'ಕಲಿತ ಶಾಲೆ-ಜನ್ಮಭೂಮಿ ಋಣ ದೊಡ್ಡದು'
ಶಿರಾ: ಪ್ರತಿಯೊಬ್ಬ ವಿದ್ಯಾರ್ಥಿಯು ತಾನು ಕಲಿತ ಶಾಲೆ ಹಾಗೂ ಹುಟ್ಟಿದ ಜನ್ಮಭೂಮಿ ಋಣ ಮರೆಯಬಾರದು ಎಂದು ಉಪ ಪ್ರಾಂಶುಪಾಲ ಎನ್.ಈಶ್ವರಯ್ಯ ಕಿವಿಮಾತು ಹೇಳಿದರು.
ತಾಲೂಕಿನ ಪಟ್ಟನಾಯಕನಹಳ್ಳಿಯ ಎಸ್ಎಂಆರ್ ಪ್ರೌಢಶಾಲೆಯ 2007ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾಲ ಬದಲಾದಂತೆ ಸಂಬಂಧಗಳ ಮೌಲ್ಯಗಳು ನಶಿಸಿಹೋಗುತ್ತಿದೆ. ಮಾತ್ರವಲ್ಲ, ಮನುಷ್ಯ ಹಣದ ಹಿಂದೆ ಓಡುತ್ತಾ ತನ್ನತನ ಕಳೆದುಕೊಳ್ಳುತ್ತಿರುವ ಕಾಲದಲ್ಲಿ ತಾವು ಕಲಿತ ಶಾಲೆ ಹಾಗೂ ಶಿಕ್ಷಕರನ್ನು ನೆನಪಿಸಿಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಎಂ.ಆರ್. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹಿರಣ್ಮಯ್ಯ, ಇಂದಿನ ಕಾರ್ಯಕ್ರಮದಿಂದಾಗಿ ನನಗೂ ಶಾಲೆಯ ದಿನಗಳೂ ನೆನಪಾದವು ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿದ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಮತ್ತುಷ್ಟು ಸಾಧಿಸಲಿ ಎಂದರು. ಉಪನ್ಯಾಸಕ ಸುಂದರಬಾಬು, ಶಿಕ್ಷಕರಾದ ಎಸ್.ಡಿ.ಕೃಷ್ಣಪ್ಪ, ಬಿ.ಪಿ.ವಿಜಯಕುಮಾರ್, ಬಸವರಾಜು, ಕಾಂತರಾಜು, ಗೋಪಾಲಪ್ಪ, ಕೆ.ಪಿ.ಪುಟ್ಟರಾಜು, ವಿನಾಯಕ ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕರ ಸಂಘದ ಉಪಾಧ್ಯಕ್ಷ ಲಿಂಗರಾಜು, ಕಾರ್ಯದರ್ಶಿ ಮಧುಸೂಧನ್, ಪಿ.ಎ.ಕಿರಣ್, ಮಂಜುನಾಥ್, ಪಿ.ಎಸ್.ರಘು, ನಾಗಭೂಷಣ್, ನವೀನ್, ಶಿವಕುಮಾರ್ ಮತ್ತಿತರರು ಹಾಜರಿದ್ದರು.