'ಕಕ್ಷಿದಾರರಿಗೆ ನ್ಯಾಯ ದೊರಕಿಸುವಲ್ಲಿ ಕಾನೂನು ಅರಿವು ಮುಖ್ಯ'
ತಿಪಟೂರು: ವಕೀಲರು ಶಿಸ್ತು ಮತ್ತು ಕಾನೂನು ಬದ್ಧತೆಯ ಬಗ್ಗೆ ಅರಿವು ಮೂಡಿಸಿಕೊಂಡು ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಭಾಗವಹಿಸಿ ಸಾಕ್ಷಾಧಾರಗಳ ಸಮೇತ ದಿಟ್ಟವಾಗಿ ವಾದಮಂಡಿಸಿದಲ್ಲಿ ನಂಬಿ ಬಂದಿರುವ ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ ಎಂದು 5ನೇ ಜಿಲ್ಲಾ ಸತ್ರ ನ್ಯಾಯಾಧೀಶರದಾ ಕೆ.ಬಿ. ಗೀತಾ ತಿಳಿಸಿದರು.
ನಗರದ ವಕೀಲರ ಸಂಘದ ವತಿಯಿಂದ ನಡೆದ ರಾಷ್ಟ್ರೀಯ ಕಾನೂನು ದಿನಾಚರಣೆ ಹಾಗೂ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಕೀಲರು ವೃತ್ತಿ ಗೌರವವನ್ನು ಕಾಪಾಡಿಕೊಳ್ಳಬೇಕು. ಕಾನೂನು ತಿಳಿವಳಿಕೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಬುದ್ಧಿವಂತಿಕೆ ಹಾಗೂ ಜವಾಬ್ದಾರಿಯುತವಾದ ಮಂಡನೆಯಲ್ಲಿ ಬೆಳಕು ಚೆಲ್ಲಬೇಕೆಂದರು. ಸರ್ಕಾರಿ ಅಭಿಯೋಜಕ ನಿರಂಜನಮೂರ್ತಿ ಮಾತನಾಡಿ ವಕೀಲರು ಪ್ರಕರಣಗಳ ಮತ್ತು ಕಾನೂನುಗಳ ಬಗ್ಗೆ ಆಳ ಅಧ್ಯಯನ ನಡೆಸುವ ಮೂಲಕ ಜಯ ಸಾಧಿಸಬೇಕು. ನೂತನ ಕಾನೂನು ತಿದ್ದುಪಡಿಗಳನ್ನು ಹೆಚ್ಚೆಚ್ಚು ಅರಿತು ವಾದ ಮಂಡಿಸಿದಲ್ಲಿ ಹಿರಿಯ ಮತ್ತು ಕಿರಿಯ ವಕೀಲರುಗಳೆಂಬ ಭೇದ ಭಾವವಿಲ್ಲದೆ ನ್ಯಾಯ ದೊರಕಿಸಿ ಕೊಡಲು ಸಾಧ್ಯ ಎಂದರು. ವಕೀಲರ ಸಂಘದ ಅಧ್ಯಕ್ಷ ಜಯಣ್ಣ ಮಾತನಾಡಿ ವಕೀಲರು ಶುದ್ಧ ಚಾರಿತ್ರ್ಯವಂತರಾಗಿ ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಬಾಬು ರಾಜೇಂದ್ರ ಪ್ರಸಾದ್ ಅವರ ಆದರ್ಶವನ್ನು ಎತ್ತಿ ಹಿಡಿಯಬೇಕು ಎಂದರು.