ಸುದ್ದಿ ಸಂಕ್ಷೇಪ
ಬಹುಮುಖ ವ್ಯಕ್ತಿತ್ವದ ತೇಜಸ್ವಿ: ಶಶಿಭೂಷಣ್
ಚಿಕ್ಕನಾಯಕನಹಳ್ಳಿ: ಕನ್ನಡದ ಸಾಹಿತ್ಯ ಲೋಕದಲ್ಲಿ ಬಹುಮುಖ ವ್ಯಕ್ತಿತ್ವವುಳ್ಳವರ ಸಾಲಿನಲ್ಲಿ ಕಾರಂತರನಂತರದಲ್ಲಿ ತೇಜಸ್ವಿಯವರು ನಿಲ್ಲುತ್ತಾರೆ ಎಂದು ಉಪನ್ಯಾಸಕ ಬಿ.ಕೆ.ಶಶಿಭೂಷಣ್ ನುಡಿದರು. ಅವರು ಬೆಳಗುಲಿ ಶ್ರೀರಂಗನಾಥ ಪೌಢಶಾಲೆಯಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಲೋಹಿಯಾವಾದ, ಕಾರಂತರ ಶೋಧನೆ ಹಾಗೂ ಕುವೆಂಪು ಸಾಹಿತ್ಯ ಕೃಷಿಯ ದಟ್ಟ ಪ್ರಭಾವಕ್ಕೆ ಪೂರ್ಣಚಂದ್ರ ತೇಜಸ್ವಿ ಒಳಗಾಗಿದ್ದರು. ಅವರು ಬರೆದ ವೈವಿಧ್ಯಮಯ ಸಾಹಿತ್ಯ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯಮೂಲ್ಯ ಕೊಡುಗೆಗಳಾಗಿವೆ. ತೇಜಸ್ವಿಯವರು ಯಾವೇದ ಇಸಂಗೆ ಕಟ್ಟುಬಿದ್ದವರಲ್ಲ. ಕನ್ನಡಿಗರ ಮೆಚ್ಚಿನ ಸಾಹಿತಿಯಾಗಿ ಜನಮನದಲಿ ್ಲನೆಲೆಸಿದರು. ವೈಜ್ಞಾನಿಕ ಸಾಹಿತ್ಯವನ್ನು ಸರಳ ರೂಪದಲ್ಲಿ ಬರೆದವರಲ್ಲಿ ತೇಜಸ್ವಿ ಮೊದಲಿಗರು ಎಂದು ಅವರು ತಿಳಿಸಿದರು. ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ ಆಂತರಿಕವಾಗಿ ಅತ್ಯಂತ ಮೃದುತ್ವದ ಸಾಹಿತಿಯಾಗಿದ್ದ ತೇಜಸ್ವಿಯವರಿಗೆ ಪ್ರಕೃತಿಯ ಸಣ್ಣ ಅಂಶಗಳ ಬಗ್ಗೆಯೂ ಕುತೂಹಲ ಹಾಗೂ ಕಾಳಜಿ ಹೊಂದಿದ ಸೂಕ್ಷ್ಮಮನಸ್ಸಿನ ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನಯ್ಯ, ತೇಜಸ್ವಿ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ದೊಡ್ಡಮಟ್ಟದ ತುಲನಾತ್ಮಕ ಸಾಹಿತ್ಯ ಚರ್ಚೆಯಾಗಿ, ಅದರ ದಾಖಲಾತಿಯು ಪ್ರಸ್ತುತ ಅವಶ್ಯಕವಿದ್ದು, ಅದು ಉಪನ್ಯಾಸಕ ಶಸಿಭೂಷಣ್ ಅವರಿಂದ ಆಗಬೇಕಿದೆ ಎಂದರು. ಸಮಾರಂಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಧನಂಜಯಮೂರ್ತಿ ಮಾತನಾಡಿದರು. ಶಿಕ್ಷಕ ಧನಂಜಯ ಕಾರ್ಯಕ್ರಮ ನಿರೂಪಿಸಿದರು.
ಉದ್ಯಮ ಶೀಲತಾ ಜಾಗೃತಿ ಶಿಬಿರ
ತುಮಕೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ತುಮಕೂರು, ತಾಲೂಕು ಮಟ್ಟದ ಉದ್ಯಮ ಶೀಲತಾ ಜಾಗೃತಿ ಶಿಬಿರ ಹಾಗೂ ಕೈಗಾರಿಕಾ ವಿಚಾರ ಸಂಕಿರಣ ಮತ್ತು 2009-14ರ ಕೈಗಾರಿಕಾ ನೀತಿಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಡಿಸೆಂಬರ್ 10 ರಂದು ಬೆಳಿಗ್ಗೆ 11 ಗಂಟೆಗೆ ಶಿರಾ ಟೌನ್ ಸಂತೇಪೇಟೆಯ ಶ್ರೀ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಸಮಾರಂಭ ಉದ್ಘಾಟಿಸುವರು. ಶಿರಾ ತಾ.ಪಂ. ಅಧ್ಯಕ್ಷೆ ಗಂಗಮ್ಮ ಸಿದ್ದಹನುಮಯ್ಯ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಭಾಗವಹಿಸುವರು.
ವಾರ್ಷಿಕ ಕಾರ್ತೀಕ ದೀಪೋತ್ಸವ
ಚಿಕ್ಕಮಗಳೂರು: ನಗರದ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ವಾರ್ಷಿಕ ಕಾರ್ತೀಕ ದೀಪೋತ್ಸವ ನೂರಾರು ಭಕ್ತರ ನಡುವೆ ಸೋಮವಾರ ವೈಭವದಿಂದ ನಡೆಯಿತು. ದೀಪೋತ್ಸವದ ಅಂಗವಾಗಿ ದೇವಾಲಯದ ಅಧಿದೇವತೆಗಳಿಗೆ ಅಭಿಷೇಕ, ವಿಶೇಷಪೂಜೆ ಜರುಗಿತು. ಮಹಾಮಂಗಳಾರತಿ ನಂತರ ದೇವಾಲಯದ ಮುಂಭಾಗದಲ್ಲಿ ದೀಪೋತ್ಸವವನ್ನು ನಡೆಸಲಾಯಿತು. ಇದೇ ವೇಳೆ ಮಹಿಳೆಯರು ಮತ್ತು ಮಕ್ಕಳು ಮಳೆಯ ನಡುವೆ ದೇವಾಲಯದ ಆವರಣದಲ್ಲಿ ಹಣತೆ ದೀಪಗಳನ್ನು ಹಚ್ಚುವ ಮೂಲಕ ಸಂಭ್ರಮಿಸಿದರು.