ಮನೆಗಳವು: ಮಹಿಳಾ ಆರೋಪಿ ಬಂಧನ
ತುಮಕೂರು: ಸಾಲಗಾರರ ಬಾಧೆ ತಾಳಲಾರದೆ ಸಾಲ ತೀರಿಸಲು ಸ್ನೇಹಿತೆಯ ಮನೆಯ ಬೀರುವಿನಲ್ಲಿದ್ದ ರು. 1 ಲಕ್ಷದ 50 ಸಾವಿರ ಬೆಲೆ ಬಾಳುವ ಸುಮಾರು 50 ಗ್ರಾಂ ಚಿನ್ನದ ಆಭರಣ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಚೇಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೀರೂರಿನ ರಾಧಾ ಎಂಬಾಕೆ ತನ್ನ ಸಂಸಾರ ಬಡತನದಿಂದ ಅತೀವ ತೊಂದರೆ ಅನುಭವಿಸುತ್ತಿದ್ದು, ಸಾಲಗಾರರ ಬಾಧೆಯನ್ನು ತಾಳಲಾರದೆ ಸಾಲವನ್ನು ತೀರಿಸಲು ಕಳ್ಳತನ ಮಾಡಬೇಕೆಂದು ನಿರ್ಧರಿಸಿ, ಸಿ. ನಂದಿಹಳ್ಳಿಯ ತನ್ನ ಸ್ನೇಹಿತೆ ಸರಸ್ವತಿಬಾಯಿ
ಮನೆಯ ಬೀರುವಿನಲ್ಲಿದ್ದ ಸುಮಾರು 50 ಗ್ರಾಂ ತೂಕದ ಚಿನ್ನ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಸರಸ್ವತಿಬಾಯಿ ಆರೋಪಿ ಮೇಲೆ ಅನುಮಾನಗೊಂಡು ದೂರು ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಚೇಳೂರು ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಕರಡಿ ದಾಳಿ; ಮಹಿಳೆ ಸೇರಿ ಐವರಿಗೆ ಗಾಯ
ಚಿಕ್ಕನಾಯಕನಹಳ್ಳಿ: ತಾಲೂಕಿನ ಹುಳಿಯಾರು ಹೋಬಳಿಯಲ್ಲಿ ಕರಡಿ ಕಚ್ಚಿದ ಪರಿಣಾಮ, ಮಹಿಳೆ ಸೇರಿ ಐದು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಪಟೂರು ಉಪ ವಿಭಾಗದ ಅರಣ್ಯಾಧಿಕಾರಿ ನಾಗೇಂದ್ರ ತಿಳಿಸಿದ್ದಾರೆ. ಡಿ.6ರಂದು ಬುಕ್ಕಾಪಟ್ಣ ವಲಯ ವ್ಯಾಪ್ತಿಯ ಹುಳಿಯಾರು ಹೋಬಳಿಯ ಕಲ್ಲಹಳ್ಳಿ ಗ್ರಾಮದ ಹೊರ ವಲಯದಲ್ಲಿ ಭಾರೀ ಗಾತ್ರದ ಕರಡಿಯೊಂದು ಕಚ್ಚಿದ ಪರಿಣಾಮ, ಮೂವರಿಗೆ ತೀವ್ರ ಗಾಯಗಾಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದರಿ ಗ್ರಾಮದ ಜನ ಕರಡಿಯನ್ನು ಅಟ್ಟಾಡಿಸಿ ಓಡಿಸಿದಾಗ ಪಕ್ಕದ ಬಾಲದೇವರಹಟ್ಟಿ ಕೃಷ್ಣಪ್ಪ ಎಂಬುವರ ಮನೆಗೆ ನುಗ್ಗಿದ ಕರಡಿ ಮನೆಯಲ್ಲಿ ದಂಪತಿಗಳಾದ ಕೃಷ್ಣಪ್ಪ ಮತ್ತು ದೊಡ್ಡಮ್ಮ ಎಂಬವರನ್ನು ಮಾರಣಾಂತಿಕವಾಗಿ ಕಚ್ಚಿದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರಡಿ ಗಾತ್ರದಲ್ಲಿ ದೊಡ್ಡದಿದ್ದು, ಸಾಧಾರಣವಾದ ಬಲೆಯಿಂದ ಹಿಡಿಯಲು ಸಾಧ್ಯವಾಗದ ಕಾರಣ ಚಿಕ್ಕನಾಯಕನಹಳ್ಳಿ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಮನೆಯಲ್ಲಿ ಕೂಡಿಹಾಕಿ ಬೆಂಗಳೂರಿನಿಂದ ಕಾಡುಪ್ರಾಣಿಗಳನ್ನು ಹಿಡಿಯುವಲ್ಲಿ ನುರಿತ ಸಿಬ್ಬಂದಿ ಕರೆಸುವ ಪ್ರಯತ್ನದಲ್ಲಿದ್ದು, ಹೊರಗೆ ಬೀಡುಬಿಟ್ಟಿದ್ದಾರೆ. ಹುಳಿಯಾರು ಠಾಣೆ ಪೊಲೀಸರೂ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.