ಕಲುಷಿತ ನೀರು: ಪ್ರತಿಭಟನೆ
ಕ.ಪ್ರ.ವಾರ್ತೆ ಟಿ ಸಕಲೇಶಪುರ ಟಿ ಡಿ. 6
ಶುದ್ಧ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ಗಾಣದಹೊಳೆ ಗ್ರಾಮಸ್ಥರು ಹೆಬ್ಬಸಾಲೆ ಗ್ರಾಪಂ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು.
ಹೆಬ್ಬಸಾಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಾಣದಹೊಳೆ ಹಾಗೂ ಮಾವಿನಕೊಲು ಗ್ರಾಮದಲ್ಲಿ ಸುಮಾರು ಇನ್ನೂರು ಕುಟುಂಬಗಳು ವಾಸಿಸುತ್ತಿದ್ದು ಇಲ್ಲಿಗೆ ಪೊರೈಸಲಾಗುತ್ತಿರುವ ಕುಡಿಯುವ ನೀರು ಕೆಸರಿನಿಂದ ಕೊಡಿದ್ದು ಕುಡಿಯುವ ನೀರಿನಲ್ಲಿ ಕೈಕಾಲು ತೊಳೆಯಲು ಅಸಾಧ್ಯವಾಗಿದೆ.
ನೀರಿನ ಟ್ಯಾಂಕ್ ಹಾಗೂ ಕುಡಿಯುವ ನೀರು ಸರಬರಾಜುಮಾಡುವ ಕೊಳವೆ ಬಾವಿಯನ್ನು ಸ್ವಚ್ಛ ಮಾಡದಿರುವುದು ಈ ದುಃಸ್ಥಿತಿಗೆ ಕಾರಣವಾಗಿದೆ. ಈ ಕಲುಷಿತ ನೀರನ್ನೇ ಶಾಲೆಯ ಬಿಸಿ ಊಟಕ್ಕೆ ಬಳಸಿಕೊಳ್ಳುತ್ತಿರುವುದರಿಂದ ಮಕ್ಕಳು ಅನರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದ ಪ್ರತಿಭಟನಕಾರರು ಈ ಸಮಸ್ಯೆಯ ಬಗ್ಗೆ ಸದಸ್ಯ ರತ್ನಮ್ಮನವರಿಗೆ ಹೇಳಿದರೆ ಉಡಾಫೆಯಿಂದ ಮಾತನಾಡುತ್ತಾರೆ ಎಂದು ಆರೋಪಿಸಿದರು.
ಅಧ್ಯಕ್ಷ, ಪಿಡಿಒಗೆ ತರಾಟೆ: ಗ್ರಾಪಂ ಮುಂಬಾಗ ಪ್ರತಿಭಟನೆ ನಡೆಸಲಾಗುತ್ತಿರುವ ವಿಚಾರ ತಿಳಿದು ಕುಡಿಯುವ ನೀರಿನ ಸಮಸ್ಯೆ ತಲೆದೊರಿರುವ ಗಾಣದಹೊಳೆ ಗ್ರಾಮಕ್ಕೆ ಬೇಟಿ ನೀಡಿದ್ದ ಹೆಬ್ಬಸಾಲೆ ಗ್ರಾಪಂ ಅಧ್ಯಕ್ಷ ಅಶೋಕ್ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗ್ರಾಮದ ಮಹಿಳೆಯರ ಆಕ್ರೋಶಕ್ಕೆ ತುತ್ತಾದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು ಚುನಾವಣೆಯ ವೇಳೆ ಮಾತ್ರ ಗ್ರಾಮಕ್ಕೆ ಬೇಟಿ ನೀಡುವ ಇವರಿಗೆ ಗ್ರಾಮದ ಸಮಸ್ಯೆಯ ಬಗ್ಗೆ ಅರಿವಿಲ್ಲ ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಗ್ರಾಮಸ್ಥರ ಮನವಿ ಇವರಿಗೆ ಕಾಣದಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಅಶೋಕ್ ಶೀಘ್ರವೆ ಶುದ್ಧ ಕುಡಿಯುವ ನೀರು ಒದಗಿಸುವ ಭರವಸೆ ನೀಡುವ ಮೂಲಕ ಆಕ್ರೋಶಗೊಂಡಿದ್ದ ಮಹಿಳೆಯರನ್ನು ಸಮಾಧಾನಗೊಳಿಸಿದರು.