ಅಸಮಾನತೆ ಛಿದ್ರಗೊಳಿಸುವ ಕಾವ್ಯ ನಮಗಿಂದು ಬೇಕು
ತುಮಕೂರು: ಸಮಾಜದಲ್ಲಿರುವ ಅಸಮಾನತೆಗಳ ಛಿದ್ರಗೊಳಿಸುವ ಕಾವ್ಯ ನಮಗಿಂದು ಬೇಕಾಗಿದೆ ಎಂದು ತುಮಕೂರು ವಿ.ವಿ.ನಿಲಯದ ಕನ್ನಡ ಪ್ರಾಧ್ಯಾಪಕ ವೆಂಕಟರೆಡ್ಡಿ ರಾಮರೆಡ್ಡಿ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಹಾಗೂ ನಗರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನೀಲಮ್ಮ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮನೋಹರ್ ಎನ್.ಎಸ್. ಅವರ ಕೃತಿ ಮುಗಿಯದ ಮೌನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಪರಿಚಯ ಮಾಡಿದರು.
ಕವಿತೆ ಯಾವತ್ತೂ ಕಟ್ಟುವುದಲ್ಲ. ಹುಟ್ಟುವುದು, ಕವಿಯ ಕೃತಕತೆಯನ್ನು ಬಿಂಬಿಸುತ್ತದೆ. ಲೋಕಾನುಭವವೇ ಕವಿಯ ಕಾವ್ಯಾನುಭವವಾದಾಗ ಕವಿತೆ ಸಹಜವಾಗಿ ಹುಟ್ಟುತ್ತದೆ. ಕವಿತೆ ತಾನೇ ಬರೆಸಿಕೊಳ್ಳುತ್ತದೆ. ಕವಿ ಅದರ ಮಾಧ್ಯಮ ಮಾತ್ರ. ಕಟ್ಟುವ ಕವಿತೆಯು ಕವಿತೆಯಲ್ಲ ಅದರ ನೆರಳು ಮಾತ್ರ. ಮುಗಿಯದ ಮೌನ ಕವನ ಸಂಕಲನದಲ್ಲಿ ರಾಜಕೀಯ, ಜಾಗತೀಕರಣ, ಸಾಫ್ಟ್ವೇರ್ ಎಂಜಿನಿಯರ್ಗಳು ಮುಂತಾದ ಕವಿತೆಗಳು ಸೊಗಸಾಗಿ ಹುಟ್ಟಿ ಬಂದ ಕವಿತೆಗಳಾಗಿವೆ.
ಯುವ ಕವಿ ಮನೋಹರ್ ಮುಗಿಯದ ಮೌನವನ್ನು ಮುರಿದು ಮುನ್ನುಗ್ಗಲಿ. ಇವರಿಂದ ಇನ್ನೂ ಅತ್ಯುತ್ತಮ ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.
ನಿಜವಾದ ಸಂತೋಷ: ಮುಗಿಯದ ಮೌನ ಕೃತಿಯನ್ನು ಲೋಕಾರ್ಪಣೆಗೊಳಿಸಿದ ನಿವೃತ್ತ ಕನ್ನಡ ಪಂಡಿತರಾದ ಜಿ.ಡಿ. ಕೃಷ್ಣಶಾಸ್ತ್ರಿ ಪಂಡಿತ್ ಅವರು ಮಾತನಾಡಿ ಶಿಷ್ಯರೇ ಗುರುಗಳಿಗೆ ಬಲಾಬಲ. ಗುರುವನ್ನು ಮೀರಿಸುವಂತಹ ಶಿಷ್ಯನಾದರೆ ಆಗ ನಿಜವಾದ ಸಂತೋಷ, ಸಂತೃಪ್ತಿ ಉಂಟಾಗುತ್ತದೆ. ಗುರುಗಳು ತನ್ನ ಶಿಷ್ಯರ ಯೋಗಕ್ಷೇವು ನೋಡಿಕೊಳ್ಳಬೇಕು. ಗುರುಗಳು ಜ್ಞಾಪಿಸಿಕೊಳ್ಳುವಂತಹ ಶಿಷ್ಯರಾಗಬೇಕು. ವಿದ್ಯೆ ಅರ್ಜಿಸಲು ಇರಬೇಕು ಎಂದು ಹೇಳಿದರು.
ಯುವ ಕವಿ ಎನ್.ಎಸ್. ಮನೋಹರ್ ಮಾತನಾಡಿದರು. ತಾಲೂಕು ಕ.ಸಾ.ಪ. ಅಧ್ಯಕ್ಷ ಕೆಂ.ಬ.ರೇಣುಕಯ್ಯ ಮಾತನಾಡುತ್ತಾ ಪ್ರತಿ ಶುಕ್ರವಾರ ಇದೇ ಸ್ಥಳದಲ್ಲಿ ನಡೆಯುವ ವಾರದ ಸಾಹಿತ್ಯ ಸಂಭ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ ಕಾರ್ಯಕ್ರಮ ಯಶಸ್ವಿಗೊಳಿಸಿ. ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಕಾರ್ಯಕ್ರಮ ಮಾಡುವವರಿಗೆ ಎಲ್ಲಾ ಸಹಕಾರ ನೀಡುತ್ತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷ ಡಾ. ಸೋಮುಭಾಸ್ಕರಾಚಾರ್ ಅವರು ಮಾತನಾಡುತ್ತಾ ಕವಿಗಳಾದವರು ಮನುಷ್ಯನನ್ನು ತಮ್ಮ ಸಾಹಿತ್ಯದ ಮೂಲಕ ಚಿಂತನೆಗೆ ಹಚ್ಚದಿದ್ದರೆ ಅವರ ಸಾಹಿತ್ಯ ವ್ಯರ್ಥ. ಕವಿಗಳಲ್ಲಿ ಮುಖ್ಯವಾಗಿ 3 ಅಂಶಗಳನ್ನು ಹೊಂದಿರಬೇಕು, ಬದುಕಿನ ಬದ್ಧತೆ, ಪ್ರಬುದ್ಧತೆ ಹಾಗೂ ಪರಿಪೂರ್ಣತೆಗಳನ್ನು ಮೂಲಭೂತವಾಗಿ ಹೊಂದಿರಬೇಕು. ಅಲ್ಲದೆ ಅನುಸರಣೆಯ ಬದ್ಧತೆ ಹಾಗೂ ಭಾಷಾ ಸಂಪತ್ತನ್ನು ಹೊಂದಿದ್ದರೆ ಸೂಕ್ತ. ಸಾಫ್ಟ್ವೇರ್ ಎಂಜಿನಿಯರ್ ಮನೋಹರ್ ಅವರು ಸತತ ಸಾಧನೆಯಿಂದ ಕವಿಯಾಗಿದ್ದಾರೆ ಎಂದು ಹೇಳಿದರು.
ಯುವಕವಿ ಎ.ಆರ್. ರಮೇಶ್ ಪ್ರಾರ್ಥಿಸಿದರು, ಟಿ.ಎನ್. ಹೊನ್ನೇಶ್ ಸ್ವಾಗತಿಸಿದರು. ಉಪನ್ಯಾಸಕ ಎಂ. ಸುರೇಶ್ ನಿರೂಪಿಸಿದರು. ಕವಿ ಮನೋಹರ್ ವಂದಿಸಿದರು.