ರಾಷ್ಟ್ರೀಯ ಖೋ-ಖೋ ಟೂರ್ನಿಗೆ ಚಾಲನೆ
ತುಮಕೂರು: ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆರಂಭವಾದ ರಾಷ್ಟ್ರೀಯ ಖೋ-ಖೋ ಪಂದ್ಯಾವಳಿಗೆ ಸಿದ್ಧಗಂಗಾ ಮಠಾಧ್ಯಕ್ಷ ಡಾ. ಶಿವಕುಮಾರಸ್ವಾಮಿ ಕ್ರೀಡಾಪಟುಗಳ ಪಥಸಂಚಲನಕ್ಕೆ ಚಾಲನೆ ನೀಡಿದರು.
ಈ ಮೂಲಕ 25ನೇ 14 ವರ್ಷದೊಳಗಿನ ಕಿರಿಯರ ರಾಷ್ಟ್ರೀಯ ಖೋ-ಖೋ ಪಂದ್ಯಾವಳಿ ಮತ್ತು 24ನೇ ಪುರುಷ ಮತ್ತು ಮಹಿಳೆಯರ ಫೆಡರೇಷನ್ ಕಪ್ ಟೂರ್ನಿಗೆ ಚಾಲನೆ ನೀಡಿದರು.
ರಾಷ್ಟ್ರದ ಎಲ್ಲಾ ರಾಜ್ಯಗಳ ಬಾಲಕ-ಬಾಲಕಿಯರ ತಂಡಗಳು ಹಾಗೂ ಕಳೆದ ಸಾಲಿನ ಫೆಡರೇಷನ್ ಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಹಂತದಲ್ಲಿ ಭಾಗವಹಿಸಿದ್ದ ಎಂಟು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಸಂಜೆ ನಡೆದ ಪಥಸಂಚಲನದಲ್ಲಿ ಅತಿಥೇಯ ಕರ್ನಾಟಕ, ಜಾರ್ಖಂಡ್, ತ್ರಿಪುರ, ಗೋವಾ, ರಾಜಸ್ಥಾನ, ಪುದುಚೇರಿ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶದ ಕ್ರೀಡಾಪಟುಗಳು ಭಾಗವಹಿಸಿದ್ದು, ಸಾಂಪ್ರದಾಯಕ ಉಡುಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಪಥಸಂಚಲನಕ್ಕೆ ಮೆರಗು ತಂದರು.
ನಗರದ ಸರಕಾರಿ ಕಿರಿಯ ಕಾಲೇಜು ಮೈದಾನದಿಂದ ಪ್ರಾರಂಭವಾದ ಕ್ರೀಡಾಪಟುಗಳ ಪಥಸಂಚಲನ ಬಿ.ಹೆಚ್. ರಸ್ತೆ, ಟೌನ್ಹಾಲ್, ಆಶೋಕರಸ್ತೆ, ಎಂ.ಜಿ.ರಸ್ತೆ ಮೂಲಕ ಕ್ರೀಡಾಕೂಟ ನಡೆಯುವ ಜೂನಿಯರ್ ಕಾಲೇಜು ಮೈದಾನಕ್ಕೆ ತಲುಪಿತು. ಕ್ರೀಡಾಪಟುಗಳೊಂದಿಗೆ ರಾಜ್ಯ ಖೋ-ಖೋ ಸಂಸ್ಥೆಯ ಕಾರ್ಯದರ್ಶಿ ಲೋಕೇಶ್ವರ್,ಜಿಲ್ಲಾ ಖೋ-ಖೋ ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣಯ್ಯ,ವಿವೇಕಾನಂದ ಕ್ರೀಡಾಸಂಸ್ಥೆಯ ಧನಿಯಾಕುಮಾರ್, ಖಜಾಂಚಿ ಸುನಿಲ್ ಮತ್ತಿತರರು ಪಾಲ್ಗೊಂಡಿದ್ದರು.
ಪಥಸಂಚಲನಕ್ಕೆ ಚಾಲನೆ ನೀಡಿ ಮಾತನಾಡಿದ ಸಿದ್ದಗಂಗಾ ಮಠಾಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ,
ತುಮಕೂರು ನಗರದಲ್ಲಿ ಇದೇ ಪ್ರಥಮ ಬಾರಿಗೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವೊಂದು ನಡೆಯುತ್ತಿರುವುದು ಸಂತಸದ ವಿಷಯವಾಗಿದೆ. ತುಮಕೂರು ಎಲ್ಲ ರೀತಿಯ ಮೂಲಸೌಕರ್ಯ ಹೊಂದಿರುವ ನಗರವಾಗಿದೆ. ಜೊತೆಗೆ ಐತಿಹಾಸಿಕ ತಾಣವಾಗಿರುವ ಹಿನ್ನೆಲೆಯಲ್ಲಿ ಕ್ರೀಡಾಕೂಟಕ್ಕೆ ಹೆಚ್ಚಿನ ಮೆರಗು ಬಂದಿದೆ ಎಂದರು. ನಾಲ್ಕು ದಿನಗಳ ಈ ಕ್ರೀಡಾಕೂಟದಲ್ಲಿ ಸೋಲು-ಗೆಲವಿಗಿಂತ ಕ್ರೀಡಾಸ್ಫೂರ್ತಿಯಿಂದ ಭಾಗವಹಿಸಿ ತೀರ್ಪುಗಾರರು ನೀಡುವ ನಿರ್ಣಯಕ್ಕೆ ತಲೆಬಾಗಿ ಒಳ್ಳೆಯ ಕ್ರೀಡಾಪಟುಗಳಾಗಿ ಹೊರಹೊಮ್ಮುವಂತೆ ಕಿವಿಮಾತು ಹೇಳಿದರು. ಸಮಾರಂಭದಲ್ಲಿ ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತರಿದ್ದರು.