ಕುಡಿವ ನೀರಲ್ಲಿ ಕಲ್ಮಶ: ಆಕ್ರೋಶ
ಕುಣಿಗಲ್: ಪಟ್ಟಣದ 12ನೇ ವಾರ್ಡ್‌ನಲ್ಲಿ ದೊಡ್ಡಕೆರೆ ನೀರನ್ನು ಶುದ್ಧೀಕರಿಸದೆ ಕುಡಿಯಲು ಹಾಗೆ ಪೂರೈಕೆ ಮಾಡಿದ ಪುರಸಭೆ ಕ್ರಮ ಖಂಡಿಸಿದ ಸದಸ್ಯ ರಂಗಸ್ವಾಮಿ, ಕಲುಷಿತನೀರಿನ ಸಮೇತ ಪುರಸಭೆ ಮುಖ್ಯಾಧಿಕಾರಿ ಕೊಠಡಿಗೆ ತೆರಳಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪಟ್ಟಣದ ದೊಡ್ಡಕೆರೆಯಲ್ಲಿ ಸಂಗ್ರಹವಾದ ನೀರನ್ನು ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯಡಿಯಲ್ಲಿ ಮಾಸಿಕ ಲಕ್ಷಾಂತರ ರುಪಾಯಿ ವೆಚ್ಚಮಾಡಿ ಶುದ್ಧೀಕರಿಸಿ ಪಟ್ಟಣದ ಜನತೆಗೆ ಪೂರೈಕೆ ಮಾಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಶುಕ್ರವಾರ ಪಟ್ಟಣದ 12ನೇ ವಾರ್ಡ್‌ನ ಬಸ್‌ನಿಲ್ದಾಣ, ಎಸ್‌ಆರ್‌ಎಸ್‌ಎಚ್‌ಎಸ್ ಕ್ವಾಟ್ರಸ್, ವಾನಂಬಾಡಿ ಕಾಲೋನಿ ಸೇರಿದಂತೆ ವಿವಿಧ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗಿದ್ದು, ಸದರಿ ನೀರು ಪಾಚಿ ಯುಕ್ತ, ಕೆಟ್ಟ ವಾಸನೆಯಂದ ಕೂಡಿತಲ್ಲದೆ, ದೊಡ್ಡಕೆರೆಯ ನೀರನ್ನೇ ಹೊಲುತ್ತಿದ್ದ ಕಾರಣ, ನಾಗರಿಕರು ಆ ವಾರ್ಡ್‌ನ ಸದಸ್ಯ ರಂಗಸ್ವಾಮಿಯ ಕರೆದು ನಲ್ಲಿಯಲ್ಲಿ ಬರುತ್ತಿದ್ದ ನೀರನ್ನು ಬಕೆಟ್‌ನಲ್ಲಿ ಹಿಡಿದು ತೋರಿಸಿದರು.
ನಾಗರಿಕರ ಆಕ್ರೋಶಕ್ಕೆ ಗುರಿಯಾದ ರಂಗಸ್ವಾಮಿ, ಕಲುಷಿತ ನೀರಿನ ಬಕೆಟ್ ಸಮೇತ ನೇರವಾಗಿ ಮುಖ್ಯಾಧಿಕಾರಿ ಕೊಠಡಿಗೆ ತೆರಳಿ, ಮುಖ್ಯಾಧಿಕಾರಿ ಅನ್ನದಾನಿಯವರಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟರು.
ಅಧಿಕಾರಿಗಳ ವಿರುದ್ಧ ದೂರು: ಇದೇ ಪರಿಸ್ಥಿತಿ ಹಲವು ದಿನಗಳಿಂದಲೂ ಇದ್ದು ಹಲವಾರು ಬಾರಿ ಮನವಿ ಮಾಡಿದರೂ ಪುರಸಭೆಯ ನೀರು ಪೂರೈಕೆ ವಿಭಾಗದ ಸಿಬ್ಬಂದಿ ತಲೆಕೆಡಿಸಿಕೊಳ್ಳುತ್ತಿಲ್ಲ, ಜನತೆ ನೆಮ್ಮದಿಯಿಂದ ನೀರು ಕುಡಿಯದ ಸ್ಥಿತಿಗೆ ತಂದಿರುವ ನೀರು ಪೂರೈಕೆ ವಿಭಾಗದ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯರಾದ ಕೆಂಪಣ್ಣ, ಅರಣ್ ಕುಮಾರ್, ಮಾಜಿ ಸದಸ್ಯ ನಾರಾಯಣ ಸಹಮತ ವ್ಯಕ್ತಪಡಿಸಿ ಕೂಡಲೇ ನೀರು ಪೂರೈಕೆ ವಿಭಾಗದ ಸಿಬ್ಬಂದಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.
ಮುಖ್ಯಾಧಿಕಾರಿ ಅನ್ನದಾನಿ ಪ್ರತಿಕ್ರಿಯೆ ನೀಡಿ, ತಾವೇ ಖುದ್ದು ನೀರು ಪೂರೈಕೆ ವ್ಯವಸ್ಛೆ ಪರಿಶೀಲಿಸುವುದಾಗಿ, ಸಮರ್ಪಕ ಹಾಗೂ ಶುದ್ದ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು.