪ್ರಭಾಕರಶಾಸ್ತ್ರಿ, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾದರಿಯಾದರು.
ತುಮಕೂರಿನ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ವಕೀಲರ ಸಂಘ,ರೋಟರಿ ಪೂರ್ವ, ಟಿ.ಎಚ್.ಎಸ್.ಆಸ್ಪತ್ರೆ ಮತ್ತು ಬೆಳ್ಳಿ ರಕ್ತನಿಧಿ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಕೀಲರ ದಿನಾಚರಣೆ ಹಾಗೂ ವಕೀಲರು ಮತ್ತು ಕಕ್ಷಿದಾರರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಪ್ರಭಾಕರಶಾಸ್ತ್ರಿ, ಬದಲಾದ ವಿದ್ಯಮಾನಗಳಿಂದ ವಕೀಲರು ವಿಪರೀತ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅತ್ಯಂತ ಜರೂರಾಗಿದೆ ಎಂದರು.
ಒಳನೋಟ ಮುಖ್ಯ: ಸದಾ ಒತ್ತಡದಲ್ಲಿ ಕೆಲಸ ಮಾಡುವ ವಕೀಲರಿಗೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಕೇಸುಗಳ ಏರಿಳಿತದಿಂದ ವಕೀಲರು ಮಾನಸಿಕ ಒತ್ತಡಕ್ಕೆ ಒಳಗಾಗುವುದು ಸಹಜ. ಆದ್ದರಿಂದ ನಿಯಮಾನುಸಾರ ತಪಾಸಣೆಗೆ ಒಳಗಾಗುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ.ದೈಹಿಕ ತಪಾಸಣೆಯ ಜೊತೆಗೆ ಬೌದ್ಧಿಕ ತಪಾಸಣೆಯೂ ಅಗತ್ಯವಾಗಿದೆ. ಕಣ್ಣಿನ ದೃಷ್ಟಿಯ ಜೊತೆಗೆ ಎಲ್ಲವನ್ನು ಸಮಾನವಾಗಿ ತೆಗೆದುಕೊಳ್ಳುವ ಅಂತ-ದೃಷ್ಟಿಯ ಪರೀಕ್ಷೆಯ ಅಗತ್ಯವಿದೆ. ವಕೀಲರಿಗೆ ಒಳನೋಟ ಬಹಳ ಮುಖ್ಯ ಎಂದು ಪ್ರಭಾಕರ ಶಾಸ್ತ್ರಿಗಳು ಮಾರ್ಮಿಕವಾಗಿ ನುಡಿದರು.
ಸಂಘಕ್ಕೆ ಶ್ಲಾಘನೆ: ವಕೀಲರ ದಿನಾಚರಣೆ ಕೇವಲ ನ್ಯಾಯವಾದಿಗಳ ಹಕ್ಕು,ಭಾದ್ಯತೆಗಳ ಕುರಿತ ಚರ್ಚೆಗೆ ಸೀಮಿತವಾಗಿತ್ತು. ಆದರೆ ಇದರ ಹೊರತಾಗಿ ವಕೀಲರ ಅವರ ಆರೋಗ್ಯ ಕಾಪಾಡುವ ಉದ್ದೇಶದಿಂದ ತುಮಕೂರು  ಬಾರ್ ಕೌನ್ಸಿಲ್ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಭಾಕರಶಾಸ್ತ್ರಿ ಶ್ಲಾಘಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಹಳೇ ಕೋರ್ಟ್ ಕಿಷ್ಕಿಂಧೆಯಾಗಿದೆ. ಗಾಳಿ-ಬೆಳಕಿಗೆ ಸರಿಯಾದ ವ್ಯವಸ್ಥೆಯಿಲ್ಲ. ಹೀಗಾಗಿ ಆರೋಗ್ಯ ಸಮಸ್ಯೆ ಎದುರಿಸಬೇಕಾಗಿತ್ತು. ಈಗ ಹೊಸ ನ್ಯಾಯಾಲಯ ಕಟ್ಟಡ ನಿರ್ಮಾಣವಾಗಿದೆ. ಇನ್ನು ಮುಂದೆ ಆರೋಗ್ಯ ಸಮಸ್ಯೆ ನೀಗಬಹುದು ಎಂದು ಆಶಾವಾದ ವ್ಯಕ್ತಪಡಿಸಿದರು.
ಆರೋಗ್ಯದ ಕಡೆ ಗಮನವಿರಲಿ : ಟಿ.ಹೆಚ್.ಎಸ್.ಆಸ್ಪತ್ರೆಯ ನಿರ್ದೇಶಕ ಡಾ.ವಿಜಯಕುಮಾರ್ ಮಾತನಾಡಿ, ಸದಾ ಕೇಸು, ಕೋರ್ಟ್,ಕಕ್ಷಿದಾರರು ಎಂದು ನಿರಂತರ ಕೆಲಸದಲ್ಲಿ ತೊಡಗುವ ವಕೀಲರು ಆರೋಗ್ಯದ ಕಡೆಗೆ ಗಮನಹರಿಸುವುದು ಕಡಿಮೆ. ಆದ್ದರಿಂದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳು ಸರ್ವೆಸಾಮಾನ್ಯ. ಅಲ್ಲದೆ ಅಧುನಿಕ ಜೀವನಶೈಲಿಯೂ ಹಲವು ರೋಗಗಳನ್ನು ಮನುಷ್ಯನಿಗೆ ತಂದೊಡ್ಡುತ್ತಿದೆ. ಶ್ರಮವಿಲ್ಲದ ದುಡಿಮೆ ಮತ್ತು ಭೋಗ ಜೀವನ ಶೈಲಿಯಿಂದಾಗಿ ಇಂದು ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.30 ರಷ್ಟು ಜನ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ಜನರು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವ ಮೂಲಕ ಕಾಯಿಲೆಗಳನ್ನು ನಿಯಂತ್ರಿಸಬಹುದಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ, ಬೆಳ್ಳಿ ರಕ್ತನಿಧಿಯ ಬೆಳ್ಳಿ ಲೋಕೇಶ್, ರೋಟರಿ ಪೂರ್ವ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು. ವಕೀಲರ ಸಂಘದ ಟಿ.ಆರ್. ರಮೇಶ್ಬಾಬು ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement