'ಕನ್ನಡ ಜೀವಂತವಾಗಿದ್ದರೆ ಅದು ಆಟೋ ಚಾಲಕರಿಂದ ಮಾತ್ರ'
ಚಿಕ್ಕನಾಯಕನಹಳ್ಳಿ: ಕರ್ನಾಟಕದಲ್ಲಿ ಇಂದು ಕನ್ನಡವೇನಾದರು ಜೀವಂತವಾಗಿದ್ದರೆ ಅದು ಆಟೋಚಾಲಕರಿಂದ ಮಾತ್ರ ಎಂದು ತುಮಕೂರು ಜಿಲ್ಲಾ ಆಟೋಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷರಾದ ವಿ.ಪ್ರತಾಪ್ ನುಡಿದರು.
ಅವರು ಪಟ್ಟಣದ ಕನ್ನಡಸಂಘದ ವೇದಿಕೆಯಲ್ಲಿ ತಾಲೂಕು ಸುಭಾಷ್ ಚಂದ್ರಭೋಸ್ ಆಟೋಚಾಲಕರ ಮತ್ತು ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಕನ್ನಡದ ಉಳಿವಿಗೆ ಬಡ, ಮಧ್ಯಮ, ಕೂಲಿ ಕಾರ್ಮಿಕ ಮತ್ತು ಆಟೋ ಚಾಲಕರೇ ಕಾರಣ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಗಳನ್ನಲಂಕರಿಸುತ್ತಾರೆ. ಆದರೆ ನಾವು ಪ್ರತಿನಿತ್ಯ ತುತ್ತು ಅನ್ನಕ್ಕಾಗಿ, ದುಡಿಮೆಯ ಜೊತೆಗೆ ಕನ್ನಡಾಂಬೆಯ ಸೇವೆಟನ್ನು ಮಾಡುತ್ತೇವೆ ಎಂದರು. ಆಟೋ ಚಾಲಕರ ಮತ್ತು ಮಾಲೀಕರ ಸಮಸ್ಯೆಗಳಿಗೆ ಸ್ಥಳೀಯ ಪುರಸಭೆ 22.75 ಮತ್ತು ಶಹರಿರೋಜ್‌ಗಾರ್ ಯೋಜನೆಗಳಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಬಹುದಾಗಿದೆ. ಆದರೆ ಅವರಿಗೆ ಅದರ ಬಗ್ಗೆ ಅರಿವಿಲ್ಲದಂತೆ ವರ್ತಿಸುತ್ತಿದ್ದಾರೆ. ನೀವು ನಿಮ್ಮ ಮನೆಯ ಹಣವನ್ನು ಕೊಡಬೇಡಿ, ಸರ್ಕಾರದ ಅನುದಾನವನ್ನು ನಿಜವಾದ ಫಲಾನುಭವಿಗೆ ಹಂಚಿ. ಮುಂದಾದರು ನ್ಯಾಯವಾಗಿ ಫಲಾನುಭವಿಗಳನ್ನು ಆಯ್ಕೆಮಾಡಿ. ಪ್ರಯಾಣಿಕರೇ ನಮ್ಮ ಅನ್ನದಾತರು,ಅವರನ್ನು ಗೌರವದಿಂದ ಕಾಣಿ ಎಂದರು.
ಶಾಸಕರ ಅನುಪಸ್ಥಿತಿಯಲ್ಲಿ ಅವರ ಸಹೋದರ ತಿಪ್ಪೇಸ್ವಾಮಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು.ಪುರಸಭಾಧ್ಯಕ್ಷೆ ಗೀತಾ, ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಎಚ್.ಬಿ. ಪ್ರಕಾಶ್, ಸಿ.ಎಂ. ರಂಗಸ್ವಾಮಯ್ಯ, ರಾಜಶೇಖರ್, ರೇಣುಕಮ್ಮ, ಪ್ರೇಮ, ಅಶೋಕ್, ಮಧುಗಿರಿ,ತಿಪಟೂರು, ಕೆ.ಬಿ.ಕ್ರಾಸ್, ಆಟೋಚಾಲಕರ ಸಂಘಗಳ ಅಧ್ಯಕ್ಷರಾದ ಸಿದ್ದಪ್ಪ, ವೆಂಕಟೇಶ್, ಶಿವಶಂಕರ್ ಮುಂತಾದವರು ಭಾಗವಹಿಸಿದ್ದರು.