ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಡಿಸಿ
ತುಮಕೂರು: ಯಾವ ಕ್ಷೇತ್ರ, ಪರಿಸ್ಥಿತಿ ನಮ್ಮನ್ನು ಆಲಂಗಿಸುತ್ತದೆಯೋ, ಯಾವ ಕ್ಷೇತ್ರದಲ್ಲಿನ ವ್ಯಾಸಂಗ ನಮಗೆ ಮುದ ನೀಡುತ್ತದೆಯೋ, ಅಂತಹ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಕಠಿಣ ಪರಿಶ್ರಮ ಮಾಡುವ ಮೂಲಕ ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಕರೆ ನೀಡಿದರು.
ಅವರು ಬುಧವಾರ ಪದವಿಪೂರ್ವ ಶಿಕ್ಷಣ ಇಲಾಖೆ, ತುಮಕೂರು, ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 2013-14 ನೇ ಸಾಲಿನ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾವಂತರಾಗಬೇಕು. ಏಕಾಗ್ರತೆಯನ್ನು ರೂಢಿಸಿಕೊಳ್ಳಬೇಕು. ಇಡೀ ವಿಶ್ವವನ್ನೇ ಗೆಲ್ಲುವ ಸಾಮರ್ಥ್ಯ ವಿದ್ಯಾರ್ಥಿಗಳ ಕೈಯಲ್ಲಿದೆ. ಗೆಲ್ಲುವ ಚಾಕಚಕ್ಯತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಶಾಲಾ ಚಟುವಟಿಕೆಗಳಿಗೆ ಮೀಸಲಿಡಬೇಕು. ಅನಾವಶ್ಯಕವಾಗಿ ಟಿ.ವಿ. ವೀಕ್ಷಿಸುವ ಪರಿಪಾಠ ಬೆಳೆಸಿಕೊಳ್ಳಬಾರದು ಎಂದ ಅವರು, ಜೀವನದಲ್ಲಿ ನೀವೇನಾಗಬೇಕು ಎಂಬುದನ್ನು ಸೂಕ್ತ ರೀತಿಯಲ್ಲಿ ನಿರ್ಧಾರ ಮಾಡಿಕೊಳ್ಳಿ ಎಂದರು.
ತನ್ನ ಜೀವನವನ್ನು ಕ್ರಿಯಾತ್ಮಕವಾಗಿ, ಸುಂದರವಾಗಿ ಅರಳುವಂತೆ ಮಾಡುವ ಕಲೆ ಪ್ರತಿಯೊಬ್ಬ ಮಾನವನಲ್ಲಿ ಅಡಗಿರುತ್ತದೆ. ಆ ಕಲೆಯನ್ನು ಸುಪ್ತವಾಗಿರಿಸದೆ ರಚನಾತ್ಮಕವಾಗಿ ಬಳಸಿಕೊಳ್ಳಬೇಕು ಎಂದ ಅವರು, ಸ್ವಂತಿಕೆ ಇಲ್ಲದ ಮನುಷ್ಯನನ್ನು ಎಲ್ಲರೂ ಆಡಿಸುತ್ತಾರೆ. ಆದ್ದರಿಂದ ಅಂತಃಶಕ್ತಿ ಬೆಳಸಿಕೊಳ್ಳಿ. ನಿಮ್ಮದೇ ಆದ ಚೌಕಟ್ಟಿನೊಳಗೆ ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸುಂದರ ಬದುಕು ರೂಪಿಸಿಕೊಳ್ಳಿ ಎಂದರು.
ಎಂಪ್ರೆಸ್ ಕಾಲೇಜಿನ ಪ್ರಾಚಾರ್ಯ ಬಿ. ಮರುಳಯ್ಯ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಯಪ್ರಕಾಶ್ ಉಪಸ್ಥಿತರಿದ್ದರು.