ಒಳಮೀಸಲಾತಿ ಅಂಗೀಕಾರಕ್ಕೆ ಸಿಎಂಗೆ ಮನವಿ
ತುಮಕೂರು: ಒಳಮೀಸಲಾತಿ ಸಂಬಂಧ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಅಂಗೀಕಾರ ಮಾಡಬೇಕೆಂದು ಮಾದಿಗ ದಂಡೋರದ ಪಾವಗಡ ಶ್ರೀರಾಮ್ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.
ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ಎಷ್ಟು ಮುಖ್ಯವೋ ಅದರಲ್ಲಿ ಬರುವ ಅಸ್ಪೃಶ್ಯ ಜಾತಿಗಳಿಗೆ ಒಳಮೀಸಲಾತಿ ಅಷ್ಟೆ ಮುಖ್ಯ. ಒಳಮೀಸಲಾತಿಗಾಗಿ ಎರಡು ದಶಕಗಳಿಂದ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತು ಇತರೆ ಅಸ್ಪೃಶ್ಯ ಜಾತಿಗಳ ಸಂಘಟನೆಗಳು ಹೋರಾಟ ಮಾಡಿದ ಫಲವಾಗಿ 30 ಜಿಲ್ಲೆ 176 ತಾಲೂಕುಗಳ ಸಮೀಕ್ಷೆ ಮಾಡಿ ಕಳೆದ ಜೂನ್ 14 ರಂದು ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿದರೆ 18 ವರ್ಷಗಳ ಕಾಲ ಹೋರಾಟ ಮಾಡಿದ ಅಸ್ಪೃಶ್ಯ ಜಾತಿಗಳಿಗೆ ನ್ಯಾಯ ಸಿಗುತ್ತದೆ ಎಂದು ಪಾವಗಡ ಶ್ರೀರಾಮ್ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು ಎರಡು ದಶಕಗಳ ಕಾಲ ನಿಮ್ಮ ಹೋರಾಟ ಗಮನಿಸಿದ್ದೇನೆ. ಹಿಂದಿನ ವರ್ಷ ಬೆಳಗಾವಿಯ ಸುವರ್ಣಸೌಧ ಮುತ್ತಿಗೆ ಸಮಯದಲ್ಲಿ ಲಾಠಿ ಚಾರ್ಜ್ ಆದಾಗ ವಿರೋಧ ಪಕ್ಷದಲ್ಲಿ ನಾಯಕನಾಗಿದ್ದ ನಾನು ಲಾಠಿ ಚಾರ್ಜ್ ಅನ್ನು ಖಂಡಿಸಿದ್ದೇನೆ. ಈಗ ಮುಖ್ಯಮಂತ್ರಿಯಾಗಿ ಸುಳ್ಳು ಭರವಸೆ ಕೊಡಲು ತಯಾರಿಲ್ಲ. ಪರಿಶಿಷ್ಟ ಜಾತಿಯ ಎಲ್ಲಾ ಶಾಸಕರು ಮತ್ತು ಮಂತ್ರಿಗಳ ಜತೆಗೆ ಈ ವಿಷಯ ಚರ್ಚಿಸಿ ವರದಿಯನ್ನು ಸಮಗ್ರವಾಗಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಲಾಯರ್ ಜಯಪ್ಪ, ಮುಳುಬಾಗಿಲು ನಾಗರಾಜು, ಮಹಿಳಾಧ್ಯಕ್ಷೆ ಲಕ್ಷ್ಮೀದೇವಮ್ಮ, ಬಿ.ಜಿ. ಸಾಗರ್, ಎನ್. ನಾಗರಾಜು, ನರಸಿಂಹ, ಕಾರ್ಮಿಕ ಘಟಕ ಅಧ್ಯಕ್ಷ ದಾಸರಹಳ್ಳಿ ಗಂಗರಾಜು, ವಕ್ತಾರ ಆಟೋ ಗಣೇಶ್, ಗೌರವಾಧ್ಯಕ್ಷ ಭೀಷ್ಮ, ವಿಜಯ ಬಸವರಾಜ್, ಪ್ರೊ. ಚಂದ್ರಕಲಾ ಇದ್ದರು.