ಒಳ ಮೀಸಲಾತಿ ಜಾರಿಗೆ ಆಗ್ರಹ
ತುಮಕೂರು: ಒಳ ಮೀಸಲಾತಿ ಸಂಬಂಧ ನ್ಯಾ.ಎ.ಜೆ. ಸದಾಶಿವ ಅವರು ನೀಡಿರುವ ವರದಿಯನ್ನು ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯದೆ ಅನುಷ್ಠಾನಗೊಳಿಸಬೇಕೆಂದು ಸ್ಲಂ ಜನಾಂದೋಲನಾ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಆಗ್ರಹಿಸಿದರು.
ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಅಂಗವಾಗಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದ ವತಿಯಿಂದ ಆಯೋಜಿಸಿದ್ದ ಜೈ ಭೀಮ್ ಕಾಮ್ರೇಡ್ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಸಾಕ್ಷ್ಯಚಿತ್ರ ವೀಕ್ಷಣೆಗೆ ಅಲೆಮಾರಿಗಳ ಯುವಕ ಸಂಘ, ವಿನಾಯಕ ನಗರದ ವೀರಾ ಭಾರತಿ ನಗರದ ಯುವಕ ಸಂಘದ ಪದಾಧಿಕಾರಿಗಳು. ಲೇಬರ್ ಕಾಲೋನಿಯ ಯುವ ಜನರು ಹಾಜರಿದ್ದರು. ಕೊಳಗೇರಿ ಸಮಿತಿಯ ಸೈಯದ್ ಅಲ್ತಾಪ್, ರಾಮಕ್ಕ, ಶಟ್ಟಾಳಯ್ಯ, ರಾಮಯ್ಯ, ರಾಜೇಂದ್ರ, ರಂಗರಾಜು, ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದ ಕೋಮಲ, ಶೃತಿ, ಗಾಯಿತ್ರಿ, ಲತಾ ಮತ್ತಿತರರು ಹಾಜರಿದ್ದರು.
ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ: ಜಗದೀಶ್
ಹುಳಿಯಾರು: ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮನೆಮನೆಗಳಲ್ಲಿ ನಡೆಯುತ್ತಿರುವ ಪಾಕ್ಷಿಕ ಕನ್ನಡ ಕವಿಕಾವ್ಯಗೋಷ್ಠಿ ಕಾರ್ಯಕ್ರಮದಲ್ಲಿ ಡಿ.ವಿ.ಗುಂಡಪ್ಪ ಅವರ 'ಮಂಕುತಿಮ್ಮನ ಕಗ್ಗ' ಕೃತಿ ಕುರಿತಂತೆ ಕಾವ್ಯಕಾರಣ ಸಂಬಂಧದ ಉಪನ್ಯಾಸದಲ್ಲಿ ಶಿಕ್ಷಕ ಹೆಚ್.ಸಿ.ಜಗದೀಶ್ 'ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ' ಯಂತೆ ಎಂದು ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ವಸಂತನಗರ ಬಡಾವಣೆಯಲ್ಲಿ ಶಿಕ್ಷಕರಾದ ಬಸವರಾಜು ಮತ್ತು ತ್ರೇಜಾವತಿ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಡಿವಿಜಿಯವರ ವ್ಯಕ್ತಿತ್ವ, ಅವರ ಜೀವನದಲ್ಲಿ ಎದುರಾದ ತೊಂದರೆಗಳನ್ನು ಮೆಟ್ಟಿ ನಿಂತ ಬಗೆ ಹಾಗೂ ಅವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವುದನ್ನು ಸವಿಸ್ತಾರವಾಗಿ ಬಿಂಬಿಸಿದರು. ಹುಳಿಯಾರು ಹೋಬಳಿ ಕಸಾಪ ಅಧ್ಯಕ್ಷ ಕೆ.ಯೋಗಮೂರ್ತಿ, ಶಿಕ್ಷಕ ಎನ್.ಮಿ.ಚಂದ್ರಯ್ಯ ಶಿಕ್ಷಕಿ ತ್ರೇಜಾವತಿ, ಶಿಕ್ಷಕ ಬಸವರಾಜು, ಭುವನೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.
ಇಂದು ರಾಜ್ಯೋತ್ಸವ
ಹುಳಿಯಾರು: ಹೋಬಳಿ ಜಯ ಕರ್ನಾಟಕ ಸಂಘಟನೆಯ 6ನೇ ವಾರ್ಷಿಕೋತ್ಸವ, ಜಯ ಕರ್ನಾಟಕ ಯುವ ಘಟಕ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭ ಶನಿವಾರ ನಡೆಯಲಿದೆ. ಬೆಳಗ್ಗೆ ಗ್ರಾಮದೇವತೆ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಧ್ವಜಾರೋಹಣ ಹಾಗೂ ಯುವ ಘಟಕದ ಉದ್ಘಾಟನೆ ನಡೆಯಲಿದೆ. ನಂತರ ನಾಲ್ಕು ಗಂಟೆಗೆ ಪಟ್ಟಣದ ರಾಮ್‌ಗೋಪಾಲ್ ನಾಸಿಕ್ ಡೋಲು, ಚಿಟ್ಟಿಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡವರಿಂದ ಸಲ್ಸ್ಕೃ ತಿಕ ಕಾರ್ಯಕ್ರಮಗಳು ಜರುಗಲಿವೆ. ಬೆಂಗಳೂರಿನ ರಾಜ್ ಮೆಲೋಡೀಸ್ ಅವರಿಂದ ಸಂಜೆ 7 ಗಂಟೆಗೆ ಪಟ್ಟಣದ ಎಂಪಿಎಸ್ ಶಾಲಾ ಮೈದಾನದಲ್ಲಿ ಡ್ಯಾನ್ಸ್ ಡ್ಯಾನ್ ಕಾರ್ಯಕ್ರಮ ನಡೆಯಲಿದೆ.
ಇಂದು ಗ್ರಾಮೀಣ ಜನಪದ ಉತ್ಸವ
ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹೊಯ್ಸಳ ಜಾನಪದ ಕಲಾ ಸಂಸ್ಥೆ, ಸಿಎಂಎಸ್‌ಎಸ್‌ಎಸ್ ಸೇವಾಸಂಸ್ಥೆ, ಚೌರಿಕೊಪ್ಪಲಿನ ಸ್ತ್ರೀಶಕ್ತಿ ಸಂಘ ಮತ್ತು ಸ್ವಸಹಾಯ ಸಂಘ, ಪುರುಷರ ಸಂಘದ ಸಂಯುಕ್ತಾಶ್ರಯದಲ್ಲಿ ಡಿ.7 ರಂದು ಮಧ್ಯಾಹ್ನ 1.30 ಕ್ಕೆ ಚೌರಿಕೊಪ್ಪಲು ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಗ್ರಾಮೀಣ ಜನಪದ ಉತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ ಕಲ್ಮೀನಾ ಕಾರ್ಯಕ್ರಮ ಉದ್ಘಾಟಿಸುವರು. ಫಾದರ್ ಫೆಲಿಕ್ಸ್ ಥಾಮಸ್ ರೊಜಾರಿಯೋ ಅಧ್ಯಕ್ಷತೆ ವಹಿಸುವರು. ಆರ್.ಪಿ. ವೆಂಕಟೇಶ ಮೂರ್ತಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಮೂರ್ತಪ್ಪ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿದೇಶಕ ವಿನೋದ್ ಚಂದ್ರ, ಯುವ ಸಬಲೀಕರಣ ಕ್ರೀಡಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಿವಾನಂದ, ಗಾಡೇನಹಳ್ಳಿಯ ಫಾದರ್ ಬಾಲರಾಜ್, ಗ್ರಾಮದ ವೆಂಕಟೇಶ್, ಶಾಂತಪ್ಪ, ಪ್ರಗತಿ ಸಂಸ್ಥೆಯ ಅಧ್ಯಕ್ಷ ಗ್ಯಾರಂಟಿ ರಾಮಣ್ಣ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಚ್.ಎಂ. ದಿನೇಶ್, ಮತ್ತು ಶ್ರೀಕಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವಾರ್ತಾ ಇಲಾಖೆ ವತಿಯಿಂದ ಬೀದಿ ನಾಟಕ ಪ್ರದರ್ಶನ ಮತ್ತು ಕೋಲಾಟ, ಜಾನಪದ ನೈತ್ಯ, ಕಂಸಾಳೆ ನೃತ್ಯ, ವೀರಗಾಸೆ, ಸುಗಗಿ ಕುಣಿತ, ಜಾನಪದ ಗೀತೆ, ಸೋಬಾನೆ ಪದ ನಾನಾ ಕಲಾ ಪ್ರದರ್ಶನಗಳು ನಡೆಯುತ್ತವೆ.