ಕಾರ್ಮಿಕ ನಿಧಿ ದುರ್ಬಳಕೆಗೆ ಸರ್ಕಾರ ಸಜ್ಜು
ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಕಾರ್ಮಿಕರ ತಲೆ ಮೇಲೆ ಚಪ್ಪಡಿ ಎಳೆಯಲು ಸಿದ್ದತೆ ನಡೆಸಿದ್ದು, ಕಳೆದ 5 ವರ್ಷಗಳಿಂದ ಸಂಗ್ರಹಿಸಿರುವ 2000 ಕೋಟಿ ಹಣದಲ್ಲಿ ಕೇವಲ 12 ಕೋಟಿ ಚಿಲ್ಲರೆ ಹಣವನ್ನು ಖರ್ಚು ಮಾಡಿ, 880 ಕೋಟಿ ಹಣವನ್ನು ದುರ್ಬಳಕೆ ಮಾಡಲು ಸಜ್ಜಾಗಿದೆ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಜಂಟಿ ಕ್ರಿಯಾ ಸಮಿತಿ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಂಟಿ ಕ್ರಿಯಾ ಸಮಿತಿಯ ಮುಖಂಡರು, ಕೇಂದ್ರ ಸರ್ಕಾರದ ಕಟ್ಟಡ ಮತ್ತಿತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಶ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ ಜಾರಿಗೆ ತರಲು ರಾಜ್ಯ ಸರ್ಕಾರ 2006 ರಲ್ಲಿ ನಿಯಮಗಳನ್ನು ರೂಪಿಸಿದೆ. ಸದರಿ ಕಾಯ್ದೆ ಹಾಗೂ ನಿಯಮಗಳನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ 18-1-2007 ರಿಂದ ಕರ್ನಾಟಕ ಕಟ್ಟಡ ಮತ್ತಿತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿದೆ. ಕಲ್ಯಾಣ ಮಂಡಳಿಯ ವತಿಯಿಂದ 12 ಸೇವಾ ಸವಲತ್ತುಗಳನ್ನು ಎಲ್ಲ ಬಾಬತ್ತುಗಳಿಗೂ ನೀಡಲಾಗುತ್ತಿದೆ. ಹಾಗೂ ಕಾಲ ಕಾಲಕ್ಕೆ ಇನ್ನೂ ಹೆಚ್ಚಿನ ಸವಲತ್ತುಗಳ ಬಗ್ಗೆ ಫಲಾನುಭವಿಗಳಿಗೆ ವಿಸ್ತರಿಸಲು ಅವಕಾಶವಿದೆ.
ಕಾಂಗ್ರೆಸ್ ಸರ್ಕಾರದಿಂದ ನಿರ್ಲಕ್ಷ್ಯ: ಕಾರ್ಮಿಕ ಕಲ್ಯಾಣಕ್ಕೋಸ್ಕರ ನಿಗದಿಪಡಿಸಿರುವ 12 ಯೋಜನೆಗಳನ್ನು ಬಿಟ್ಟು ಬೇರೆ ಕೆಲಸಗಳಿಗೆ ಮೀಸಲಿರುವ ಹಾಲಿ ಸುಮಾರು 2000 ಕೋಟಿ ರು.ಗಳಷ್ಟಿರುವ ಹಣವನ್ನು ಬಳಸುವಂತಿಲ್ಲ ಎಂದು ಕೇಂದ್ರ ಸರ್ಕಾರ 1996 ರಲ್ಲಿ ಜಾರಿ ಮಾಡಿರುವ ದಿ ಬಿಲ್ಡಿಂಗ್ ಅಂಡ್ ಕನ್ಸ್ಟ್ರಕ್ಷನ್ ವರ್ಕರ್ಸ್ ಆಕ್ಟ್ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾಯ್ದೆಗೆ ಕೇರ್ ಮಾಡದೆ ಹಣ ದುರ್ಬಳಕೆಗೆ ಸಿದ್ದತೆ ನಡೆಸಿದೆ. ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷರೂ ಆಗಿರುವ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಭೆ ಸೇರಿದ ಕಾರ್ಮಿಕ ಕಲ್ಯಾಣ ಮಂಡಳಿ 2013-14 ನೇ ಸಾಲಿನಲ್ಲಿ 880 ಕೋಟಿ ರು. ಹಣವನ್ನು ಬೇರೆ ಯೋಜನೆಗಳಿಗೆ ಬಳಸಲು ಮುಂದಾಗಿದ್ದಾರೆ. ಯೋಜನೆಗಳು ಇಂತಿವೆ: ಕಾರ್ಮಿಕರ ಮಕ್ಕಳ ವಸತಿ ಶಾಲೆಗೆ 180 ಕೋಟಿ ರು. ಕನ್ಸ್ಟ್ರಕ್ಷನ್ ಅಕಾಡೆಮಿಗೆ 250 ಕೋಟಿ ರು. ರಾಜ್ಯದ 9 ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಸತಿ ಯೋಜನೆಗೆ 130 ಕೋಟಿ ರು. ಕಾರ್ಮಿಕರ ಕಲ್ಯಾಣ ಮಂಟಪಕ್ಕೆ 120 ಕೋಟಿ ರು. ಕೌಶಲ್ಯ ಅಭಿವೃದ್ಧಿ ಕೇಂದ್ರಗಳಿಗೆ 200 ಕೋಟಿ ರು. ತೆಗೆದಿರಿಸಲಾಗಿದೆ. ಆಲ್ಲದೇ ಈ ಯೋಜನೆಯ ಅನುಷ್ಠಾನಕ್ಕೆ 113 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದೇ ಪಕ್ಷದ 4 ಮಂದಿ: ಈಗಾಗಲೇ 21-11-2013 ರಂದು ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳು, ಕಟ್ಟಡ ಕಾರ್ಮಿಕರ ಸೆಸ್ ಹಣವನ್ನು ಬೇರೆ ಬಾಬ್ತುಗಳಿಗೆ ಖರ್ಚು ಮಾಡಿರುವುದಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿವೆ. ಇನ್ನು ಮುಂದೆ ಹೀಗಾಗಬಾರದೆಂದು ತಿಳಿಸಿವೆ. ಆದರೂ ಸಚಿವ ಪರಮೇಶ್ವರ್ ನಾಯ್ಕ್ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ. ಜತೆಗೆ ಕಾರ್ಮಿಕ ಸಚಿವರು, ಇಲಾಖೆಯ ಅಧಿಕಾರಿಗಳು ಕೇವಲ ಸಂಘಟನೆಯಲ್ಲದ ಒಂದೇ ರಾಜಕೀಯ ಪಕ್ಷಕ್ಕೆ (ಕಾಂಗ್ರೆಸ್ ಪಕ್ಷ) ಸೇರಿದ 4 ಮುಖಂಡರನ್ನು ನೇಮಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಗೆ ಉದಾಹರಣೆಯಾಗಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ.
ಕೇವಲ 12 ಕೋಟಿ ಚಿಲ್ಲರೆ ಮಾತ್ರ ಖರ್ಚು: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 30-9-2013 ಕ್ಕೆ 1835 ಕೋಟಿ 44 ಲಕ್ಷ 84 ಸಾವಿರದ 706 ರು. ಗಳು ಸಂಗ್ರಹವಾಗಿದೆ. ಬಡ್ಡಿ ಸಹಿತ ಅಂದಾಜು 2000 ಕೋಟಿ ರು. ಗೂ ಹೆಚ್ಚು ಸಂಗ್ರಹವಾಗಿದೆ. ಈ ನಿಧಿಯನ್ನು ಕಟ್ಟಡ ಕಾರ್ಮಿಕರ ನಿಧಿ ಕಲ್ಯಾಣಕ್ಕೋಸ್ಕರ ನಿಗದಿಪಡಿಸಿರುವ 12 ಯೋಜನೆಗಳಿಗಷ್ಟೇ ವಿನಿಯೋಗಿಸಬೇಕೆಂದು ಕೇಂದ್ರ ಸರ್ಕಾರ 1996 ರಲ್ಲಿ ಜಾರಿ ಮಾಡಿರುವ ಬಿಲ್ಡಿಂಗ್ ಅಂಡ್ ಅದರ್ ಕನ್ಸ್ಟ್ರಕ್ಷನ್ ವರ್ಕರ್ಸ್ ಆಕ್ಟ್ನಲ್ಲಿ ಸ್ಪಷ್ಟವಾಗಿ ಹೇಳಿದೆ. ಈ 2000 ಕೋಟಿ ಹಣದಲ್ಲಿ ರಾಜ್ಯ ಸರ್ಕಾರ ಇಲ್ಲಿಯವರೆಗೂ 20,804 ನೋಂದಾವಣೆಯಾದ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳಡಿಯಲ್ಲಿ 12 ಕೋಟಿ, 45 ಲಕ್ಷದ 16 ಸಾವಿರದ 787 ರು. ಮಾತ್ರ ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿ ಯುಸಿಯ ಗಿರೀಶ್, ಶಶಿಕಾಂತ್, ಗೌಡರಂಗಪ್ಪ, ಅಶ್ವತ್ ನಾರಾಯಣ್, ಸಿಐಟಿಯುನ ಉಮೇಶ್, ಸುಬ್ರಹ್ಮಣ್ಯ, ಶ್ರೀಧರ್, ರಾಮಚಂದ್ರ ಇತರರು ಉಪಸ್ಥಿತರಿದ್ದರು.