ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎನ್ಆರ್ಇಜಿ ಹಣ ಬಿಡುಗಡೆ ಮಾಡದ್ದಕ್ಕೆ ಪ್ರತಿಭಟನೆ

Rashmi Kasaragodu
Updated On : 5 Dec 2013, 1:08 am

ತುಮಕೂರು: ಎನ್ಆರ್ಇಜಿ ಅಡಿ ಪೂರ್ಣಗೊಳಿಸಿರುವ ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೆಳಧರ ಗ್ರಾಮ ಪಂಚಾಯತ್ ಸದಸ್ಯರು ಬೆಂಬಲಿಗರೊಂದಿಗೆ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ತುಮಕೂರಿನಲ್ಲಿ ಮಂಗಳವಾರ ನಡೆಯಿತು.
ಕಳೆದ ಎರಡು ವರ್ಷಗಳ ಹಿಂದೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪೂರ್ಣಗೊಳಿಸಿರುವ ಶೌಚಾಲಯ, ಚೆಕ್ಡ್ಯಾಂ ಕಾಮಗಾರಿಗಳಿಗೆ ಹಣ ಪಾವತಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದ ಬೆಳಧರ ಗ್ರಾಮಪಂಚಾಯಿತಿ ಸದಸ್ಯರು ಅಧಿಕಾರಿಗಳಿಗೆ ಕೊನೆಗೆ ಬೇಸತ್ತು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರಿನ ಶ್ರೀರಾಮನಗರದಲ್ಲಿರುವ ಜಿಲ್ಲಾ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ತುಮಕೂರು ತಾಲೂಕಿನ ಗ್ರಾಮಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ, ಕಾರ್ಯದರ್ಶಿ, ಕಂಪ್ಯೂಟರ್ ಆಪರೇಟರ್ಗಳಿಗೆ ಎಂ.ಎನ್.ಆರ್.ಇ.ಜಿ.ಎ ಕಾಮಗಾರಿಗಳ ಅನುಷ್ಠಾನ ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.
ಬೆಳಗ್ಗೆ 10 ಗಂಟೆಗೆ ಕಾರ್ಯಾಗಾರ ಆರಂಭವಾಯಿತು. ಪ್ರಾರಂಭದಲ್ಲಿ ಬೆಳಧರ ಗ್ರಾಮಪಂಚಾಯಿತಿ ಸದಸ್ಯರು ನಮ್ಮ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಿರ್ಮಿಸಿದ ಚೆಕ್ ಡ್ಯಾಂಗೆ, ಶೌಚಾಲಯಗಳಿಗೆ ಹಾಗೂ ಬಸವ ವಸತಿ ಯೋಜನೆಯ ಮನೆಗಳಿಗೆ ಇದುವರೆಗೂ ಬಿಲ್ ಪಾವತಿಸಿಲ್ಲ. ಇದೇ ಪರಿಸ್ಥಿತಿ ತಾಲೂಕಿನ ಹಲವಾರು ಗ್ರಾಮಪಂಚಾಯಿತಿಗಳಲ್ಲಿ ಇದೆ. ಆದ್ದರಿಂದ ಹೊಸ ಅನುಷ್ಠಾನದ ಬಗ್ಗೆ ಮಾತನಾಡುವ ಮೊದಲು ಬಾಕಿ ಇರುವ ಬಿಲ್ ಪಾವತಿಸಿ ಎಂದು ತಾಲೂಕು ಪಂಚಾಯಿತಿ ಇಓ ವೆಂಕಟೇಶಯ್ಯ ಅವರನ್ನು ಒತ್ತಾಯಿಸಿದರು. ಇದೇ ರೀತಿ ಒತ್ತಡ ಹಲವು ಗ್ರಾಮಪಂಚಾಯಿತಿಗಳ ಸದಸ್ಯರಿಂದ ಕೇಳಿ ಬಂತು.
ಅಧಿಕಾರವಿಲ್ಲ: ಈ ಸಂದರ್ಭದಲ್ಲಿ ಉತ್ತರಿಸಿದ ತಾ.ಪಂ.ಇಓ ವೆಂಕಟೇಶಯ್ಯ, ಹಳೆಯ ಬಿಲ್ಗಳನ್ನು ಪಾವತಿ ಮಾಡಲು ನಮಗೆ ಅಧಿಕಾರವಿಲ್ಲ. ಈಗಾಗಲೇ ಅನುದಾನ ಬಿಡುಗಡೆ ಆನ್ಲೈನ್ ಆಗಿರುವುದರಿಂದ ಹಿಂದಿನ ಬಿಲ್ಗಳನ್ನು ಪಾವತಿ ಮಾಡಲು ಬರುವುದಿಲ್ಲ ಎಂಬ ಉತ್ತರ ನೀಡಿದರು. ಇಓ ವೆಂಕಟೇಶಯ್ಯನವರ ಉತ್ತರದಿಂದ ಕುಪಿತರಾದ ಸದಸ್ಯರು ಚೆಕ್ಡ್ಯಾಂ ನಿರ್ಮಾಣ ಮಾಡಿದ ಹಣ ಬಿಡುಗಡೆಯಾಗದ ಕಾರಣ ಊರಿನಲ್ಲಿ ನಾವು ತಲೆಎತ್ತಿ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯದ ಹಣ, ಮನೆ ನಿರ್ಮಾಣ ಹಣವನ್ನು ಫಲಾನುಭವಿಗಳಿಗೆ ನೀಡಿಲ್ಲ. ಫಲಾನುಭವಿಗಳು ನಮ್ಮ ಮನೆಗಳ ಹತ್ತಿರ ಬಂದು ಕೇಳುತ್ತಿದ್ದಾರೆ. ಹಿಂದಿನ ಹಣ ನೀಡದ ಮೇಲೆ ಕಾರ್ಯಾಗಾರ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ ಸದಸ್ಯರು, ಬೇರೆ ಗ್ರಾಮ ಪಂಚಾಯಿತಿಗಳ ಸದಸ್ಯರುಗಳೊಂದಿಗೆ ಸಭೆಯಿಂದ ಹೊರಬಂದು ತಾ.ಪಂ. ಇಓ, ಗ್ರಾಮಪಂಚಾಯಿತಿ ಪಿಡಿಓ, ಕಾರ್ಯದರ್ಶಿಗಳ ವಿರುದ್ಧ ಘೋಷಣೆ ಕೂಗುತ್ತಾ ಅಧಿಕಾರಿಗಳ ಧೋರಣೆಯನ್ನು ಖಂಡಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಅಧಿಕಾರಿಗಳು ಮತ್ತು ಚುನಾಯಿತಿ ಪ್ರತಿನಿಧಿಗಳ ನಡುವಿನ ಮುಸುಕಿನ ಗುದ್ದಾಟ ಒಮ್ಮೆ ತಾರಕಕ್ಕೇರಿದರೆ, ಒಂದೊಮ್ಮೆ ತಣ್ಣಗಾಗುತಿತ್ತು.
ಸ್ಥಳಕ್ಕೆ ಆಗಮಿಸಿದ ಸಿಇಓ : ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸ್ಥಳದಲ್ಲಿಯೇ ಇದ್ದು, ಹಲವಾರು ಬಾರಿ ಸದಸ್ಯರಿಗೆ ಮನವಿ ಮಾಡಿದರೂ ಯಾರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಸಿಇಓ ಗೋವಿಂದರಾಜು, ಸಭಾಂಗಣದಿಂದ ಹೊರಗಿದ್ದ ಸದಸ್ಯರನ್ನು ಒಳಗೆ ಬನ್ನಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರೂ ಕೆಲವರು ಒಳ ಬಂದರೆ ಮತ್ತೆ ಕೆಲವರು ಹೊರಗೆ ನಿಂತು ಸಿಇಓಗೂ ಧಿಕ್ಕಾರ ಕೂಗಿದರು.
ಗದ್ದಲದ ವಾತಾವಾರಣದಲ್ಲಿಯೇ ಕಾರ್ಯಾಗಾರ ಆರಂಭಿಸಿ ಮಾಹಿತಿ ನೀಡಲು ಮುಂದಾದಾಗ ಕೆಲ ಸದಸ್ಯರು ಮತ್ತೆ ಅಡ್ಡಿ ಪಡಿಸಲು ಮುಂದಾದರು. ಆದರೆ ಇದಕ್ಕೆ ಅವಕಾಶ ನೀಡದ ಸಿಇಓ ಮುಂದಿನ 15 ದಿನಗಳಲ್ಲಿ ಬಾಕಿ ಉಳಿದಿರುವ ಬಿಲ್ ಪಾವತಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿ ಸಭೆಯನ್ನು ಮುಂದುವರೆಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement