ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಲಿ
ತುಮಕೂರು: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು ಎಂದು ಮಹಿಳಾ ಸಮಾಜ ಟ್ರಸ್ಟ್ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ನುಡಿದರು. ಅವರು ಮಹಿಳಾ ಸಮಾಜದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದಲ್ಲಿ ಕನ್ನಡ ಕಲಿಯದಿದ್ದರೆ ಸುಗಮ ಬಾಳ್ವೆ ಸಾಗುವುದಿಲ್ಲ ಎಂಬ ವಾತಾವರಣ ನಿರ್ಮಾಣವಾದಾಗ ಮಾತ್ರ ರಾಜ್ಯದಲ್ಲಿರುವ ಪರಕೀಯರು ಕನ್ನಡ ಕಲಿಯಲು ಮುಂದಾಗುತ್ತಾರೆ ಎಂದು ನುಡಿದರು. ನಮ್ಮ ನೆಲ, ಭಾಷೆ, ಜಲದ ಬಗ್ಗೆ ಅಭಿಮಾನ, ಸಂಸ್ಕೃತಿ, ಪರಂಪರೆಗಳ ಬಗ್ಗೆ ಹೆಮ್ಮೆ ಮೂಡಿಸಿಕೊಂಡಾಗ ಮಾತ್ರ ಕನ್ನಡದ ಉದ್ಧಾರ ಸಾಧ್ಯವೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಟಿ.ಎನ್. ಶೀಲವತಿ ಮಾತನಾಡಿ ರಾಷ್ಟ್ರದ ಅತ್ಯಂತ ಪ್ರಾಚೀನ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿದ್ದು ಪ್ರಬುದ್ಧ ಸಾಹಿತ್ಯ, ಶಿಲ್ಪಕಲೆ, ಸಂಗೀತ, ನೃತ್ಯ ಇತ್ಯಾದಿ ಲಲಿತ ಕಲೆಗಳ ತವರೂರಾದ ಕರ್ನಾಟಕದಲ್ಲಿ ಹುಟ್ಟಿದ ಧನ್ಯತೆ ನಮ್ಮದಾಗಬೇಕು ಎಂದರು. ಈ ಸಂದರ್ಭದಲ್ಲಿ ಕನ್ನಡ ಭಾವಗೀತೆಗಳು, ಏಕಪಾತ್ರಾಭಿನಯ ಏರ್ಪಡಿಸಿ ಬಹುಮಾನ ನೀಡಲಾಯಿತು. ಗಿರಿಜಾ ಸುರೇಶ್, ಪದ್ಮಿನಿ ಪ್ರಭಾಕರ, ವಿಜಯಲಕ್ಷ್ಮೀ ಗೋಪಾಲ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು ಉಷಾ ಅನಂತರಾಮಯ್ಯ ಸ್ವಾಗತಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಸುಭಾಷಿಣಿ ಆರ್. ಕುಮಾರ್ ನಿರೂಪಿಸಿದರು. ಪದ್ಮಾ ನರಸಿಂಹಮೂರ್ತಿ, ಇಂದಿರಮ್ಮ, ಸುಂದರರಾವ್, ಸೂರ್ಯಪ್ರಕಾಶ್ ಹಾಜರಿದ್ದರು.