ಪಡಿತರ ಪರಿಶೀಲನೆಗೆ ವಾರದ ಗಡುವು
ತುಮಕೂರು: ಪಡಿತರ ಚೀಟಿ ಕೋರಿಕೆ ಅರ್ಜಿಗಳ ಪರಿಶೀಲನೆ ಕಾರ್ಯಕ್ಕೆ ಒಂದು ವಾರದ ಗಡುವು ನೀಡಲಾಗಿದೆ. ಈ ಕೆಲಸ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳದೇ ಹೋದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಎಚ್ಚರಿಕೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅನ್ನಭಾಗ್ಯ ಯೋಜನೆ ಪರಿಣಾಮಕಾರಿ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನವೆಂಬರ್ನಲ್ಲೇ ಮುಗಿಯಬೇಕಿತ್ತು: ಸರ್ಕಾರದ ಆದೇಶದಂತೆ ನವೆಂಬರ್ ತಿಂಗಳಲ್ಲಿ ಪರಿಶೀಲನೆ ಕಾರ್ಯ ಮುಗಿಯಬೇಕಿತ್ತು. ಆದರೆ ಡಿಸೆಂಬರ್ ಬಂದರೂ ಕೆಲಸ ಮುಗಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿಗಳಲ್ಲಿನ ಕೆಲಸದ ಒತ್ತಡದಲ್ಲಿ ವಿಳಂಬವಾಗಿರುವ ವಿವರಣೆಯನ್ನು ತಿರಸ್ಕರಿಸಿದರು.
ಸಮಗ್ರ ಪರಿಶೀಲನೆಗೆ ಸೂಚನೆ: ಪ್ರತ್ಯೇಕ ವಾಸವಿರುವ ಕುಟುಂಬವನ್ನು ಗಣನೆಗೆ ತೆಗೆದುಕೊಂಡು ಒಂದು ಕುಟುಂಬಕ್ಕೆ ಒಂದು ಪಡಿತರ ಚೀಟಿ ದೊರಕುವಂತೆ, ಬಹು ಪಡಿತರ ಚೀಟಿಗಳನ್ನು ಪಡೆದಿರುವ ಕುಟುಂಬಗಳ ಪಡಿತರ ಚೀಟಿಗಳನ್ನು ರದ್ದುಪಡಿಸುವ ಬಗ್ಗೆ ಪರಿಶೀಲಿಸಲು ಸೂಚಿಸಿದರು.
ಅಧಿಕಾರಿಗಳ ನೇಮಕ: ತುಮಕೂರು ಜಿಲ್ಲೆಯಲ್ಲಿ ಹೊಸ ಆನ್ಲೈನ್ ಮೂಲಕ ಬಿ.ಪಿ.ಎಲ್. ಮತ್ತು ಎ.ಪಿ.ಎಲ್. ಪಡಿತರ ಚೀಟಿ ಕೋರಿಕೆ ಅರ್ಜಿಗಳನ್ನು ಪರಿಶೀಲನೆ ಪ್ರಗತಿ ಕಾರ್ಯ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ಅರ್ಜಿಗಳನ್ನು ಪರಿಶೀಲಿಸಲು ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪುರಸಭೆ, ನಗರಸಭೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಕಂದಾಯ ಅಧಿಕಾರಿ ಸೇರಿ ಒಟ್ಟು 898 ನ್ಯಾಯ ಬೆಲೆ ಅಂಗಡಿಯ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಖುದ್ದು ಪರಿಶೀಲನೆಗೆ ಆದೇಶ: ಅನ್ನಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಪರಿಶೀಲಿಸುವ ಬಗ್ಗೆ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಎಲ್ಲ ನೋಡಲ್ ಅಧಿಕಾರಿಗಳು ಪಡಿತರ ವಸ್ತುಗಳ ವಿತರಣೆಯನ್ನು ಪರಿಶೀಲಿಸುವುದರ ಜೊತೆಗೆ ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ನೀಡಲು ಶಿಫಾರಸ್ಸು ಮಾಡಿರುವ ಅರ್ಜಿಗಳಲ್ಲಿ ಕನಿಷ್ಠ 5ರಷ್ಟು ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಕುಟುಂಬಕ್ಕೆ ಮಾತ್ರ ಬಿಪಿಎಲ್
ಪಡಿತರ ಚೀಟಿ ನೀಡಲು ಶಿಫಾರಸ್ಸು ಆಗಿರುವ ಬಗ್ಗೆ ಖುದ್ದಾಗಿ ಅರ್ಜಿದಾರರ ಕುಟುಂಬದ ವಾಸಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿ, ಆಹಾರ ನಿರೀಕ್ಷಕರು, ಶಿರಸ್ತೇದಾರರೊಂದಿಗೆ ಭೇಟಿ ನೀಡಿ ಪರಿಶೀಲಿಸಲು ಸೂಚಿಸಲಾಯಿತು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು, ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ದೂರುಗಳ ವಿವರ
ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರ ಕಚೇರಿಯಲ್ಲಿರುವ ಸಹಾಯವಾಣಿ ಮೂಲಕ ಎಷ್ಟು ದೂರುಗಳು ಬಂದಿವೆ. ಸದರಿ ದೂರುಗಳನ್ನು ನೇರವಾಗಿ ಆಯಾ ತಾಲೂಕಿನ ಆಹಾರ ನಿರೀಕ್ಷಕರಿಗೆ ಆಹಾರ ಶಿರಸ್ತೇದಾರರಿಗೆ ತಿಳಿಸುವುದಲ್ಲದೆ, ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೂ ದೂರುಗಳ ವಿವರ ತಿಳಿಸಲು ಸೂಚಿಸಲಾಯಿತು.
ಪಾವಗಡ ತಾಲೂಕಿನ ನೋಡಲ್ ಅಧಿಕಾರಿಗಳು ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ನವೆಂಬರ್ ತಿಂಗಳ ಕೋಟಾ ಪಡಿತರ ಸೀಮೆಎಣ್ಣೆ ಡಿಸೆಂಬರ್ ಮೊದಲ ವಾರ ಬಂದರೂ ವಿತರಣೆಯಾಗದಿರುವುದನ್ನು ಗಮನಿಸಿ, ಸ್ಥಳದಲ್ಲಿಯೇ ಹಾಜರಿದ್ದು ಪಡಿತರ ಚೀಟಿದಾರರಿಗೆ ತಮ್ಮ ಸಮಕ್ಷಮ ಪಡಿತರ ಸೀಮೆಎಣ್ಣೆ ವಿತರಿಸಲು ಸೂಚಿಸಿದರು.
ಪ್ರತಿ ತಿಂಗಳು ಪಡಿತರ ಚೀಟಿಗಳು ನ್ಯಾಯ ಬೆಲೆ ಅಂಗಡಿಗೆ ಸೇರ್ಪಡೆಯಾಗಿರುವ ಬಗ್ಗೆ ಪಡಿತರ ಚೀಟಿಗಳ ಚೆಕ್ ಲಿಸ್ಟ್ ಪಡೆದುಕೊಂಡು ಪಡಿತರ ವಿತರಣೆಗೆ ಸಂಬಂಧಿಸಿದಂತೆ ಹೊಸ ಫಲಾನುಭವಿಗಳು ಸೇರ್ಪಡೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಯಿತು.
ಸಕಾಲ ಯೋಜನೆಯಂತೆ ಜಿಲ್ಲೆಯಲ್ಲಿ ನೇಮಿಸಲಾದ ದತ್ತಾಂಶ ನಮೂದಕರ ಸೇವೆಯನ್ನು ಆಹಾರ ಇಲಾಖೆಯಲ್ಲಿ ಬಳಸಿಕೊಳ್ಳಲು ಸೂಚಿಸಲಾಗಿದ್ದರೂ ಸದರಿ ದತ್ತಾಂಶ ನಮೂಕದಕರ ಸೇವೆಯನ್ನು ಬಳಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ದತ್ತಾಂಶ ನಮೂದನೆಗೆ ಹಾಗೂ ಪಡಿತರ ಚೀಟಿಗಳ ಮುದ್ರಣ ಕಾರ್ಯವನ್ನು ಸಕಾಲ ಯೋಜನೆಯ ದತ್ತಾಂಶ ನಮೂದಕರವರಿಂದ ಆಹಾರ ನಿರೀಕ್ಷಕರು, ಆಹಾರ ಶಿರಸ್ತೇದಾರರು ಪಡೆಯಲು ಸೂಚಿಸಲಾಯಿತು.